ಕನ್ನಡಪ್ರಭ ವಾರ್ತೆ ಮಡಿಕೇರಿ
ಮೀಸಲು ಅರಣ್ಯ ಪ್ರದೇಶದಲ್ಲಿ ಎಕರೆಗಟ್ಟಲೆ ಮರ ಕಡಿದು ಸಾಗಾಟ ಮಾಡಲಾಗಿದೆ. ಆದರೆ ರೈತರು ಮರ ಕಡಿದರೆ ಅರಣ್ಯ ಇಲಾಖೆಯಿಂದ ಕಿರುಕುಳ ನೀಡಲಾಗುತ್ತದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅರಣ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮುಂಡ್ರೋಟ್ ಮೀಸಲು ಅರಣ್ಯದಲ್ಲಿ ಯಾವುದೇ ಅನುಮತಿ ಇಲ್ಲದೆ ಅಪಾರ ಸಂಖ್ಯೆಯಲ್ಲಿ ಮರಗಳನ್ನು ಕಟಾವು ಮಾಡಿದ್ದಾರೆ. ಆದರೆ ರೈತರು ಮರ ಕಟಾವಿಗೆ ಅನುಮತಿ ಕೇಳಿದರೆ ಕಚೇರಿಗೆ ಅಲೆಯುತ್ತಿರಬೇಕು ಎಂದು ಆಕ್ರೋಶಗೊಂಡರು.
ಮರ ಕಡಿಯಲು ಅನುಮತಿ ಇಲ್ಲದಿದ್ದರೂ ಸಹ ಮೀಸಲು ಅರಣ್ಯದಲ್ಲಿ ಮರ ಕಡಿಯಲು ಏಕೆ ಅನುಮತಿ ನೀಡಿದರು. ಕೊಡಗಿನ ಮುಂದಿನ ಪರಿಸ್ಥಿತಿ ಏನಾಗಬಹುದೆಂದು ಊಹಿಸಿದ್ದೀರಾ ಎಂದು ಕೇಳಿದರು.ಈಗಾಗಲೇ ಕೊಡಗಿನ ಪರಿಸರ ಹಾಳಾಗಿದ್ದು, ಅರಣ್ಯ ಸಂರಕ್ಷಣೆ ಮಾಡಿದಲ್ಲಿ ಕೊಡಗಿನ ಪರಿಸರ ಉಳಿಸಲು ಸಾಧ್ಯ ಎಂದು ಪೊನ್ನಣ್ಣ ಅವರು ಪ್ರತಿಪಾದಿಸಿದರು.
ವಿವಿಧ ಕಡೆಗಳಲ್ಲಿ ಸಸಿಗಳನ್ನು ಬೆಳೆಸಲು ಉದ್ದೇಶಿಸಲಾಗಿದ್ದು, ಸಸಿಗಳನ್ನೇ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆಸಿಲ್ಲ ಎಂದು ಪೊನ್ನಣ್ಣ ಅವರು ಬೇಸರ ವ್ಯಕ್ತಪಡಿಸಿದರು.ಬಡವರು ಮನೆ ಉಪಯೋಗಕ್ಕೆ ಒಂದು-ಎರಡು ಮರ ಕಡಿದರೆ ಪ್ರಕರಣ ದಾಖಲಿಸುತ್ತೀರಾ. ಶ್ರೀಮಂತರು ಎಕರೆಗಟ್ಟಲೆ ಮರವನ್ನು ಕಡಿಯುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವುದಿಲ್ಲವೇ ಎಂದು ಪೊನ್ನಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮುಂಡ್ರೋಟು ಮರ ಕಡಿದಿರುವ ಬಗ್ಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಮರ ಕಡಿದಿರುವುದು ಅಪರಾಧವಾಗಿದ್ದು, ಈ ಸಂಬಂಧಪಟ್ಟ ಅರಣ್ಯ ರಕ್ಷಕರನ್ನು ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಮೀಸಲು ಅರಣ್ಯದಲ್ಲಿ 340 ಮರಗಳು ಹನನವಾಗಿದೆ. ನಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ಅರಣ್ಯ ಇಲಾಖೆಯಿಂದ ಎಲ್ಲೆಲ್ಲಿ ಸೋಲಾರ್ ಬೇಲಿ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಎಲ್ಲೆಲ್ಲಿ ಗೇಟ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಸವಿವರವಾಗಿ ಮಾಹಿತಿ ನೀಡುವಂತೆ ಸೂಚಿಸಿದರು.ಅರಣ್ಯ ಇಲಾಖೆಯ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.
