ಅಭಿನವ ಅನ್ನದಾನ ಸ್ವಾಮಿಗಳದ್ದು ಶೈಕ್ಷಣಿಕ ಪವಾಡ: ಸದಾಶಿವ ಶ್ರೀಗಳು

KannadaprabhaNewsNetwork | Published : Jan 17, 2024 1:46 AM

ಸಾರಾಂಶ

ಹಾಲಕೆರೆಯ ಶ್ರೀಮಠದಿಂದ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಲಿಂ. ಡಾ. ಅಭಿನವ ಅನ್ನದಾನ ಸ್ವಾಮಿಗಳ ಶೈಕ್ಷಣಿಕ ಕ್ರಾಂತಿಯನ್ನಲ್ಲ, ಬದಲಾಗಿ ಶಿಕ್ಷಣದ ಪವಾಡವನ್ನೆ ಮಾಡಿದ್ದಾರೆ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು ಹೇಳಿದರು.

ನರೇಗಲ್ಲ: ಹಾಲಕೆರೆಯ ಶ್ರೀಮಠದಿಂದ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಲಿಂ. ಡಾ. ಅಭಿನವ ಅನ್ನದಾನ ಸ್ವಾಮಿಗಳ ಶೈಕ್ಷಣಿಕ ಕ್ರಾಂತಿಯನ್ನಲ್ಲ, ಬದಲಾಗಿ ಶಿಕ್ಷಣದ ಪವಾಡವನ್ನೆ ಮಾಡಿದ್ದಾರೆ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮಿಗಳು ಹೇಳಿದರು.

ಅವರು ಸಮೀಪದ ಹಾಲಕೆರೆಯಲ್ಲಿ ಹಿರಿಯ ಅನ್ನದಾನ ಸ್ವಾಮಿಗಳ ೧೧೧ನೇ ಪುಣ್ಯ ಸ್ಮರಣೋತ್ಸವ ಮತ್ತು ಕಾಯಕಯೋಗಿ ಲಿಂ. ಡಾ. ಅಭಿನವ ಅನ್ನದಾನ ಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೋತ್ಸವದ ನಿಮಿತ್ತ ನಡೆದ ಅಕ್ಷರ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವದ ಆನಂತರ ನಡೆದ ಶಿವಾನುಭವದಲ್ಲಿ ಅವರು ಆಶೀರ್ವಚನ ನೀಡಿದರು. ಹಾಲಕೆರೆ ಮಠದಲ್ಲಿ ಯಾವಾಗಲೂ ಹೊಸತನದ ಹೊಳಪು ಇರುತ್ತದೆ. ಸಮಾಜದ ಉದ್ಧಾರಕ್ಕಾಗಿ ಶ್ರೀಮಠದ ಕೊಡುಗೆ ಅಪಾರವಾಗಿದೆ. ಭಕ್ತರ ಅಜ್ಞಾನ, ಅಂಧಕಾರ ಹೊಡೆದೋಡಿಸುವಲ್ಲಿ ಶ್ರೀಮಠದ ಪಾತ್ರ ಅನನ್ಯವಾಗಿದೆ. ಶ್ರೀಮಠದ ಪೂಜ್ಯರು ಶೈಕ್ಷಣಿಕ ರಂಗದಲ್ಲಿ ಎಂದಿಗೂ ಕ್ರಾಂತಿಯನ್ನೆ ಮಾಡುತ್ತ ಬಂದಿದ್ದಾರೆ. ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿ ಮಾಡದೆ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬಿತ್ತುವ ಕೆಲಸವಾಗಬೇಕಿದೆ. ಶಾಲೆ ಕಲಿತ ಮಕ್ಕಳು ತಮ್ಮ ತಂದೆ-ತಾಯಿಗಳ ಸೇವೆ ಮಾಡಲು ಮುಂದಾಗಬೇಕೆ ಹೊರತು ಅವರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಕಾರ್ಯಕ್ಕೆ ಮುಂದಾಗಬಾರದು ಎಂದು ಹೇಳಿದರು.

