ಗುರುವಂದನಾ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹಾಸನ
ವಿದ್ಯಾರ್ಥಿಗಳು ಸಾಧನೆ ಮಾಡಬೇಕೆಂಬ ಛಲ ಹೊಂದುವ ಜತೆಗೆ ಜ್ಞಾನದ ಭಂಡಾರ ಹೊಂದಿದಲ್ಲಿ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಜ್ಞಾನ ಎಂದಿಗೂ ಕೈ ಬಿಡುವುದಿಲ್ಲ, ಆದ್ದರಿಂದ ಜ್ಞಾನ ಸಂಪಾದನೆಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ವಿದ್ಯಾರ್ಥಿ ಜೀವನದಲ್ಲಿ ನೈತಿಕ ಶಿಕ್ಷಣ ಪಡೆಯುವುದು ಬಹಳ ಮುಖ್ಯ, ಗುಣಮಟ್ಟದ ಶಿಕ್ಷಣದ ಜತೆ ಸಂಸ್ಕಾರವೂ ಮುಖ್ಯ. ಅದೆಷ್ಟೋ ಮಂದಿ ಉತ್ತಮ ಅಂಕ ಗಳಿಸಿದ್ದರೂ ವ್ಯವಹಾರಿಕ ಜ್ಞಾನದ ಕೊರತೆ ಕಾರಣದಿಂದ ಹಿನ್ನಡೆ ಅನುಭವಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲೇ ಮಕ್ಕಳು ವ್ಯವಹಾರಿಕ ಜ್ಞಾನ ಹಾಗೂ ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ಶುಭ ಹಾರೈಸಿದರು.ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನದಲ್ಲಿ ಪಾಲುದಾರರಾಗುವ ಶಿಕ್ಷಕರು, ಸ್ನೇಹಿತರು, ತಂದೆ, ತಾಯಿ ಎಲ್ಲರೂ ಗುರುಗಳೇ ಆಗಿರುತ್ತಾರೆ, ಅವರೆಲ್ಲರ ಸಲಹೆ ಸೂಚನೆ ಮಕ್ಕಳ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಒಳ್ಳೆಯ ಮಾರ್ಗದರ್ಶನ ನೀಡುತ್ತದೆ ಎಂದರು.
ದ್ವಿತೀಯ ಪಿಯುಸಿ ಅಂತಿಮ ಘಟ್ಟದಲ್ಲಿರುವ ತಮ್ಮ ಜೀವನದಲ್ಲಿ ಪರೀಕ್ಷೆ ಎಂಬ ಮಹಾದ್ವಾರ ಇದೀಗ ತಮ್ಮ ಮುಂದೆ ಎದುರಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ ತಮ್ಮ ಮುಂದಿನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.ಗುರುವಂದನಾ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನಡೆಯುತ್ತಿದೆ. ತಮ್ಮ ಭವಿಷ್ಯಕ್ಕೆ ಅನುಕೂಲ ಆಗುವ ಪೂರಕ ವಾತಾವರಣವನ್ನು ಧಾರೆ ಎರೆದಿರುವ ಗುರುಗಳಿಗೆ ವಂದನೆ ಸಲ್ಲಿಸುವ ಈ ಸುದಿನ ಮಕ್ಕಳ ಬಾಳಿಗೆ ಬೆಳಕಾಗಲಿ ಎಂದು ಹೇಳಿದರು.
ವಿದ್ಯಾರ್ಥಿಗಳು ಹೊರಗಿನ ಸೌಂದರ್ಯಕ್ಕಿಂತ ಒಳಗಿನ ವ್ಯಕ್ತಿತ್ವ ಸೌಂದರ್ಯಕ್ಕೆ ಮಹತ್ವ ನೀಡುವ ಜತೆಗೆ ಒಳಗಿನ ಸೌಂದರ್ಯ ವೃದ್ಧಿಗೆ ಗಮನ ಹರಿಸಬೇಕು. ಜತೆಗೆ ಅಂಕ ಗಳಿಕೆಯಿಂದ ಪಡೆಯುವ ಪದವಿಗಿಂತ ಒಳ್ಳೆಯ ವ್ಯಕ್ತಿತ್ವ ಅಳವಡಿಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಆಶಿಸಿದರು.ಮಠದ ವ್ಯವಸ್ಥಾಪಕ ಚಂದ್ರಶೇಖರ್, ಶಾಲೆಯ ಮುಖ್ಯ ಶಿಕ್ಷಕ ದರ್ಶನ್ ಇತರರು ಹಾಜರಿದ್ದರು.ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ಹಾಸನದಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.