ನ್ಯಾಯಾಂಗ ಕ್ಷೇತ್ರದಲ್ಲಿ ವಿಪುಲ ಅವಕಾಶ: ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಓಕಾ

KannadaprabhaNewsNetwork | Published : Dec 8, 2024 1:17 AM

ಸಾರಾಂಶ

ಕಾನೂನು ಪ​ದವಿ ಪೂ​ರ್ಣ​ಗೊ​ಳಿ​ಸಿದ ಯುವ ವಕೀಲರು ನೇರವಾಗಿ ಪರೀಕ್ಷೆ ಬರೆದು ಕೆಳಹಂತದ ನ್ಯಾಯಾಲಯಗಳಲ್ಲಿ ಸಿವಿಲ್‌ ನ್ಯಾಯಾಧೀಶರಾಗಿ ನೇಮಕವಾಗಬಹುದು. ಈಗಿನ ನೇಮಕಾತಿ ನಿಯಮಗಳಲ್ಲಿ ಇಂತಹ ಅನೇಕ ಅವಕಾಶಗ​ಳಿವೆ.

ಹುಬ್ಬಳ್ಳಿ:

ನ್ಯಾ​ಯಾಂಗ ಕ್ಷೇ​ತ್ರ​ದಲ್ಲಿ ಸೇವಾ ಭ​ದ್ರತೆ ಹಾಗೂ ಸೌ​ಲ​ಭ್ಯ ಸೇ​ರಿ​ದಂತೆ ಬ​ಹ​ಳಷ್ಟು ಅ​ವ​ಕಾಶಗಳಿವೆ. ಕಾ​ನೂ​ನು ಪದವೀಧರರು ಅವುಗಳನ್ನು ಸ​ದು​ಪ​ಯೋ​ಗ​ಪ​ಡಿ​ಸಿ​ಕೊಂಡು ಉ​ತ್ತಮ ವ​ಕೀ​ಲ​ರಾಗಿ ಹೊ​ರ​ಹೊ​ಮ್ಮ​ಬೇಕು. ನ್ಯಾಯಾಧೀಶರಾಗಲು ಸಾಕಷ್ಟು ಅವಕಾಶಗಳಿರುತ್ತವೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಭಯ ಶ್ರೀನಿವಾಸ್‌ ಓಕಾ ಸ​ಲಹೆ ನೀ​ಡಿ​ದ​ರು.

ಇಲ್ಲಿನ ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೊತ್ತಂಬರಿ ಕಾನೂನು ಕಾಲೇಜಿನ ವ​ತಿ​ಯಿಂದ ನಗರದ ಬಿವಿಬಿ ಕ್ಯಾಂಪಸ್‌ನ ದೇಶಪಾಂಡೆ ಸಭಾಭವನದಲ್ಲಿ ಕಾ​ನೂನು ವಿ​ದ್ಯಾ​ರ್ಥಿ​ಗ​ಳಿಗೆ ಶನಿವಾರ ನ​ಡೆ​ದ ‘ನ್ಯಾಯಾಂಗದಲ್ಲಿ ವೃತ್ತಿಜೀವನ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾ​ತ​ನಾ​ಡಿ​ದ​ರು.

ಕಾನೂನು ಪ​ದವಿ ಪೂ​ರ್ಣ​ಗೊ​ಳಿ​ಸಿದ ಯುವ ವಕೀಲರು ನೇರವಾಗಿ ಪರೀಕ್ಷೆ ಬರೆದು ಕೆಳಹಂತದ ನ್ಯಾಯಾಲಯಗಳಲ್ಲಿ ಸಿವಿಲ್‌ ನ್ಯಾಯಾಧೀಶರಾಗಿ ನೇಮಕವಾಗಬಹುದು. ಈಗಿನ ನೇಮಕಾತಿ ನಿಯಮಗಳಲ್ಲಿ ಇಂತಹ ಅನೇಕ ಅವಕಾಶಗ​ಳಿವೆ. ಇತರೆ ಕ್ಷೇತ್ರಗಳಿಗಿಂತಲೂ ಹೆಚ್ಚಿನ ವೇತನ, ಸೌಲಭ್ಯವನ್ನು ಕಾ​ನೂನು ಪ​ದ​ವೀ​ಧ​ರ​ರು ಪಡೆಯಬಹುದಾ​ಗಿದೆ ಎಂದ​ರು.

ಇತ್ತೀಚಿನ ದಿನಗಳಲ್ಲಿ ಕಾನೂನು ಅಧ್ಯಯನ ಮಾಡಿದ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗುತ್ತಿ​ರು​ವುದು ಹೆ​ಮ್ಮೆಯ ಸಂಗ​ತಿ. ವಾದಿ, ಪ್ರತಿವಾದಿ ಹಾಗೂ ಕ್ಷಕ್ಷಿದಾರರನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಆಶಯ, ನಿಯಮಗಳಿಗೆ ಅನುಗುಣವಾಗಿ ನ್ಯಾಯದಾನ ಮಾಡಬೇಕು. ಇಲ್ಲಿ ಕಾನೂನಿನ ತಿಳಿವಳಿಕೆ, ಕೌಶಲ್ಯ, ಚಾಣಕ್ಷತನ ಎಲ್ಲವೂ ಅ​ಗ​ತ್ಯ​ವಾ​ಗಿ​ರು​ತ್ತದೆ ಎಂದು ಹೇಳಿದರು.

ವಕೀಲರಾಗಿ ಕಲಿಯುವುದಕ್ಕಿಂತ ನ್ಯಾಯಾಧೀಶರಾಗಿ ಹೆಚ್ಚು ಕಲಿಯುವ ಅವಕಾಶ ಇರುತ್ತದೆ. ಪ್ರತಿಯೊಂದು ವ್ಯಾಜ್ಯಕ್ಕೂ ಒಂದೊಂದು ರೂಪ ಇರುತ್ತದೆ. ಅಪರಾಧ ಪ್ರಕರಣಗಳಿಗೆ ವಿ​ವಿ​ಧ ಮುಖಗಳಿರುತ್ತವೆ. ನ್ಯಾಯಾಧೀಶ ಎಲ್ಲವನ್ನೂ ಅಧ್ಯಯನ ಮಾಡಿ, ಪ್ರಾಮಾಣಿಕವಾದ ನ್ಯಾಯ ನೀಡುತ್ತಾನೆ. ಇದರಿಂದ ಸಮಾಜದಲ್ಲಿ ಹೆಚ್ಚು ಗೌರವ ಪಡೆಯುವುದರ ಜತೆಗೆ ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಸ​ಹ​ಕಾ​ರಿ​ಯಾ​ಗು​ತ್ತಾರೆ ಎಂದ​ರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ಉಮೇಶ ಎಂ. ಅಡಿಗ, ವಿಜಯಕುಮಾರ ಎ. ಪಾಟೀಲ, ಸಿದ್ದಪ್ಪ ಸುನೀಲ್‌ ದತ್ತ ಯಾದವ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯ ಜ್ಞಾನೇಶ್ವರ ಪಿ. ಚೌರಿ, ಪೊ. ಎಸ್‌.ಎಂ. ಹೊಳ್ಳೂರು ಸೇ​ರಿ​ದಂತೆ ಅ​ನೇ​ಕ​ರಿ​ದ್ದ​ರು.

ಮಾ​ನ​ವೀಯ ಮೌಲ್ಯ ಕು​ಸಿ​ಯು​ತ್ತಿ​ವೆ

ಇಂದಿನ ದಿ​ನ​ಗ​ಳಲ್ಲಿ ಮಾ​ನ​ವೀಯ ಮೌ​ಲ್ಯ ಕು​ಸಿ​ಯು​ತ್ತಿದ್ದು, ಅ​ದ​ರಿಂದ ಅ​ಪ​ರಾಧ ಪ್ರ​ಕ​ರ​ಣ​ಗಳ ಸಂಖ್ಯೆಯೂ ಹೆ​ಚ್ಚಾ​ಗು​ತ್ತಿ​ರು​ವುದು ಕ​ಳ​ವ​ಳ​ಕಾರಿ ಸಂಗ​ತಿ. ಕಾನೂನಿನ ಮೂಲಕ ಮರುಸ್ಥಾಪಿಸಿ ಸಮಾಜದ ಆರೋಗ್ಯವನ್ನು ಕಾಪಾಡುವಂತಹ ಜವಾಬ್ದಾರಿ ನಮ್ಮೇಲರ ಮೇಲಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾರ್ಚಾ ​ಶ್ರೀಶಾನಂದ ಅ​ಭಿ​ಪ್ರಾಯ ವ್ಯ​ಕ್ತ​ಪ​ಡಿ​ಸಿ​ದ​ರು.

ಉ​ಪ​ನ್ಯಾ​ಸ ಕಾ​ರ್ಯ​ಕ್ರ​ಮ​ದಲ್ಲಿ ಮಾ​ತ​ನಾ​ಡಿದ ಅ​ವರು, ಸಹನೆ, ತಾಳ್ಮೆ, ಬದುಕಿನ ಮೌಲ್ಯವನ್ನು ತಿಳಿಯದೇ ಸಂವಹನ ಕೊರತೆಯಿಂದಾಗಿ ಯುವಕರು ಆತ್ಯಹತ್ಯೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ನಿತ್ಯ ಹೊಸ ಹೊಸ ಕಾನೂನುಗಳು ಬರುತ್ತಿವೆ. ಇವುಗಳ ಅಧ್ಯಯನದಿಂದ ಬುದ್ಧಿವಂತಿಕೆಯಿಂದ ಸತ್ಯಾನ್ವೇಷಣೆಯೊಂದಿಗೆ ಕಾನೂನಿನ ಚೌಕಟ್ಟು ಮೀರದಂತೆ ಪ್ರಕರಣ ಇತ್ಯರ್ಥ ಮಾಡಬೇಕು. ನ್ಯಾಯ ನಿರ್ಣಯ ಎನ್ನುವುದು ದೈವಿಕಾರ್ಯವಿದ್ದಂತೆ ಎಂದು ತಿ​ಳಿ​ಸಿ​ದ​ರು.

Share this article