ಶಿವಮೊಗ್ಗ: ಎಪಿಎಂಸಿಗಳಲ್ಲಿ ಅಡಕೆ ನೇರ ಖರೀದಿಗೆ ಕಡಿವಾಣ ಹಾಕಲಿದ್ದು, ಖಾಸಗಿಯವರಿಗೆ ಲೈಸೆನ್ಸ್ ನೀಡುವುದಿಲ್ಲ. ಕ್ಯಾಂಪ್ಕೋಸ್, ಮ್ಯಾಮ್ಕೋಸ್ ನಂತಹ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರಿಗೆ ಹಾಗೂ ಅಡಕೆ ಮಾರಾಟ ಸಹಕಾರ ಸಂಘಗಳಿಗೆ ಸಂಬಂಧಿಸಿದ ವಿಷಯ ಕುರಿತು ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಸಹಕಾರ ಸಂಘಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಸಚಿವರು, ಅಡಕೆ ಅಕ್ರಮ ವಹಿವಾಟಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಶಿವಮೊಗ್ಗ ಎಪಿಎಂಸಿಯಲ್ಲಿ ನೇರ ಖರೀದಿ ಮೂಲಕ ಸಂಗ್ರಹವಾಗಿರುವ ಸೆಸ್ ಹಾಗೂ ಸಹಕಾರ ಸಂಘಗಳ ಮೂಲಕ ನಡೆದ ವಹಿವಾಟಿನಿಂದ ಸಂಗ್ರಹವಾಗಿರುವ ಸೆಸ್ ಪ್ರಮಾಣದ ಬಗ್ಗೆ ವಾರದಲ್ಲಿ ವರದಿ ಕೊಡಿ ಎಂದು ಕೃಷಿ ಮಾರುಕಟ್ಟೆ ನಿರ್ದೇಶಕ ಶಿವಾನಂದ ಕಾಪ್ಸೆ ಅವರಿಗೆ ನಿರ್ದೇಶನ ನೀಡಿದರು.
ಖಾಸಗಿ ವರ್ತಕರಲ್ಲಿ ಕೆಲವರು ತೆರಿಗೆ ವಂಚನೆ ಮಾಡುವುದನ್ನು ನಿಯಂತ್ರಿಸಲು ವಿಚಕ್ಷಣ ದಳ ರಚನೆ ಮಾಡಲಾಗಿದ್ದು, ನಾಲ್ಕು ಚೆಕ್ಪೋಸ್ಟ್‌ಗಳನ್ನು ರಚನೆ ಮಾಡಲಾಗುವುದು. ಸಹಕಾರ ಸಂಘಗಳಿಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದ್ದು, ಅಗತ್ಯ ಸಹಕಾರ ನೀಡಲಾಗುವುದು ಎಂದರು.ಲಾಭ ಮಾಡುವುದು ಎಪಿಎಂಸಿ ಉದ್ದೇಶವಲ್ಲ. ಆಯಾ ಎಪಿಎಂಸಿಗಳಿಂದ ಬರುವ ಆದಾಯವನ್ನು ಸ್ಥಳೀಯವಾಗಿ ಅಭಿವೃದ್ಧಿಗೆ ವಿನಿಯೋಗ ಮಾಡುವುದು ಸರ್ಕಾರದ ಉದ್ದೇಶ. ಎಪಿಎಂಸಿಗಳು ಆರ್ಥಿಕವಾಗಿ ಸದೃಢವಾದರೆ ರೈತರಿಗೆ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಅಡಕೆ ದಾಸ್ತಾನು ಮಾಡುವ ಗೋದಾಮುಗಳ ಬಾಡಿಗೆಯನ್ನು ಈಗಾಗಲೇ ಪ್ರತಿಶತ 40ರಷ್ಟು ಕಡಿಮೆ ಮಾಡಲಾಗಿದೆ. ಶಿವಮೊಗ್ಗ ಎಪಿಎಂಸಿಗೆ ಮಾಹಿತಿ ಇಲ್ಲದಿದ್ದರೆ ಇಲ್ಲಿನ ಅಧಿಕಾರಿಗಳ ಮೂಲಕ ನಿರ್ದೇಶನ ನೀಡಿ ಕಡಿಮೆ ಮಾಡಿರುವ ಬಾಡಿಗೆಯನ್ನು ಆಕರ ಮಾಡಲು ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.ರಾಜ್ಯದ ಹಲವು ಎಪಿಎಂಸಿಗಳಲ್ಲಿ ಗೋದಾಮುಗಳು ಖಾಲಿ ಇವೆ. ನಬಾರ್ಡ್ ನೆರವು ಸಿಕ್ಕಿದೆ ಎಂದು ಹಿಂದೆ ಗೋದಾಮುಗಳನ್ನು ನಿರ್ಮಿಸಿರುವುದರಿಂದ ಉಪಯೋಗವಾಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಗೋದಾಮುಗಳಿಗೆ ಬೇಡಿಕೆ ಇದ್ದು, ಅಗತ್ಯ ಜಾಗವನ್ನು ಇಲಾಖೆಯಿಂದಲೇ ಖರೀದಿಸಿ ಗೋದಾಮು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಖಾಸಗಿ ಎಪಿಎಂಸಿಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಉತ್ತೇಜಿಸುವುದಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾಲ್ಕು ಖಾಸಗಿ ಎಪಿಎಂಸಿಗಳಿಗೆ ಪರವಾನಗಿ ನೀಡಲಾಗಿದೆ. ಈ ಖಾಸಗಿ ಎಪಿಎಂಸಿಗಳನ್ನು ಮುಚ್ಚಬೇಕು ಎಂಬ ಬೇಡಿಕೆ ಕೂಡಾ ಇದೆ ಎಂದರು.