ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಸಚಿವ ಶಿವಾನಂದ ಪಾಟೀಲರು ಮಾಡಿರುವ ಕಾಮಗಾರಿಗಳನ್ನು ಅಧಿಕಾರಿಗಳು ಉಳಿಸಿಕೊಂಡು ಹೋಗುವ ಪರಿಜ್ಞಾನ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ ರಹೀಂ ಖಾನ್ ಹೇಳಿದರು.ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಿಂದ ಹಿಡಿದು ಯಾವುದೇ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಹೋದರೆ ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಪುರಸಭೆಯಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಇದುವರೆಗೂ ನಗರೋತ್ಥಾನ ಯೋಜನೆಯಡಿ ಕಾಮಗಾರಿಗಳಿಗೆ ಟೆಂಡರ್ ಏಕೆ ಕರೆದಿಲ್ಲ ಎಂದು ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರು.ಬಸವ ಭವನವನ್ನು ಸ್ವಚ್ಛವಾಗಿಡುವ ಕಡೆಗೆ ಗಮನ ಹರಿಸಬೇಕು. ಪುರಸಭೆಯ ಎಲ್ಲ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಗಮನ ಹರಿಸಬೇಕು. ಅಭಿಯಂತರ ಸಂತೋಷ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ರೀತಿಯಾಗದಂತೆ ಗಮನ ಹರಿಸಬೇಕು ಎಂದು ಸೂಚಿಸಿದರು.ವಿಜಯಪುರದಿಂದ ಸಂಜೆ ಆಗಮಿಸಿದ ಅವರು ಮೊದಲಗೆ ಇವಣಗಿ ರಸ್ತೆಯಲ್ಲಿರುವ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ತೆರಳಿ ಅಲ್ಲಿ ಕೈಗೊಂಡಿರುವ ಕಾರ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಂತರ ಹೃದಯ ಭಾಗದಲ್ಲಿ ನಿರ್ಮಾಣವಾಗಿರುವ ಮೆಗಾಮಾರುಕಟ್ಟೆ ತೆರಳಿ ಮೆಗಾಮಾರುಕಟ್ಟೆಯಲ್ಲಿರುವ ವಾಣಿಜ್ಯ ಮಳಿಗೆಗಳನ್ನು ವೀಕ್ಷಿಸಿದರು. ಸಚಿವ ಶಿವಾನಂದ ಪಾಟೀಲರು ಮೆಗಾಮಾರುಕಟ್ಟೆಯ ಬಗ್ಗೆ ಸಮಗ್ರ ವಿವರ ಮಾಹಿತಿ ನೀಡಿದರು. ಬಸವ ಭವನಕ್ಕೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಪುರಸಭೆಯ ಕಟ್ಟಡಕ್ಕೆ ತೆರಳಿ ಪ್ರತಿಯೊಂದು ಕೊಠಡಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಪೌರಾಡಳಿತ ನಿರ್ದೇಶಕ ಪ್ರಭುಲಿಗ ಕವಳಿಕಟ್ಟಿ, ಜಿಲ್ಲಾ ಯೋಜನಾ ನಿರ್ದೇಶಕ ಬಿ.ಎ.ಸೌದಾಗರ, ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಪುರಸಭೆಯ ಸದಸ್ಯರು, ಸಿಬ್ಬಂದಿ, ವಿವಿಧ ಅಧಿಕಾರಿಗಳು, ಮುಖಂಡರು ಇದ್ದರು.ಪಟ್ಟಣದ ಆರಾಧ್ಯ ದೈವ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ನಂತರ ಬಸವ ಜನ್ಮ ಸ್ಮಾರಕಕ್ಕೆ ಭೇಟಿ ನೀಡಿದರು.ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಹೀಂ ಖಾನ್:
ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲರು ಪಟ್ಟಣದಲ್ಲಿ ಪುರಸಭೆಯಿಂದ ಕೈಗೊಂಡಿರುವ ಮೆಗಾಮಾರುಕಟ್ಟೆ, ಬಸವ ಭವನ, ಪುರಸಭೆ ನೂತನ ಕಟ್ಟಡ, ಜಿ ಪ್ಲಸ್ ಒನ್ ಮನೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇತರೆಡೆ ಮಾದರಿಯಾಗುವಂತೆ ಕೈಗೊಳ್ಳಲಾಗಿದೆ ಎಂದು ಕಾಮಗಾರಿಗಳ ಬಗ್ಗೆ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ ರಹೀಂ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದರು.ಬಸವ ಜನ್ಮಸ್ಥಳ ಬಸವನಬಾಗೇವಾಡಿಗೆ ಪ್ರಥಮ ಬಾರಿಗೆ ಆಗಮಿಸಿ ಪುರಸಭೆಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಶಿವಾನಂದ ಪಾಟೀಲರೊಂದಿಗೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿರುವ ಉದ್ಯಾನವನದ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ವಹಿಸುತ್ತೇನೆ. ಪಟ್ಟಣದ ಅಭಿವೃದ್ಧಿ ಸಹಕಾರ ನೀಡುವೆ ಎಂದು ತಿಳಿಸಿದರು.ರಾಜ್ಯದಲ್ಲಿ ಶೇ.೭೦ ರಷ್ಟು ಡೆಂಘೀ ನಿಯಂತ್ರಣಕ್ಕೆ ಬಂದಿದೆ. ರಿಂಗ್ ರಸ್ತೆ ನಿರ್ಮಾಣ, ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೇಗೆ ಏರಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಸಂಬಂಧಿಸಿದಂತೆ ಗಮನ ಹರಿಸುವ ಭರವಸೆ ನೀಡಿದರು.ಪುರಸಭೆಯಿಂದ ಈ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಶ್ಲಾಘನೀಯ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತಂದು ಅವರಿಂದ ಈ ಕಾಮಗಾರಿಗಳನ್ನು ಉದ್ಘಾಟನೆಯಾಗುವಂತೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮತ್ತೆ ಈ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಮತ್ತೊಮ್ಮೆ ವೀಕ್ಷಿಸುತ್ತೇನೆ.
-ರಹೀಂ ಖಾನ್, ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥರು.