ಸಾಮಾಜಿಕ ಭದ್ರತೆ ಯೋಜನೆಗೆ ಹೆಚ್ಚಿನ ನೋಂದಣಿಗೆ ಕ್ರಮ: ಎಡಿಸಿ ಬಿ.ಟಿ.ಕುಮಾರಸ್ವಾಮಿ

KannadaprabhaNewsNetwork |  
Published : Aug 04, 2024, 01:20 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆವೈ), ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಡಿ (ಪಿಎಂಎಸ್‍ಬಿವೈ) ಜಿಲ್ಲೆಯಲ್ಲಿ ಹೆಚ್ಚಿನ ನಾಗರಿಕರು ನೋಂದಣಿಗೆ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ನೋಂದಣಿ ಮತ್ತು ಇಲಾಖೆಗಳಲ್ಲಿ ಕ್ಲೇಮ್ ಮಾಡದೆ ಇರುವ ಖಾತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 18ರಿಂದ 50 ವಯಸ್ಸಿನವರೆಗಿನ ನಾಗರಿಕರು ₹436 ಮತ್ತು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 18 ರಿಂದ 70 ವಯಸ್ಸಿನವರೆಗಿನ ನಾಗರಿಕರು ₹20 ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಯಾವುದೇ ರೀತಿ ಮರಣ ಸಂಭವಿಸಿದರೂ ಅವರ ವಾರಸುದಾರಿಗೆ ಪ್ರತಿ ಯೋಜನೆಯಡಿ ₹2 ಲಕ್ಷದವರೆಗೆ ವಿಮೆ ಸೌಲಭ್ಯ ದೊರೆಯಲಿದೆ. ಹಾಗಾಗಿ ಜಿಲ್ಲೆ ಎಲ್ಲ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ನೌಕರರು ಹಾಗೂ ಜಿಲ್ಲೆಯ ಪ್ರತಿಯೊಬ್ಬ ಅರ್ಹರರು ಎರಡು ಯೋಜನೆಗಳಲ್ಲಿ ನೋಂದಣಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ನೀಡಬೇಕು ಎಂದು ತಾಕೀತು ಮಾಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಬಾಬು ಮಾತನಾಡಿ, ಉಳಿತಾಯ ಬ್ಯಾಂಕ್ ಖಾತೆ ಹೊಂದಿರುವ 18 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಪಿಎಂಜೆಜೆಬಿವೈ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಯಡಿ ವಾರ್ಷಿಕ ₹436 ಪ್ರೀಮಿಯಂನಲ್ಲಿ ₹2 ಲಕ್ಷದ ಲೈಫ್ ಇನ್ಶೂರೆನ್ಸ್ ಕವರೇಜ್ ಪಡೆಯಬಹುದಾಗಿದೆ. ಈ ಯೋಜನೆಗೆ ನಾಮಿನಿ ಕಡ್ಡಾಯವಾಗಿದ್ದು, ನಾಮಿನಿ ಜನ್ಮ ದಿನಾಂಕ ಅತ್ಯವಶ್ಯಕವಾಗಿ ಬೇಕು. 55 ವರ್ಷದ ಒಳಗೆ ಯಾವುದೇ ಮರಣ ಸಂಭವಿಸಿದರೂ ಸಂಬಂಧಪಟ್ಟವರಿಗೆ ವಿಮೆ ಸೌಲಭ್ಯ ದೊರೆಯಲಿದೆ ಎಂದರು.

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಅಪಘಾತ ವಿಮೆಯಾಗಿದ್ದು 18 ರಿಂದ 70 ವಯಸ್ಸಿನವರೆಗಿನ ನಾಗರಿಕರು ₹20 ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಈ ಯೋಜನೆಯಡಿ ₹2 ಲಕ್ಷದ ವಿಮಾ ಸೌಲಭ್ಯ ದೊರೆಯಲಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಕ್ಲೈಮ್ ಮಾಡದೆ ಇರುವ ಖಾತೆಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಾಂತರಾಜ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