ರಾಜ್ಯದ ಹಲವು ಎಪಿಎಂಸಿಗಳಲ್ಲಿ ಕೃಷಿಯೇತರ ವಹಿವಾಟು ನಡೆಯುತ್ತಿರುವುದು ಗಮನದಲ್ಲಿದೆ. ಕಿರಾಣಿ ಅಂಗಡಿಗಳು, ಸಿಮೆಂಟ್, ಸ್ಟೀಲ್ ವಿತರಕರು, ಪ್ಲಾಸ್ಟಿಕ್ ಪ್ಯಾಪಾರಿಗಳೂ ಇದ್ದಾರೆ. ಹಲವು ಕಡೆ ವಾಸದ ಮನೆಗಳನ್ನೂ ನಿರ್ಮಿಸಲಾಗಿದೆ. ಎಪಿಎಂಸಿಗಳು ಸಂಪೂರ್ಣವಾಗಿ ಕೃಷಿ ವಹಿವಾಟಿಗೆ ಸೀಮಿತವಾಗಿರಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಕೃಷಿಯೇತರ ವಹಿವಾಟನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಹುಮಹಡಿ ಕಟ್ಟಡಗಳ ಮೇಲೆ ಹೊಸದಾಗಿ ಶುಲ್ಕ ನಿಗದಿಪಡಿಸಲಾಗಿದ್ದು, ಸಹಕಾರಿ ಸಂಘಗಳಿಗೆ ರಿಯಾಯಿತಿ ನೀಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಾಗುವುದು. ಸೌಹಾರ್ದ ಸಹಕಾರಿ ಸಂಘಗಳಿಗೆ ಎಪಿಎಂಸಿ ಸೆಸ್ನಲ್ಲಿ ರಿಯಾಯಿತಿ ನೀಡಬೇಕು ಎಂಬ ಬೇಡಿಕೆ ಸಾಧುವಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ, ಡಿ.ಜಿ.ಶಾಂತನಗೌಡ, ಕೃಷಿ ಮಾರುಕಟ್ಟೆ ನಿರ್ದೇಶನ ಶಿವಾನಂದ ಕಾಪ್ಸೆ, ಹೆಚ್ಚವರಿ ನಿರ್ದೇಶಕರಾದ ನಾಗೇಶ್ (ಯೋಜನೆ), ನಜೀಬುಲ್ಲಾ ಖಾನ್ (ಆಡಳಿತ), ಮಾಮ್ಕೋಸ್ ಉಪಾಧ್ಯಕ್ಷ ಮಹೇಶ್, ಸುಬ್ರಹ್ಮಣ್ಯ.ವೈ.ಎಸ್, ಕೆ.ವಿ.ಸೂರ್ಯನಾರಾಯಣ, ಕೆ.ಬಿ.ಕೃಷ್ಣಮೂರ್ತಿ, ಎನ್.ಕೆ.ನಾಗೇಂದ್ರ, ಎಚ್.ಬಿ.ರಮಾಕಾಂತ ಮತ್ತಿತರ ಸಹಕಾರಿಗಳು ಉಪಸ್ಥಿತರಿದ್ದರು.
ಎಪಿಎಂಸಿ ಇರುವುದು ಲಾಭಕ್ಕಾಗಿ ಅಲ್ಲಎಪಿಎಂಸಿಗಳು ಲಾಭ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿಲ್ಲ. ಕೆಲವು ಅಧಿಕಾರಿಗಳು ರಿಯಲ್ ಎಸ್ಟೇಟ್ ರೀತಿ ಲಾಭದ ಲೆಕ್ಕಾಚಾರ ಹಾಕುತ್ತಾರೆ. ಇದು ಸರಿಯಾದ ಕ್ರಮ ಅಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ರೈತರ ಹಿತರಕ್ಷಣೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ಸಚಿವ ಶಿವಾನಂದ ಪಾಟೀಲ ಅವರು ವಿವರಿಸಿದ ನಂತರ, ಸಂತೃಪ್ತಿ ವ್ಯಕ್ತಪಡಿಸದ ಜ್ಞಾನೇಂದ್ರ, ಎಪಿಎಂಸಿಗಳು ರೈತಸ್ನೇಹಿಯಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳನ್ನು ಬೆಂಬಲಿಸುತ್ತೇನೆ ಎಂದರು.ಖಾಸಗಿ ಎಪಿಎಂಸಿ ಮುಚ್ಚಿರಾಜ್ಯದಲ್ಲಿರುವ ಖಾಸಗಿ ಎಪಿಎಂಸಿಗಳನ್ನು ಮುಚ್ಚಬೇಕು. ಹೊಸದಾಗಿ ಖಾಸಗಿಯವರಿಗೆ ಅನುಮತಿ ನೀಡಬಾರದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವರಿಗೆ ಮನವಿ ಮಾಡಿದರು.ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಎಪಿಎಂಸಿ ಆರಂಭ ಮಾಡುವುದಿಲ್ಲ. ಸರ್ಕಾರದ ಎಪಿಎಂಸಿಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ ರೈತರಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆರಂಭಿಸಿರುವ ನಾಲ್ಕು ಖಾಸಗಿ ಮಾರುಕಟ್ಟೆಗಳನ್ನು ಮುಚ್ಚುವ ಬೇಡಿಕೆ ಇದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದರು.