ಬೇಕಾದಾಗ ಒಪ್ಪಿಕೊಂಡು, ಬೇಡವಾದಾಗ ತಿರಸ್ಕರಿಸುವುದು ಕ್ರೌರ್ಯದ ಸಂಕೇತ: ಎಚ್‌.ಎಲ್‌.ಪುಷ್ಪಾ

KannadaprabhaNewsNetwork |  
Published : Sep 01, 2025, 01:03 AM IST
5 | Kannada Prabha

ಸಾರಾಂಶ

ಬಾನು ಮುಷ್ತಾಕ್ ಮಹಿಳೆ ಹಾಗೂ ಪ್ರಗತಿಪರರು ಎಂಬ ಕಾರಣಕ್ಕೆ ವಿರೋಧ ಕೇಳಿ ಬರುತ್ತಿದೆ. ಅವರಿಗೆ ಪ್ರಶಸ್ತಿ ಬಂದಾಗ ಒಪ್ಪಿಕೊಂಡು, ಈಗ ಬೇಡ ಎಂದರೆ ಇದು ಕ್ರೌರ್ಯದ ಸಂಕೇತ. ಚರಿತ್ರೆಯ ತಪ್ಪು ತಿದ್ದಲು ಹೊರಟ ವರ್ಗವು ದಲಿತ ಮಹಿಳೆಯರಿಗೆ ಆದ ಅನ್ಯಾಯ ಸರಿಪಡಿಸಲು ಯಾಕೆ ಹೋಗುವುದಿಲ್ಲ. ಬೇಕಾದುದನ್ನು ಒಪ್ಪಿಕೊಳ್ಳುವ, ಬೇಡವಾದುದನ್ನು ಚರಿತ್ರೆಗೆ ಅಂಟಿಸುವ ಬೆಳವಣಿಗೆ ಬಗ್ಗೆ ಗಮನಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಬಾನು ಮುಷ್ತಾಕ್‌ ಅವರಿಗೆ ಬುಕರ್‌ ಬಂದಾಗ ಒಪ್ಪಿಕೊಂಡು, ದಸರ ಉದ್ಘಾಟಿಸುತ್ತಾರೆ ಎಂದಾಗ ವಿರೋಧಿಸುತ್ತಿರುವುದು ಸಮಾಜದಲ್ಲಿ ಮೌನವಾಗಿ ನಡೆಯುತ್ತಿರುವ ಕ್ರೌರ್ಯದ ಸಂಕೇತ ಎಂದು ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ, ನೆಲೆ ಹಿನ್ನೆಲೆ ಸಂಸ್ಥೆ ಹಾಗೂ ಚಾಮರಾಜನಗರದ ಜೋಳಿಗೆ ಪ್ರಕಾಶನವು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಹನೂರು ಚನ್ನಪ್ಪ ಅವರ ‘ಕಬ್ಬಿಣದ ಕುದುರೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾನು ಮುಷ್ತಾಕ್ ಮಹಿಳೆ ಹಾಗೂ ಪ್ರಗತಿಪರರು ಎಂಬ ಕಾರಣಕ್ಕೆ ವಿರೋಧ ಕೇಳಿ ಬರುತ್ತಿದೆ. ಅವರಿಗೆ ಪ್ರಶಸ್ತಿ ಬಂದಾಗ ಒಪ್ಪಿಕೊಂಡು, ಈಗ ಬೇಡ ಎಂದರೆ ಇದು ಕ್ರೌರ್ಯದ ಸಂಕೇತ. ಚರಿತ್ರೆಯ ತಪ್ಪು ತಿದ್ದಲು ಹೊರಟ ವರ್ಗವು ದಲಿತ ಮಹಿಳೆಯರಿಗೆ ಆದ ಅನ್ಯಾಯ ಸರಿಪಡಿಸಲು ಯಾಕೆ ಹೋಗುವುದಿಲ್ಲ. ಬೇಕಾದುದನ್ನು ಒಪ್ಪಿಕೊಳ್ಳುವ, ಬೇಡವಾದುದನ್ನು ಚರಿತ್ರೆಗೆ ಅಂಟಿಸುವ ಬೆಳವಣಿಗೆ ಬಗ್ಗೆ ಗಮನಿಸಬೇಕು ಎಂದರು.

ಈಗ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿವೆ. ಹಿಂದೆ ಕೃತಿಗಳು ಆಪ್ತರ ಸಮ್ಮುಖದಲ್ಲಿ ಬಿಡುಗಡೆಗೊಳ್ಳುತ್ತಿದ್ದವು. ಆದರೆ ಈಚೆಗೆ ಬರಹಗಾರರು ಹೆಚ್ಚಿದ್ದಾರೆ. ಆದರೆ ಆ ಪುಸ್ತಕದ ವಿಚಾರಗಳು ತಲುಪಬೇಕಾದವರನ್ನು ತಲುಪುತ್ತಿವೆಯೇ ಎಂಬುದನ್ನು ಪ್ರಶ್ನಿಸಬೇಕು ಎಂದರು.

ಕಾದಂಬರಿಯು ಇತಿಹಾಸದ ಹಾದಿ, ಭವಿಷ್ಯದ ದಾರಿಯ ಬಗ್ಗೆ ತಿಳಿಸಿದಾಗ ಎಲ್ಲಾ ಕಾಲಕ್ಕೂ ಒಪ್ಪಿತವಾಗಲು ಸಾಧ್ಯ. ಪ್ರಸ್ತುತ ಸಂವಿಧಾನ, ಕಾನೂನಿನ ನಡುವೆ ಬದುಕುತ್ತಿರುವ ನಾವು ಜಾತಿ, ಮತದ ಸಂಕೋಲೆ ಕಳಚಿ ಹೊರಬರುವ ಕಾಲದಲ್ಲಿದ್ದೇವೆ. ಆದರೆ ಈಗಲೂ ಮರ್ಯಾದೆ ಹತ್ಯೆ, ಕೋಮು ಸಂಘರ್ಷ ಯಾಕೆ ನಡೆಯುತ್ತಿದೆ ಎಂಬುದನ್ನು ಕಬ್ಬಿಣದ ಕುದುರೆಗಳು ಕೃತಿ ತಿಳಿಸಿದೆ. ಅದು ಇಂದಿನ ಸಮಸ್ಯೆಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡು ಮೌನವಾಗಿಯೇ ಪ್ರಶ್ನೆ ಕೇಳುತ್ತಿದೆ ಎಂದು ಅವರು ವಿಶ್ಲೇಷಿಸಿದರು.

ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್, ರಂಗಾಯಣ ಮಾಜಿ ನಿರ್ದೇಶಕ ಎಚ್‌. ಜನಾರ್ದನ್ ಮೊದಲ ಕೃತಿ ಸ್ವೀಕರಿಸಿದರು.

ಸಾಹಿತಿ ವಡ್ಡಗೆರೆ ನಾಗರಾಜಯ್ಯ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ನೆಲ್ಲುಕುಂಟೆ ವೆಂಕಟೇಶಯ್ಯ, ಲೇಖಕ ಹನೂರು ಚನ್ನಪ್ಪ, ಮಾಜಿ ಮೇಯರ್ ಪುರುಷೋತ್ತಮ ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