ದಿವಗಿ ಗ್ರಾಪಂನ ನಾನಾ ಬೇಡಿಕೆ ಈಡೇರಿಕೆಗೆ ಕ್ರಮ: ಅಮರ್

KannadaprabhaNewsNetwork |  
Published : Aug 03, 2024, 12:33 AM IST
ಫೋಟೋ : ೨ಕೆಎಂಟಿ_ಎಯುಜಿ_ಕೆಪಿ೪ : ದಿವಗಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಜಗಧೀಶ ಭಟ್ಟ ಅಧ್ಯಕ್ಷತೆಯಲ್ಲಿ ತುರ್ತುಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ರಜಪೂತ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಆರ್.ಎಲ್.ಭಟ್ ಇತರರು ಇದ್ದರು. | Kannada Prabha

ಸಾರಾಂಶ

ದಿವಗಿ ಪಂಚಾಯಿತಿಯಿಂದ ಸರ್ವೀಸ್ ರಸ್ತೆಯೂ ಸೇರಿದಂತೆ ಹಲವು ಅತ್ಯಗತ್ಯ ಬೇಡಿಕೆಗಳನ್ನು ಈ ಹಿಂದೆಯೇ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ದಿವಗಿ ಗ್ರಾಪಂ ಅಧ್ಯಕ್ಷ ಜಗದೀಶ ಭಟ್ಟ ತಿಳಿಸಿದರು.

ಕುಮಟಾ: ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರ ಬೇಡಿಕೆಯ ಕಾಮಗಾರಿಗಳು ನಡೆಯುವವರೆಗೂ ಗ್ರಾಮ ಪಂಚಾಯಿತಿಯಿಂದ ಆರ್‌ಒಎಫ್‌ಆರ್ ಪ್ರಮಾಣಪತ್ರವನ್ನು ನೀಡದಿರಲು ದಿವಗಿ ಪಂಚಾಯಿತಿ ಆಡಳಿತ ಕಟ್ಟುನಿಟ್ಟಾಗಿ ನಿರ್ಧರಿಸಿ ಶುಕ್ರವಾರ ಠರಾವು ಪಾಸ್‌ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ೬೬ ರ ಚತುಷ್ಪಥದ ಕಾಮಗಾರಿಯಡಿ ಅರಣ್ಯ ಹಕ್ಕಿಗೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ(ಆರ್‌ಒಎಫ್‌ಆರ್) ಪ್ರಮಾಣಪತ್ರ ನೀಡಿಕೆ ಕುರಿತು ತುರ್ತು ಗ್ರಾಮಸಭೆ ದಿವಗಿ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು. ಸರ್ವೆ ನಂ. ೯೬ಎ, ಸರ್ವೆ ನಂ. ೧೦೮ಬಿ೨, ಸರ್ವೆ ನಂ. ೧೦೮ಬಿ೩ ಗೆ ಸಂಬಂಧಿಸಿ ಅರಣ್ಯ ಅತಿಕ್ರಮಣ ಜಮೀನು ಮಂಜೂರಿ ಕುರಿತು ಚರ್ಚಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ದಿವಗಿ ಪಂಚಾಯಿತಿ ಅಧ್ಯಕ್ಷ ಜಗದೀಶ ಭಟ್ಟ ವಹಿಸಿ ಮಾತನಾಡಿ, ದಿವಗಿ ಪಂಚಾಯಿತಿಯಿಂದ ಸರ್ವೀಸ್ ರಸ್ತೆಯೂ ಸೇರಿದಂತೆ ಹಲವು ಅತ್ಯಗತ್ಯ ಬೇಡಿಕೆಗಳನ್ನು ಈ ಹಿಂದೆಯೇ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಈವರೆಗೆ ಯಾವ ಕಾಮಗಾರಿಯನ್ನೂ ಮಾಡಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಆರ್‌ಒಎಫ್‌ಆರ್ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

ಸಭೆಯಲ್ಲಿ ಚರ್ಚೆಯ ಬಳಿಕ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಮರ್ ಮಾತನಾಡಿ, ಈಗಾಗಲೇ ದಿವಗಿ ಗ್ರಾಮ ಪಂಚಾಯಿತಿಯಿಂದ ನೀಡಲಾದ ಬೇಡಿಕೆಗಳಲ್ಲಿ ಇರುವ, ಮಾನೀರ ದೇವಸ್ಥಾನದಿಂದ ದುಂಡಕುಳಿವರೆಗೆ ಬೀದಿದೀಪ ಅಳವಡಿಕೆ, ದಿವಗಿಯಲ್ಲಿ ಶಿರಸಿಯ ರಾ.ಹೆ. ೬೩ರ ಸಂಪರ್ಕಿಸುವ ರಸ್ತೆ ವೃತ್ತದಲ್ಲಿ ಹೈಮಾಸ್ಟ್ ದೀಪ ಅಳವಡಿಸುವುದು, ದಿವಗಿ ಕ್ರಾಸ್‌ನಲ್ಲಿ ಕಾಲುಸೇತುವೆ ನಿರ್ಮಾಣ, ದಿವಗಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ, ಹರಕಡೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಇವುಗಳನ್ನು ಈಡೇರಿಸಲು ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು.

ಅದರಂತೆ ದಿವಗಿ ಗ್ರಾಮಸ್ಥರ ಬೇಡಿಕೆಗಳ ಕಾಮಗಾರಿಗಳು ಮುಗಿದ ಮೇಲೆಯೇ ಆರ್‌ಒಎಫ್‌ಆರ್ ಪ್ರಮಾಣಪತ್ರ ನೀಡುವಂತೆ ಸಭೆಯಲ್ಲಿ ನಿರ್ಧರಿಸಿ ಠರಾವು ಪಾಸ್‌ ಮಾಡಲಾಯಿತು.

ಅಪರ ಜಿಲ್ಲಾಧಿಕಾರಿ ರಜಪೂತ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಇಒ ಆರ್.ಎಲ್. ಭಟ್, ಸಮಾಜ ಕಲ್ಯಾಣಾಧಿಕಾರಿ ಭಾರತಿ ಆಚಾರ್ಯ, ಕಂದಾಯ ನಿರೀಕ್ಷಕ ಗಾಣಿಗೇರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಮರ್ ಮಣಿಪಾಲ, ಐಆರ್‌ಬಿ ವ್ಯವಸ್ಥಾಪಕ ಶ್ರೀನಿವಾಸ ರಾವ್, ಎಂಜಿನಿಯರ್ ವೆಂಕಟ್ರಮಣ ಹೆಗಡೆ, ಪಂಚಾಯಿತಿ ಕಾರ್ಯದರ್ಶಿ ವಿ.ಡಿ. ಮೋರೆ, ಪಂಚಾಯಿತಿ ಸದಸ್ಯರಾದ ಶ್ರೀಧರ ಗೌಡ, ಸಂಗೀತ ದೇಶಭಂಡಾರಿ, ಫ್ರೆಂಕಿ ಫರ್ನಾಂಡೀಸ್, ಲೀನಾ ಫರ್ನಾಂಡೀಸ್, ಮಂಗಲಾ ಭಟ್, ನಾಗವೇಣಿ ಅಂಬಿಗ, ಸಿಲ್ವಿನ್ ರೊಡ್ರೊಗಿಸ್ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