ಶಿವಕುಮಾರ ಕುಷ್ಟಗಿ ಗದಗ
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ರೈತರ ಉತಾರಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲಿಸಿರುವ ಪ್ರಕರಣ ಸದ್ಯಕ್ಕೆ ಜೋರಾಗಿ ಚರ್ಚೆಯಾಗುತ್ತಿದೆ. ಆದರೆ ಗದಗ ಜಿಲ್ಲೆಯಲ್ಲಿ ಈ ಪ್ರಕರಣ 2019ರಲ್ಲಿಯೇ ನಡೆದಿದ್ದು, ಜಿಲ್ಲೆಯ ರೈತರು ಜಾಗೃತಿ ವಹಿಸಿ, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಹೋರಾಟ ಮಾಡಿ, ತಮ್ಮ ಜಮೀನು ಮರಳಿ ಪಡೆದುಕೊಂಡು ಇತಿಹಾಸ ನಿರ್ಮಿಸಿದ್ದಾರೆ.ವಕ್ಫ್ ಆಸ್ತಿ ಎಂದು ರೈತರ ಪಹಣಿಗಳಲ್ಲಿ ನೋಂದಾವಣೆಯಾಗಿರುವುದು ಕೆಲವು ಜಿಲ್ಲೆಗಳಲ್ಲಿ ಈಗ ಬೆಳಕಿಗೆ ಬರುತ್ತಿದೆ. ರೈತರು ಹೋರಾಟದ ಹಾದಿ ಹಿಡಿಯುತ್ತಿದ್ದಾರೆ. ಆದರೆ ಗದಗ ಜಿಲ್ಲೆ 2019ರಲ್ಲಿ ವಕ್ಫ್ ಇಲಾಖೆಗೆ ಅಧಿಕಾರಿಯಾಗಿದ್ದವರು, ಕಂದಾಯ ಇಲಾಖೆ ಅಧಿಕಾರಿಗಳು ಅದ್ಯಾವ ಒತ್ತಡಕ್ಕೆ ಮಣಿದಿದ್ದರೋ ಗೊತ್ತಿಲ್ಲ, ಸಾಕಷ್ಟು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಯಾಗಿ ಮಾರ್ಪಡಿಸಿದ್ದರು. ಜಿಲ್ಲಾ ವಕ್ಫ್ ಇಲಾಖೆಯ ದಾಖಲೆಗಳ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1486 ವಕ್ಫ್ ಆಸ್ತಿಗಳಿವೆ, ಅದರಲ್ಲಿ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದು 689, ಈಗಾಗಲೇ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು 251, ಖಾತಾ ಬದಲಾವಣೆಗೆ ಹೋಗಿರುವುದು 566, ಹೆಚ್ಚುವರಿಯಾಗುವ 20 ಆಸ್ತಿಗಳ ಬಗ್ಗೆ ಪರಿಶೀಲನೆ ನಡೆಯಬೇಕಿದೆ.
566 ಖಾತಾ ಬದಲಾವಣೆ: ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದ 689 ಆಸ್ತಿಗಳಲ್ಲಿ 2019 ಮಾರ್ಚ್ 21ರಂದು ಅಂದಿನ ಜಿಲ್ಲಾಧಿಕಾರಿಗಳು ಮಾಡಿದ ಆದೇಶನ್ವಯ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿನ 566 ಆಸ್ತಿಗಳ ಖಾತಾ ಬದಲಾವಣೆಯಾಗಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲೆಯ ರೈತರು ಅಂದು ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆ, ವಾಗ್ವಾದ ನಡೆಸಿದ್ದರು. ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಿ ತಮಗಾದ ಅನ್ಯಾಯ ಸರಿಪಡಿಸಿಕೊಂಡಿದ್ದರು.315 ರೈತರಿಗೆ ಜಯ: ಜಿಲ್ಲಾಡಳಿತದ ನಿರ್ಧಾರ ಪ್ರಶ್ನಿಸಿ ಜಿಲ್ಲೆಯ ವಿವಿಧ ರೈತರು ಬೇರೆ ಬೇರೆ ದಿನಾಂಕಗಳಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ತಮ್ಮ ಆಸ್ತಿಯನ್ನು ವಕ್ಫ್ ಇಲಾಖೆ ಯಾವುದೇ ಮುನ್ಸೂಚನೆ ಇಲ್ಲದೇ ಕಬಳಿಸಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ ಆನಂತರ ನ್ಯಾಯಾಲಯ ಈ ಕುರಿತು ಎಸಿ, ಡಿಸಿ, ತಹಸೀಲ್ದಾರ್ ಹಾಗೂ ವಕ್ಫ್ ಅಧಿಕಾರಿಗಳು ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಅಗತ್ಯ ದಾಖಲೆ ಪರಿಶೀಲಿಸಿ, ಮರಳಿ ಮೂಲ ರೈತರಿಗೆ ಜಮೀನು ಹಸ್ತಾಂತರಿಸುವಂತೆ ಸೂಚಿಸಿತ್ತು. ನ್ಯಾಯಾಲಯದ ಆದೇಶದಂತೆ ಜಿಲ್ಲೆಯ ಗದಗನ 101, ಮುಂಡರಗಿಯ 5, ನರಗುಂದದ 121, ರೋಣದ 44, ಗಜೇಂದ್ರಗಡದ 24, ಶಿರಹಟ್ಟಿಯ 11 ಹಾಗೂ ಲಕ್ಷ್ಮೇಶ್ವರ ತಾಲೂಕಿನ 9 ಸೇರಿದಂತೆ ಒಟ್ಟು 315 ರೈತರಿಗೆ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಮೂಲ ಮಾಲೀಕರ ಹೆಸರಿಗೆ ಆಸ್ತಿ ಮರಳಿ ದಾಖಲಿಸಲಾಗಿದೆ. ಇದು ರೈತರಿಗೆ ಸಿಕ್ಕ ದೊಡ್ಡ ಜಯವಾಗಿದೆ.
