ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರಕ್ಕೆ ಹೊಂದಿಕೊಂಡಿರುವ ನೆಕ್ಕುಂದಿಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಭಕ್ತರಹಳ್ಳಿ- ಅರಸೀಕೆರೆ, ಎತ್ತಿನಹೊಳೆ ನೀರನ್ನು ಸಂಗ್ರಹಿಸಿ ನಗರದ ನಾಗರೀಕರಿಗೆ ಒದಗಿಸಲಾಗುವುದೆಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ನುಡಿದರು.೪೮.೬೯ ಕೋಟಿ ರು.ಗಳ ವೆಚ್ಚದಲ್ಲಿ ನೆಕ್ಕುಂದಿಕೆರೆಯಲ್ಲಿ ಹೂಳು ತೆಗೆಯುವ, ನೆಕ್ಕುಂದಿಕೆರೆಯಿಂದ ಚೊಕ್ಕರೆಡ್ಡಿಕೆರೆಗೆ ಸಂಪರ್ಕ ಕಲ್ಪಿಸುವ ಪೋಷಕ ಕಾಲುವೆಯಲ್ಲಿನ ಜಂಗಲ್ (ಗಿಡಗಂಟೆ) ತೆಗೆಯುವುದು ಹಾಗೂ ರೀವೀಟ್‌ಮೆಂಟ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಭಕ್ತರಹಳ್ಳಿ-ಅರಸಿಕೆರೆ ಕೆರೆಯ ನೀರಿನ ೩೭ ಎಂಎಲ್‌ಡಿಯಿಂದ ಸಾಮರ್ಥ್ಯವಿದ್ದು ಅದನ್ನು ೧೦೦ ಎಂಎಲ್‌ಡಿಗೆ ಏರಿಕೆ ಮಾಡಿ ಹೊಸ ಕೆರೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದೆಂದ ಅವರು ಇದಕ್ಕಾಗಿ ವಿನ್ಯಾಸ ಹಾಗೂ ಯೋಜನೆಯನ್ನು ರೂಪಿಸಲಾಗಿದೆಯೆಂದರು.
ಕೆರೆ ಹೂಳು ಬಳಸಿಕೊಳ್ಳಿದಶಕಗಳಿಂದಲೂ ಕೆರೆಯಲ್ಲಿ ಸಾಕಷ್ಟು ಹೂಳು ಸಂಗ್ರಹವಾಗಿದ್ದು ಒಂದು ಅಂದಾಜಿನಂತೆ ೧೪ ಲಕ್ಷ ಕ್ಯೂಬಿಕ್ ಮೀಟರ್‌ಗಳಷ್ಟು ಹೂಳನ್ನು ತೆಗೆಯಬೇಕಾಗಿದ್ದು ಸಾಕಷ್ಟು ಫಲವತ್ತಾದ ಮಣ್ಣನ್ನು ಹೊಂದಿರುವ ಈ ಹೂಳನ್ನು ನೆರಹೊರೆಯ ರೈತರು ತಮ್ಮ ಹೊಲಗದ್ದೆಗಳಿಗೆ ಸಾಗಿಸಿಕೊಳ್ಳುವುದರ ಮೂಲಕ ತಮ್ಮ ಜಮೀನನ್ನು ಫಲವತ್ತಾಗಿಸಿಕೊಳ್ಳುವಂತೆ ಕೋರಿದರು.
ವೇಗವಾಗಿ ಬೆಳೆಯುತ್ತಿರುವ ಚಿಂತಾಮಣಿ ನಗರ ಹಾಗೂ ಮಳೆ ಕೊರತೆಯ ಸಂದರ್ಭದಲ್ಲೂ ನಿರ್ವಹಿಸಬಹುದಾದಂತಹ ರೀತಿಯಲ್ಲಿ ಮುಂದಿನ ೩೦ ವರ್ಷಗಳ ದೃಷ್ಟಿಯಲ್ಲಿಟ್ಟುಕೊಂಡು ಆಗಿನ ಅವಶ್ಯಕತೆಗೆ ತಕ್ಕಂತೆ ನೀರಿನ ಸಂಗ್ರಹಣೆಗೆ ಬೇಕಾದ ಯೋಜನೆಯನ್ನು ರೂಪಿಸಿದ್ದು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದೆಂದರು.ಕನ್ನಂಪಲ್ಲಿ ಕೆರೆಯ ಸಾಮರ್ಥ್ಯ ೧೬-೧೭ ಎಂಎಲ್‌ಡಿ ಆಗಿದ್ದು, ಅದನ್ನೂ ೩೫ ಎಂಎಲ್‌ಡಿಗೆ ಏರಿಕೆ ಮಾಡಿ ಹೊಸ ಕೆರೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಟ್ರೀಟ್‌ಮೆಂಟ್ ಪ್ಲಾಂಟ್ ಯೋಜನೆ
ಟ್ರೀಟ್ಮೆಂಟ್ ಪ್ಲಾಂಟ್ ಮಾಡಲು ಆಗಲೇ ಸಿದ್ಧರಿದ್ದೇವೆವಾದರೂ ಮಳೆ ಬಾರದ ಕಾರಣ ತೊಂದರೆಯಾಯಿತು. ನಂತರದ ರಾಜಕೀಯ ಬದಲಾವಣೆಯಿಂದ ಯಾರು ಏನು ಬೇಕಾದರೂ ಮಾಡಬಹುದಾಗಿತ್ತು. ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಗುತ್ತಿಗೆ ಪಡೆದವರು ಕೆರೆಯಲ್ಲಿದ್ದ ಚೇಂಬರ್ ಗಳನ್ನು ಹೊಡೆದುಹಾಕಿದ್ದರು ಇದರಿಂದ ಕೆರೆಯಲ್ಲಿ ವಿವಿಧ ಗಿಡಗಂಟೆಗಳು ಬೆಳೆದು ಕೆರೆ ಹಾಳಾಗಿದೆಯೆಂದು ವಿಷಾದಿಸಿದರು. ಕೆರೆಯನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ನಗರ ವಾಸಿಗಳಿಗೆ ವಾಯುವಿಹಾರಕ್ಕೆ ಸೂಕ್ತ ವಾತಾವರಣ ನಿರ್ಮಾಣದ ಯೋಜನೆಯನ್ನು ರೂಪಿಸಲಾಗುವುದೆಂದರು.ಈ ಸಂದರ್ಭದಲ್ಲಿ ಪೌರಾಯುಕ್ತ ಜಿ.ಎನ್.ಚಲಪತಿ, ನಗರಸಭಾ ಸದಸ್ಯೆ ರಾಣಿಯಮ್ಮ, ಶೋಭಾ, ಜಗದೀಶ್‌ರೆಡ್ಡಿ, ಹರೀಶ್, ಜಗನ್ನಾಥ್, ರಾಜಾಚಾರಿ, ಮುಖಂಡರುಗಳಾದ ಕುರುಟಹಳ್ಳಿ ಕೃಷ್ಣಮೂರ್ತಿ, ಎ.ನಾಗರಾಜ್, ಶ್ರೀನಿವಾಸ್, ಬಾಬುರೆಡ್ಡಿ, ಬುಕ್ಕನಹಳ್ಳಿ ಶಿವಣ್ಣ, ಉಮೇಶ್, ತ್ಯಾಗರಾಜ್, ಅಮರ್, ಲೋಕೇಶ್, ವೆಂಕಟಗಿರಿಕೋಟೆ ಸುರೇಶ್, ಶಿವಣ್ಣ, ಗಿರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.