ತಡೆಗೋಡೆ ಕೆಲಸ ಇಲ್ಲ, ಟಾರ್ಪಲ್ ಮಾತ್ರ : ಮಂತರ್ವಿವಾದಕ್ಕೆ ಕಾರಣವಾಗಿರುವ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಶಾಸಕ ಡಾ. ಮಂತರ್ ಗೌಡ ಮಾತನಾಡಿ ತಡೆಗೋಡೆ ಕುಸಿತ ಪ್ರಕರಣ ವಿಧಾನಸಭೆ ಅರ್ಜಿ ಸಮಿತಿಯಲ್ಲಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತಡೆಗೋಡೆ ಬದಲು ಈಗ ಟಾರ್ಪಲ್ ಮಾತ್ರ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ತಡೆಗೋಡೆ ಸಮಸ್ಯೆ ಇನ್ನೂ ಪೂರ್ಣಗೊಂಡಿಲ್ಲ. ಜನ ನಮ್ಮನ್ನು ಕೇಳುತ್ತಿದ್ದಾರೆ. ಅರ್ಜಿ ಸಮಿತಿ ಆಗಮಿಸಿದ ಸಂದರ್ಭ ನಾಲ್ಕೈದು ತಿಂಗಳಲ್ಲಿ ಸರಿಪಡಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಏನೂ ಪ್ರಯೋಜನವಾಗಿಲ್ಲ ಎಂದರು.ಉಸ್ತುವಾರಿ ಸಚಿವ ಭೋಸರಾಜು ಮಾತನಾಡಿ ರಾಜ್ಯದಲ್ಲಿ 20 ಎಂಜಿನಿಯರ್ ಗಳು ಕಪ್ಪುಪಟ್ಟಿಗೆ ಸೇರಿದ್ದಾರೆ. ನಿಮಗೂ ಇದೇ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಕೆಲಸದ ಬಗ್ಗೆ ನಿಮಗೆ ಕಳಕಳಿ ಇರಬೇಕು. ಕೋಟ್ಯಾಂತರ ರುಪಾಯಿ ವೆಚ್ಚದ ತಡೆಗೋಡೆಯಾಗಿದೆ. ನಾನು ಸರ್ಕಾರಕ್ಕೆ ವರದಿ ಸಲ್ಲಿಸಿದರೆ 24 ಗಂಟೆಯಲ್ಲಿ ನಿಮ್ಮ ವಿರುದ್ಧ ಕ್ರಮವಾಗುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಡೆಂಘಿ ಬಗ್ಗೆ ಎಚ್ಚರ ವಹಿಸಿ : ಭೋಸರಾಜು
ಜಿಲ್ಲೆಯಲ್ಲಿ ಡೆಂಘಿ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿದಂತೆ ಹೆಚ್ಚಿನ ಪರೀಕ್ಷೆಯನ್ನು ನಡೆಸಬೇಕು. ಡೆಂಘಿ ಪ್ರಕರಣಗಳು ಹೆಚ್ಚಳವಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಡೆಂಘಿ ನಿಯಂತ್ರಣಕ್ಕೆ ಸರ್ಕಾರ ಗಂಭೀರವಾಗಿ ಪ್ರಯತ್ನಿಸಿದ್ದು, ಡೆಂಘಿ ಪ್ರಕರಣಗಳು ಹೆಚ್ಚಾಗದಂತೆ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಸಿಇಒ ಅವರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿ ಡೆಂಘಿ ನಿಯಂತ್ರಣಕ್ಕೆ ಮತ್ತಷ್ಟು ಎಚ್ಚರ ವಹಿಸಬೇಕು.ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಡೆಂಘಿ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊನ್ನಂಪೇಟೆ ಮತ್ತು ಕುಶಾಲನಗರ ಭಾಗದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗಿದ್ದು, ಇದರ ನಿಯಂತ್ರಣ ಸಂಬಂಧ 15 ದಿನಗಳಿಗೊಮ್ಮೆ ಮನೆ ಮನೆಗೆ ಭೇಟಿ ನೀಡಿ ಲಾರ್ವಾ ಸರ್ವೇ ಮಾಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಡೆಂಘಿ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದರು.
ನಿರಾಶ್ರಿತರಿಗೆ ಮನೆ ಹಂಚಿಕೆ ಮಾಡಿ: ಶಾಸಕರಾದ ಡಾ.ಮಂತರ್ ಗೌಡ ಅವರು 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಲವರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದು, ಕೆಲವರಿಗೆ ಇನ್ನೂ ಸಹ ಮನೆ ನೀಡಿಲ್ಲ. ಇನ್ಫೋಸಿಸ್ ಸಂಸ್ಥೆ ವತಿಯಿಂದ ಸಹ 200 ಮನೆಗಳನ್ನು ನಿರ್ಮಿಸಲಾಗಿದೆ. ಆದರೂ ವಸತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಸಂಬಂಧ ಅರ್ಹರಿಗೆ ಮನೆ ಒದಗಿಸಬೇಕು ಎಂದು ಸಚಿವರ ಗಮನಕ್ಕೆ ತಂದರು.ಈ ಬಗ್ಗೆ ಮಾತನಾಡಿದ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು 2018 ರಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಲ್ಪಿಸಲು ಪ್ರಯತ್ನಿಸಲಾಗಿದೆ. ಇನ್ನೂ ಕೆಲವರಿಗೆ ಬಾಕಿ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಅರ್ಹ ನಿರಾಶ್ರಿತರಿಗೆಲ್ಲರಿಗೂ ಮನೆ ಕಲ್ಪಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್.ಭೋಸರಾಜು ಅವರು ಬಡವರಿಗೆ ಪಾರದರ್ಶಕವಾಗಿ ಮನೆ ಹಂಚಿಕೆ ಮಾಡುವಂತೆ ಸೂಚಿಸಿದರು.