ಹಾಲಕೆರೆಯಲ್ಲಿ ಹೊತ್ತಿರುವ ಈ ಅಕ್ಷರ ಜಾತ್ರೆಯ ಕಿಡಿ ಜಗತ್ತಿನಾದ್ಯಂತ ಹರಡಬೇಕು. ಲಿಂ. ಡಾ. ಅಭಿನವ ಅನ್ನದಾನ ಸ್ವಾಮಿಗಳು ದೊಡ್ಡ ಕನಸುಗಾರರಾಗಿದ್ದರು. ತಮ್ಮ ಕನಸುಗಳನ್ನು ಸಾಕಾರಗೊಳಿಸುವ ಸಂಕಲ್ಪ ಶಕ್ತಿ ಅವರಲ್ಲಿತ್ತು. ಹೀಗಾಗಿಯೆ ಈ ಮಠದ ಕೀರ್ತಿ ದಶ ದಿಕ್ಕುಗಳಲ್ಲಿ ಹರಡುವಂತಾಗಿದೆ ಎಂದರು. ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ಆಶೀರ್ವಚನ ನೀಡಿ, ಹಾಲಕೆರೆಯಲ್ಲಿ ಜಾತ್ರೆಯ ಉತ್ಸವ ನಡೆದಿಲ್ಲ, ಬದಲಾಗಿ ಉತ್ಸಾಹದ ಜಾತ್ರೆ ನಡೆದಿದೆ. ಅಕ್ಷರ ಜಾತ್ರೆಯ ಹೆಸರಿನಲ್ಲಿ ನಡೆದಿರುವ ಈ ಜಾತ್ರೆಯ ಹಿನ್ನೆಲೆಯಲ್ಲಿ ಮುಪ್ಪಿನ ಬಸವಲಿಂಗ ಸ್ವಾಮಿಗಳು ಒಂದು ದೊಡ್ಡ ಕನಸನ್ನೇ ಇರಿಸಿಕೊಂಡಿದ್ದಾರೆ. ಈ ಮಠದ ಪೀಠಾಧಿಪತಿಗಳು ಯಾವಾಗಲೂ ಭಕ್ತ ವತ್ಸಲರಾಗಿದ್ದು, ಅವರ ಉದ್ಧಾರಕ್ಕಾಗಿ ಯಾವಾಗಲೂ ವಿಶೇಷ ಕಾರ್ಯಕ್ರಮಗಳನ್ನೆ ಕೊಡುತ್ತ ಬಂದಿದ್ದಾರೆ. ಹಾಲಕೆರೆಯೆಂಬ ಪುಟ್ಟ ಹಳ್ಳಿಯಲ್ಲಿ ಶತಶತಮಾನಗಳಿಂದ ಸದ್ಗುರುಗಳ ಬಳ್ಳಿ ಬೆಳೆಯುತ್ತ ಬಂದಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮಿಗಳು ಆಶೀರ್ವಚನ ನೀಡಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸೃಷ್ಟಿಯೊಂದಿಗೆ ಹೇಗೆ ಬದುಕಬೇಕು ಎಂಬ ಸಂದೇಶವನ್ನು ನೀಡುವುದೇ ಅಕ್ಷರ ಜಾತ್ರೆಯ ಮೂಲ ಉದ್ದೇಶ. ಬರೀ ಅಕ್ಷರಗಳ ಓದು, ಬರಹಕ್ಕೆ ಸೀಮಿತವಾಗಿರದೆ ಎಲ್ಲೆಲ್ಲಿ ಕ್ಷರ ಅಂದರೆ ನಾಶ ಇದೆಯೋ ಅದೆಲ್ಲವನ್ನೂ ಅಕ್ಷರವನ್ನಾಗಿಸುವ ಯೋಜನೆಯನ್ನು ಇಟ್ಟುಕೊಂಡೆ ಈ ಜಾತ್ರೆಗೆ ಅಕ್ಷರ ಜಾತ್ರೆ ಎಂದು ಹೆಸರಿಡಲಾಗಿದೆ. ಮುಂದೆ ಅಕ್ಷರ ಭಾರತ ಪ್ರತಿಷ್ಠಾನ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಆ ಮೂಲಕ ಅಕ್ಷರದ ಅನೇಕ ಚಟುವಟಿಕೆ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದರು.ಸಿಂಧನೂರಿನ ಡಾ. ಬಿ.ಎನ್. ಪಾಟೀಲ ಮಾತನಾಡಿದರು. ವಯೋಲಿನ್ ವಾದಕ ನಾರಾಯಣ ಹಿರೆಕೊಳಚೆ ಅವರ ವಯೋಲಿನ್, ಹನುಮಂತ ಕೊಡಗಾನೂರ ಅವರ ತಬಲಾ ಸಾಥ್, ದ್ಯಾಮಣ್ಣ ಬಡಿಗೇರ ಮತ್ತು ಸಂಗಡಿಗರ ಸಂಗೀತ ಭಕ್ತರ ಮನ ಸೂರೆಗೊಂಡವು.

ಈ ವೇಳೆ ವಿಜಯಪುರದ ನಿವೃತ್ತ ಎಂಜಿನಿಯರ್ ಆರ್.ಬಿ. ಪಾಟೀಲ, ಮುಖಂಡ ಸಿದ್ದಣ್ಣ ಬಂಡಿ ಉಪಸ್ಥಿತರಿದ್ದರು.

ಉಪನ್ಯಾಸಕ ಮುತ್ತಣ್ಣ ಹೊನವಾಡ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಮೇಟಿ ಸ್ವಾಗತಿಸಿದರು. ಉಪನ್ಯಾಸಕ ಎಫ್.ಎನ್. ಹುಡೇದ ವಂದಿಸಿದರು.

Share this article