ದೇವರಿಗೆ ಮದ್ಯದ ಅಭಿಷೇಕ, ಸಿಗರೇಟಿನ ಆರತಿ

KannadaprabhaNewsNetwork |  
Published : Mar 18, 2024, 01:50 AM IST
ಕಾರವಾರದ ಖಾಫ್ರಿ ದೇವರ ಜಾತ್ರೆಯ ಅಂಗವಾಗಿ ಭಕ್ತರು ದರ್ಶನ ನಡೆಯುತ್ತಿರುವುದು. | Kannada Prabha

ಸಾರಾಂಶ

ದೇವಸ್ಥಾನಕ್ಕೆ ಬರುವ ಭಕ್ತರು ಹೂವು, ಹಣ್ಣು- ಕಾಯಿ ಜತೆಗೆ ಮದ್ಯ, ಸಿಗರೇಟ್‌ಗಳನ್ನು ತಂದಿದ್ದರು. ಅದನ್ನು ಅರ್ಚಕರು ಖಾಫ್ರಿ ದೇವರಿಗೆ ಅಭಿಷೇಕ, ಆರತಿ ಮಾಡಿದರು.

ಕಾರವಾರ: ಸಾಮಾನ್ಯವಾಗಿ ದೇವರಿಗೆ ಕ್ಷೀರಾಭಿಷೇಕ, ಜಲಾಭಿಷೇಕ, ಪಂಚಾಮೃತದ ಅಭಿಷೇಕ ಮಾಡುವುದು ಕಾಣಸಿಗುತ್ತದೆ. ಆದರೆ ಈ ದೇವರಿಗೆ ಮದ್ಯದ ಅಭಿಷೇಕ, ಬೀಡಿ- ಸಿಗರೇಟಿನ ಆರತಿ ಮಾಡುವುದು ವಿಶೇಷವಾಗಿದೆ.

ಹೌದು, ನಗರದ ಕೋಡಿಬಾಗದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ ೬೬ಕ್ಕೆ ಹೊಂದಿಕೊಂಡಿರುವ ಖಾಫ್ರಿ ದೇವರ ಜಾತ್ರಾ ಮಹೋತ್ಸವದಂದು ಭಾನುವಾರ ಮದ್ಯದ ಅಭಿಷೇಕ, ಬೀಡಿ- ಸಿಗರೇಟಿನ ಆರತಿ ಕಾರ್ಯಕ್ರಮ ನೆರವೇರಿತು.

ದೇವಸ್ಥಾನಕ್ಕೆ ಬರುವ ಭಕ್ತರು ಹೂವು, ಹಣ್ಣು- ಕಾಯಿ ಜತೆಗೆ ಮದ್ಯ, ಸಿಗರೇಟ್‌ಗಳನ್ನು ತಂದಿದ್ದರು. ಅದನ್ನು ಅರ್ಚಕರು ಖಾಫ್ರಿ ದೇವರಿಗೆ ಅಭಿಷೇಕ, ಆರತಿ ಮಾಡಿದರು. ದೇವರಿಗೆ ಕೋಳಿ ಬಲಿಯನ್ನು ಕೊಟ್ಟು ರಕ್ತದಿಂದ ಸಹ ನೈವೇದ್ಯ ಮಾಡಲಾಯಿತು.

ಹಿನ್ನೆಲೆ: ತನ್ನದೇ ಆದ ಇತಿಹಾಸ ಹೊಂದಿರುವ ಖಾಫ್ರಿ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ೩೦೦ ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನು ತಂದು ಪೂಜಿಸುತ್ತಿದ್ದನಂತೆ. ಆದಾದ ನಂತರ ಆತ ಕಣ್ಮರೆಯಾದ ನಂತರ ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ನಂತರ ಕನಸಿನಲ್ಲೂ ದೇವರು ಬಂದು ತನಗೆ ಮದ್ಯದ ಅಭಿಷೇಕ, ಸಿಗರೇಟಿನ ಆರತಿ, ಕೋಳಿ ನೈವೇದ್ಯ ಮಾಡು ಎಂದು ಆದೇಶ ನೀಡಿದ್ದನು.ಹೀಗಾಗಿ ದೇವಸ್ಥಾನವನ್ನು ನಿರ್ಮಿಸಲಾಯಿತು. ಈ ಜಾತ್ರೆ ಅನಾದಿ ಕಾಲದಿಂದ ನಡೆಯುತ್ತಾ ಬಂದಿದ್ದು, ಪ್ರತಿ ವರ್ಷ ಫಲ ಪುಷ್ಪ, ಹಣ್ಣು ಕಾಯಿಯಯನ್ನು ಸಮರ್ಪಿಸುವ ಜತೆಗೆ ಮದ್ಯ, ಸಿಗರೇಟ್, ಕೋಳಿಯನ್ನು ಭಕ್ತರು ಅರ್ಪಿಸುತ್ತಾರೆ.

ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳು ಕೂಡಾ ದೇವರಿಂದಲೇ ಕಡಿಮೆಯಾಗಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಸ್ಥಳೀಯರೊಂದೇ ಅಲ್ಲದೇ ನೆರೆಯ ಗೋವಾ, ಮಹಾರಾಷ್ಟ್ರದಿಂದ ಕೂಡಾ ಜಾತ್ರೆಗೆ ಭಕ್ತರು ಆಗಮಿಸಿ ಹರಕೆ ತೀರಿಸುತ್ತಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