ಗುರುವಿನ ಮಾರ್ಗದರ್ಶನದಿಂದ ಸಾಧನೆ ಸಾಧ್ಯ

KannadaprabhaNewsNetwork | Published : Mar 4, 2024 1:17 AM

ಸಾರಾಂಶ

ಬಂಜಾರ ಸಮುದಾಯದ ಜನರಿಗೆ ಆದರ್ಶಪ್ರಾಯವಾದ ಬದುಕು ಕಟ್ಟಿಕೊಳ್ಳಲು ಸಂತ ಸೇವಾಲಾಲ್ ಮಹಾರಾಜರ ಕೊಡುಗೆ ಅಪಾರವಾಗಿದ್ದು, ಅವರ ಮಾರ್ಗದರ್ಶನದಿಂದ ಇಂದು ಸಮಾಜದಲ್ಲಿ ಬಂಜಾರ ಸಮಾಜ ಕೂಡ ಸಾಕಷ್ಟು ಮುಂದುವರೆದಿದೆ

ಮುಂಡಗೋಡ: ಹಿಂದೆ ಗುರು ಹಾಗೂ ಮುಂದೆ ಗುರಿ ಇಟ್ಟುಕೊಂಡು ಸಾಗಿದರೆ ಮಾತ್ರ ನಾವು ಗುರಿ ತಲುಪಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಭಾನುವಾರ ಪಟ್ಟಣದ ಸ್ವಾಮಿ ವಿವೇಕಾನಂದ ಬಯಲುರಂಗ ಮಂದಿರದಲ್ಲಿ ಶ್ರೀಸೇವಾಲಾಲ ಬಂಜಾರ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀಸದ್ಗುರು ಸಂತ ಸೇವಾಲಾಲ್ ಮಹಾರಾಜರ ೨೮೫ ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಜಾರ ಸಮುದಾಯದ ಜನರಿಗೆ ಆದರ್ಶಪ್ರಾಯವಾದ ಬದುಕು ಕಟ್ಟಿಕೊಳ್ಳಲು ಸಂತ ಸೇವಾಲಾಲ್ ಮಹಾರಾಜರ ಕೊಡುಗೆ ಅಪಾರವಾಗಿದ್ದು, ಅವರ ಮಾರ್ಗದರ್ಶನದಿಂದ ಇಂದು ಸಮಾಜದಲ್ಲಿ ಬಂಜಾರ ಸಮಾಜ ಕೂಡ ಸಾಕಷ್ಟು ಮುಂದುವರೆದಿದ್ದು, ಸೇವಾಲಾಲ್ ಮಹಾರಾಜರ ಆದರ್ಶ ಮುಂದಿನ ಪೀಳಿಗೆಗೆ ಪರಿಚಯಿಸುವ ಅವಶ್ಯಕತೆ ಇದೆ ಎಂದರು.

ತಾವು ರಾಜಕೀಯವಾಗ ಬೆಳೆದು ಈ ಹಂತಕ್ಕೆ ತಲುಪಲು ಬಂಜಾರ ಸಮಾಜ ಸಾಕಷ್ಟು ಬೆಂಬಲಿಸಿದೆ.ಹಾಗಾಗಿ ಬಂಜಾರ ಸಮಾಜ ಸೇರಿದಂತೆ ಎಲ್ಲ ಸಮಾಜಗಳ ಕೆಲಸವನ್ನು ಚಾಚು ತಪ್ಪದೆ ಮಾಡುವುದಾಗಿ ಹೆಬ್ಬಾರ ಹೇಳಿದರು.

ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ,ಎಲ್ಲ ಸಮುದಾಯದಲ್ಲಿ ಕೂಡ ಮಹಾತ್ಮರು ಜನಿಸಿ ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹೋಗಿದ್ದಾರೆ.ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಬದುಕಿದರೆ ಮಾತ್ರ ಜಯಂತ್ಯುತ್ಸವಕ್ಕೆ ಒಂದು ಅರ್ಥ ಬರುತ್ತದ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಬಾಲ್ಯದಿಂದಲೂ ಸಮಾಜದ ಏಳ್ಗೆಗಾಗಿ ಕೆಲಸ ಮಾಡಿದ ಕೀರ್ತಿ ಸೇವಾಲಾಲ್ ಮಹಾರಾಜರಿಗೆ ಸಲ್ಲುತ್ತದೆ. ಅವರ ಸಂದೇಶದಿಂದ ಹಿಂದುಳಿದ ಬಂಜಾರ ಸಮಾಜ ಸ್ವತಂತ್ರ ಬದುಕು ಕಟ್ಟಿಕೊಂಡಿದ್ದು, ಉಳಿದ ಸಮುದಾಯಕ್ಕೆ ಮಾದರಿಯಾಗುತ್ತಿದೆ ಎಂದರು.

ಗಂಗಾವತಿಯ ಬಂಜಾರ ಕವಿ ಚಿಂತಕ ಛತ್ರಪ್ಪ ತಂಬೂರಿ ಸೇವಾಲಾಲ್ ಮಹಾರಾಜರ ಉಪನ್ಯಾಸ ನೀಡಿದರು.

ಹುಬ್ಬಳ್ಳಿ ಸೇವಾಲಾಲ್ ಬಂಜಾರಗುರು ಪೀಠದ ಶ್ರೀ ನಿರಂಜನ ತಿಪ್ಪೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿದರು. ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ರಾಮಣ್ಣ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ. ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ವಸಂತಕುಮಾರ ರಾಥೋಡ, ವೀಣಾ ರಾಥೋಡ, ಪಿಎಸ್ಐ ಪರಶುರಾಮ ಮಿರ್ಜಗಿ, ಶೇಖರ ಲಮಾಣಿ, ಸುರೇಶ ಚಂದಾಪುರ, ಹೇಮ್ಲಪ್ಪ ಲಮಾಣಿ, ಸುನೀಲ ಲಮಾಣಿ ಮುಂತಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಲಮಾಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಭಾಸ್ಕರ ನಾಯ್ಕ ನಿರೂಪಿಸಿದರು.

ಮೆರವಣಿಗೆ: ಇದಕ್ಕೂ ಮುನ್ನ ಪಟ್ಟಣದಲ್ಲಿ ಶ್ರೀ ಸದ್ಗುರು ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಸೇವಾಲಾಲ್ ಮಹಾರಾಜರಿಗೆ ಜಯಘೋಷ ಮೊಳಗಿಸಲಾಯಿತು.

ಮಹಿಳೆಯರು, ಪುರುಷರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಮೆರವಣಿಗೆಯಲ್ಲಿ ಕುಣಿದು ಸಂಭ್ರಮಿಸಿದ್ದು, ನೋಡುಗರ ಕಣ್ಮನ ಸೆಳೆಯುವಂತಿತ್ತು. ಶಾಸಕ ಶಿವರಾಮ ಹೆಬ್ಬಾರ ಕೂಡ ಕುಣಿತದಲ್ಲಿ ಸ್ಟೆಪ್ ಹಾಕಿದರು.

Share this article