ಕನ್ನಡಪ್ರಭ ವಾರ್ತೆ ಉಡುಪಿಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ರಾಜ್ಯಾದ್ಯಂತ ಶುಕ್ರವಾರ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಹಾಗೂ ಇತರ ಹಕ್ಕೊತ್ತಾಯಗಳನ್ನು ಮುಂದಿರಿಸಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಅದರಂತೆ ಬ್ರಹ್ಮಾವರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನು ಹಿರಿಯ ಮುಖಂಡ ಅಣ್ಣಪ್ಪ ಕುಕ್ಕುಡೆ ಮತ್ತು ವಾರಂಬಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ನಾರಾಯಣ ಅಂಬೇಡ್ಕರ್ ಭಾವಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ಉದ್ಘಾಟಿಸಿದರು.ನಂತರ ಮಾತನಾಡಿದ ದ.ಸಂ.ಸ.ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಈ ದೇಶದಲ್ಲಿ ದಲಿತ ಸಮುದಾಯ ಇಂದಿಗೂ ಭೂಮಿಯಿಂದ ವಂಚಿತವಾಗಿದೆ. ಶಿಕ್ಷಣ ಪಡೆದರೂ ಉದ್ಯೋಗ ಸಿಗದೆ ಜೀವನೋಪಾಯಕ್ಕಾಗಿ ಭೂಮಿಯನ್ನು ಕೇಳುವುದು ಅನಿವಾರ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಡಿಸಿ ಮನ್ನಾ ಭೂಮಿ ಇದ್ದರೂ ಜಿಲ್ಲಾಡಳಿತ ಅದನ್ನು ಭೂರಹಿತರಿಗೆ ಹಂಚದೆ, ಮೇಲ್ವರ್ಗದವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡದ ಭೂರಹಿತರಿಗೆ ಹಂಚಬೇಕು ಎಂದು ಆಗ್ರಹಿಸಿದರು.ಸರ್ಕಾರಿ ಭೂ ಹಂಚಿಕೆ ಸಮಯದಲ್ಲಿ ಶೇ 50 ರಷ್ಟು ಭೂಮಿ ನಿಮ್ನ ವರ್ಗದವರಿಗೆ ನೀಡಬೇಕು. ಕುಮ್ಕಿ ಭೂಮಿ ಸ್ವಾಧೀನಪಡಿಸಿಕೊಂಡು ಭೂರಹಿತ ದಲಿತರಿಗೆ ಮಂಜೂರು ಮಾಡಬೇಕು. ಆದ್ದರಿಂದ ತಕ್ಷಣ ದಲಿತರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಹಗಲು ರಾತ್ರಿ ಅನಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದರು.ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರು ಆಗಮಿಸಿ ಮನವಿ ಸ್ವೀಕರಿಸಿದರು. ದಸಂಸ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ , ಮಂಜುನಾಥ ಬಾಳ್ಕುದ್ರು, ತಾಲೂಕು ಸಂಚಾಲಕ ಹರೀಶ್ಚಂದ್ರ ಬಿರ್ತಿ, ತಾಲೂಕು ಸಂಘಟನಾ ಸಂಚಾಲಕ ಶ್ರೀನಿವಾಸ ವಡ್ಡರ್ಸೆ, ಪ್ರಕಾಶ್ ಹೇರೂರು, ಸುಧಾಕರ ಮಾಸ್ತರ್ ಗುಜ್ಜರ್ ಬೆಟ್ಟು, ಬಿರ್ತಿ ಸುರೇಶ, ಪ್ರಶಾಂತ್ ಬಿರ್ತಿ, ಚೈತನ್ಯ ಬಿರ್ತಿ, ಕುಸುಮಾ ಹಂಗಾರಕಟ್ಟೆ, ಆರೂರು ಸಂಚಾಲಕರಾದ ನರಸಿಂಹ ಆರೂರು, ಶರತ್ ಆರೂರು, ಬೋಜರಾಜ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು