ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕೆರೆಗಳ ಒತ್ತುವರಿ ತೆರವು ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಶೀಘ್ರವಾಗಿ ಕಾರ್ಯಾಚರಣೆ ಚುರುಕುಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲವು ತಾಲೂಕುಗಳಲ್ಲಿ ಪ್ರಗತಿ ತೃಪ್ತಿಕರವಾಗಿಲ್ಲ, ಇದೇ ದಾರಿಯಲ್ಲಿ ಸಾಗಬಾರದು. ಕಾಲಮಿತಿಯೊಳಗೆ ಮುಗಿಸಲು ಕಾರ್ಯ ಯೋಜನೆಯನ್ನು ರೂಪಿಸಬೇಕು. ಅದನ್ನು ಚಾಚು ತಪ್ಪದೆ ಪಾಲನೆ ಮಾಡಬೇಕು. ಬೇರೆ ಕಾರಣ ಕೊಟ್ಟು ಜವಬ್ದಾರಿಯಿಂದ ನುಣುಚಿಕೊಳ್ಳಬಾರದು. ಸಭೆಗೆ ಹಾಜರಾಗಿ ಕಾಫಿ, ಟೀ ಕುಡಿದು ಎದ್ದು ಹೋಗುವಂತಾಗಬಾರದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಕೆಲವು ತಾಲೂಕುಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ಸುತ್ತಲೂ ಟ್ರಂಚ್ ಹೊಡೆದು ಹದ್ದು ಬಸ್ತು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದಾಗ, ಅಷ್ಟಕ್ಕೆ ಸುಮ್ಮನಾಗಬಾರದು ಆಗಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದ ಕಟಾರಿಯಾ ಅವರು, ಇದು, ಸಾರ್ವಜನಿಕ ಆಸ್ತಿ ಯಾರೋ ಒಬ್ಬರ ಆಸ್ತಿ ಆಗಬಾರದು ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.ಬಾಡಿಗೆ ಆಧಾರದ ಮೇಲೆ ಯಂತ್ರೋಪಕರಣ
ರೈತರಿಗೆ ಬಾಡಿಗೆ ಆಧಾರದ ಮೇಲೆ ಯಂತ್ರಧಾರೆ ಯೋಜನೆಯಡಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 16 ಕೇಂದ್ರಗಳಿದ್ದು ಇವುಗಳನ್ನು ವರ್ಷಾ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಆದರೆ, ಇದೀಗ ನಿರ್ವಹಣೆ ಮಾಡುತ್ತಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕಿ ಸುಜಾತ ಅವರು ಮಾಹಿತಿ ನೀಡಿದರು, ಅಂತಹವರ ವಿರುದ್ಧ ದೂರನ್ನು ನೀಡಿ ಎಫ್‌ಐಆರ್ ದಾಖಲಿಸಿ ಎಂದು ರಾಜೇಂದರ್ ಕುಮಾರ್ ಕಟಾರಿಯಾ ಅವರು ಹೇಳಿದರು.ಇತ್ತೀಚೆಗೆ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವೆಡೆ ವಿದ್ಯುತ್ ಕಂಬಗಳು ಬಿದ್ದು ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ಕಟಾರಿಯಾ ಅವರು ಹೇಳಿದಾಗ ಹಾಳಾಗಿರುವ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಹಲವೆಡೆ ಸಮಸ್ಯೆ ಬಗೆಹರಿದಿದೆ. ಅರಣ್ಯದೊಳಗೆ ಇರುವ 13 ಗ್ರಾಮಗಳ ವಿದ್ಯುತ್ ಸಂಪರ್ಕ ಬಾಕಿ ಇದೆ ಎಂದು ಮೆಸ್ಕಾಂ ಕಾರ್ಯಪಾಲಕ ಅಭಿಯಂತರರು ಹೇಳಿದರು.
ಮೂಡಿಗೆರೆ ತಾಲೂಕಿನಲ್ಲಿ ಕೆಲವು ತೋಟಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಆಗಿರುವ ನಷ್ಟವನ್ನು ಪರಿಶೀಲಿಸಿ ವರದಿ ನೀಡಬೇಕು. ನಂತರದಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಉಪಸ್ಥಿತರಿದ್ದರು.
ಕಾಫಿ ಬೆಳೆಗ ಸಿಗದ ಪರಿಹಾರ: ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಬೆಳೆ ವಿಮೆ ಸಿಗುತ್ತಿದೆ. ಆದರೆ, ಕಾಫಿ ಬೆಳೆ ಹಾನಿಗೆ ಪರಿಹಾರ ಸಿಗುತ್ತಿಲ್ಲ ಎಂಬ ವಿಷಯವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಸಭೆಯ ಗಮನಕ್ಕೆ ತಂದಾಗ, ಕಾಫಿ ಮಂಡಳಿಯ ಅಧಿಕಾರಿಗಳು ಉತ್ತರ ನೀಡಿ, ಈ ಬಾರಿ ಮಳೆಗೆ ರೋಬಸ್ಟಾ ಕಾಫಿಗೆ ಹೆಚ್ಚು ಹಾನಿ ಸಂಭವಿಸಿದೆ. ಅಂದರೆ, ಸುಮಾರು ಶೇ. 10 ರಿಂದ 15 ರಷ್ಟು ಎಂದು ಹೇಳುತ್ತಿದ್ದಂತೆ, ಪ್ರತಿ ವರ್ಷ ಈ ಪ್ರಮಾಣದಲ್ಲಿ ಹಾನಿಯಾಗುವುದು ಸಹಜ ಎಂದು ಕಟಾರಿಯಾ ಅವರು ಹೇಳಿದರು.