123 ಆಸ್ತಿಗಳ ಕಥೆ ಏನು?: ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿ ತಮ್ಮ ಮೂಲ ಆಸ್ತಿಯನ್ನು 315 ರೈತರು ಮರಳಿ ಪಡೆದುಕೊಂಡಿದ್ದಾರೆ. ಆದರೆ ಇನ್ನುಳಿದ 123 ರೈತರ ಆಸ್ತಿಗಳ ಕಾಲಂ ನಂಬರ್ 11ರಲ್ಲಿ ಇಂದಿಗೂ ವಕ್ಫ್ ಎಂದು ಇದೆಯೇ? ಇದ್ದರೂ ಆ ಎಲ್ಲ ರೈತರು ಯಾಕೆ ಸುಮ್ಮನ್ನೇ ಕುಳಿತಿದ್ದಾರೆ? ಆ ಆಸ್ತಿಗಳಿಗೆ ವಾರಸುದಾರರು ಇಲ್ಲವೇ? ಇದ್ದರೂ ವ್ಯಾಜ್ಯಗಳಲ್ಲಿವೇ? ಹೀಗೆ ಹತ್ತಾರು ಪ್ರಶ್ನೆಗಳು ಎದುರಾಗುತ್ತವೆ. ಆದರೆ ವಾಸ್ತವದಲ್ಲಿ ಇಷ್ಟೊಂದು ಕಂದಾಯ ಆಸ್ತಿಗಳ ಬಗ್ಗೆ ಇದುವರೆಗೂ ಯಾವುದೇ ಇತ್ಯರ್ಥವಾಗದೇ ಇರುವುದನ್ನು ಗಮನಿಸಿದಲ್ಲಿ ಮುಂಬರುವ ದಿನಗಳಲ್ಲಿ ಈ ಆಸ್ತಿಗಳು ಸಹಜವಾಗಿಯೇ ವಕ್ಫ್ ಆಸ್ತಿಯಾಗಿ ಅಧಿಕೃತಗೊಳ್ಳಲಿವೆ.ಗದಗ ಹೋರಾಟ ರಾಜ್ಯಕ್ಕೆ ಮಾದರಿ:
ವಕ್ಫ್ ಆಸ್ತಿ ವಿಷಯವಾಗಿ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಇನ್ನುಳಿದ ಜಿಲ್ಲೆಗಳ ರೈತರಿಗೆ 2019ರಲ್ಲಿಯೇ ಗದಗ ಜಿಲ್ಲೆಯ ರೈತರ ಆಸ್ತಿಗಳಲ್ಲಿ ದಾಖಲಾಗಿದ್ದ ವಕ್ಫ್ ಹೆಸರನ್ನು ಕಡಿಮೆ ಮಾಡಿಕೊಳ್ಳಲು ಉಚ್ಚ ನ್ಯಾಯಾಲಯದಲ್ಲಿ ನಡೆಸಿದ ಸಂಘಟಿತ ಹೋರಾಟ ಮಾದರಿಯಾಗಿದೆ. ಇದೇ ಆಧಾರದಲ್ಲಿಯೇ ರೈತರು ತಮ್ಮ ಆಸ್ತಿ ಉಳಿಸಿಕೊಳ್ಳಬಹುದಾಗಿದೆ.ಗದಗ ಜಿಲ್ಲೆಯಲ್ಲಿ 2019ರಲ್ಲಿಯೇ 566 ಖಾತಾ ಬದಲಾವಣೆ ಆಗಿದ್ದವು. ಆ ನಂತರ ರೈತರು ಉಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಹಲವರು ತಮ್ಮ ಆಸ್ತಿ ಮರಳಿ ದಾಖಲಿಸಿಕೊಂಡಿದ್ದಾರೆ ಎಂದು ಜಿಲ್ಲಾ ವಕ್ಫ್ ಕಮಿಟಿ ಅಧ್ಯಕ್ಷ ಜಿ.ಎಂ. ದಂಡಿನ ಹೇಳಿದರು.