ಕನ್ನಡಪ್ರಭ ವಾರ್ತೆ ಮಡಿಕೇರಿ ಜೀತ ಕಾರ್ಮಿಕ ಪದ್ಧತಿ ಎಂಬುದು ಒಂದು ಸಾಮಾಜಿಕ ಪಿಡುಗಾಗಿದ್ದು, ಅದರ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ನಗರದ ಜಿ.ಪಂ.ಸಭಾಂಗಣದಲ್ಲಿ ನಡೆದ ‘ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜೀತ ಪದ್ಧತಿ ಎಂಬ ಪಿಡುಗು ಸಂಪೂರ್ಣವಾಗಿ ಕಿತ್ತೊಗೆಯಬೇಕು. ಈ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾ ಮಟ್ಟದಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ಸಹ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ 14 ವಿವಿಧ ಇಲಾಖಾಧಿಕಾರಿಗಳು ಸಹ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಲುವಾಗಿ ಸ್ಪೆಷಲ್ ಟಾಸ್ಕ್ ಫೋರ್ಸ್ ಮುಖಾಂತರ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ನಮ್ಮೆಲ್ಲರಲ್ಲಿ ಸಂವಿಧಾನದ ಬಗ್ಗೆ ಗೌರವ ಇರಬೇಕು. ಭಾರತದ ಸಂವಿಧಾನವು ಸರ್ವ ಶ್ರೇಷ್ಟವಾದುದಾಗಿದ್ದು, ಅದರ ಪ್ರಕಾರವೇ ದೇಶದಲ್ಲಿ ಕಾನೂನು ರೂಪಿತವಾಗಿದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ ನಿಯಮದಂತೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಬೇಕು. ಸಂವಿಧಾನದ 23 ನೇ ವಿಧಿಯ ಅನುಸಾರ ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ದುಡಿಸಿಕೊಳ್ಳುವಂತಿಲ್ಲ, ಜೀತ ಕಾರ್ಮಿಕ ಪದ್ಧ್ದತಿಯನ್ನು ಸಂಪೂರ್ಣವಾಗಿ ಹೊರಹಾಕಿ ಶಾಂತಿಯುತ ಮತ್ತು ಸಮ ಸಮಾಜವನ್ನು ನಾವೆಲ್ಲರೂ ರೂಪಿಸುವಂತಾಗಬೇಕು ಎಂದು ಅವರು ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಿ.ಧನರಾಜು ಮಾತನಾಡಿ, ಕರ್ನಾಟಕವನ್ನು ಜೀತ ವಿಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಸಮುದಾಯಗಳ ಜನರಿಗೆ ನ್ಯಾಯವನ್ನು ಒದಗಿಸಲು ಸೇವೆ ಮುಡಿಪಾಗಿಡುತ್ತೇನೆ. ಈ ಮೂಲಕ ಸಮಾನತೆ ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಜಾಥಾ: ಜೀತ ಕಾರ್ಮಿಕ ಪದ್ಧತಿ ನಿರ್ಮೂಲನ ದಿನಾಚರಣೆ ಅಂಗವಾಗಿ ಜಿ.ಪಂ.ಕಚೇರಿ ವ್ಯಾಪ್ತಿಯಲ್ಲಿ ವಿಶೇಷ ಜಾಥಾ ಹಮ್ಮಿಕೊಳ್ಳಲಾಯಿತು. ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಂಬಧಿಸಿದಂತೆ ಘೋಷಣೆಗಳನ್ನು ಕೂಗುತ್ತಾ ಜಿ.ಪಂ. ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ್, ಜಿ.ಪಂ.ಅಧಿಕಾರಿಗಳು ಇತರರು ಇದ್ದರು.