ಕನ್ನಡಪ್ರಭ ವಾರ್ತೆ ನಾಗಮಂಗಲ
ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಸೂಕ್ತ ಸ್ಥಳ ಮತ್ತು ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು. ಅಲ್ಲಿವರೆಗೂ ತಾತ್ಕಾಲಿಕವಾಗಿ ನೀಡಿರುವ ಸ್ಥಳದಲ್ಲಿ ತಮ್ಮ ವ್ಯಾಪಾರ ನಡೆಸುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ಪುರಸಭೆ ಕಚೇರಿ ಹಿಂಭಾಗದಲ್ಲಿ ನಿರ್ಮಾಣಗೊಂಡಿರುವ ಸೂಪರ್ ಮಾರ್ಕೆಟ್ ವಾಣಿಜ್ಯ ಮಳಿಗೆಗಳ ಕಟ್ಟಡದ ಆಸುಪಾಸಿನಲ್ಲಿದ್ದ ಹಣ್ಣು, ಹೂವು, ತರಕಾರಿ ಅಂಗಡಿಗಳೂ ಸೇರಿದಂತೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿನ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿ ಹಿತ್ತಾಳೆ ಕೇಂದ್ರದ ಆವರಣಕ್ಕೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಸೂಪರ್ ಮಾರ್ಕೆಟ್ ವಾಣಿಜ್ಯ ಮಳಿಗೆಗಳ ಕಟ್ಟಡ ಉದ್ಘಾಟನೆಯಾಗಿ ಹಲವು ವರ್ಷ ಕಳೆದಿದ್ದರೂ ಕೆಲ ಅಡೆತಡೆಗಳಿಂದ ಈವರೆಗೂ ಹರಾಜು ಮಾಡಲು ಸಾಧ್ಯವಾಗಿರಲಿಲ್ಲ. ನಾನು ಮಂತ್ರಿಯಾದ ಬಳಿಕ ಇಲ್ಲಿನ ಅಡೆತಡೆ ಬಗೆಹರಿಸಿದ್ದೇನೆ. ಅಲ್ಲದೇ, ಬೀದಿ ಬದಿಯ ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಹಿತ್ತಾಳೆ ಕೇಂದ್ರದ ಆವರಣಕ್ಕೆ ಸ್ಥಳಾಂತರಿಸಲಾಗಿದೆ ಎಂದರು.ನಿಮ್ಮ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಅಗತ್ಯ ಸೌಕರ್ಯ ಶೀಘ್ರದಲ್ಲಿಯೇ ಕಲ್ಪಿಸಲಾಗುವುದು. ಹಾಗಾಗಿ ಹಣ್ಣು, ಹೂವು, ತರಕಾರಿ ಮತ್ತು ಬೀದಿ ಬದಿ ವ್ಯಾಪಾರಸ್ಥರು ಆತಂಕ ಪಡಬಾರದು ಎಂದು ಭರವಸೆ ನೀಡಿದರು.
ಬಳಿಕ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಟಿ.ಮರಿಯಪ್ಪ ಮತ್ತು ಮಂಡ್ಯ ವೃತ್ತದಲ್ಲಿನ ವಾಹನ ದಟ್ಟಣೆ ವೀಕ್ಷಿಸಿ, ಹೆದ್ದಾರಿ ಬದಿಯಲ್ಲಿ ದ್ವಿಚ ಕ್ರವಾಹನಗಳು, ಆಟೋ ರಿಕ್ಷಾಗಳು ಮತ್ತು ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಂತರೆ ಸಾರ್ವಜನಿಕರು ಮತ್ತು ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದರು.ಜನರ ಸುರಕ್ಷತೆ ದೃಷ್ಟಿಯಿಂದ ಟಿ.ಮರಿಯಪ್ಪ ಮತ್ತು ಮಂಡ್ಯ ವೃತ್ತದಲ್ಲಿ ಯಾವುದೇ ಬಸ್‌ಗಳನ್ನು ಹೆಚ್ಚು ಸಮಯ ನಿಲುಗಡೆಗೆ ಅವಕಾಶ ನೀಡಬಾರದು. ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಂಡು ತಕ್ಷಣ ನಿರ್ಗಮಿಸುವಂತೆ ಬಸ್ ಚಾಲಕರಿಗೆ ಖಡಕ್ ಸೂಚನೆ ನೀಡಬೇಕು ಎಂದರು.
ಎಲ್ಲ ವಾಹನ ಸವಾರರು ಕಟ್ಟುನಿಟ್ಟಾಗಿ ಸಂಚಾರಿ ನಿಯಮ ಪಾಲಿಸಬೇಕು. ಬೀದಿಬದಿ ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿಯೇ ತಮ್ಮ ವ್ಯಾಪಾರ ನಡೆಸಿ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಪುರಸಭೆ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪುರಸಭೆ ಸದಸ್ಯರಾದ ರಮೇಶ್, ತಿಮ್ಮಪ್ಪ, ಮುಖ್ಯಾಧಿಕಾರಿ ಶ್ರೀನಿವಾಸ್, ಎಂಜಿನೀಯರ್ ಕಿರಣ್, ಹಿರಿಯ ಆರೋಗ್ಯ ನಿರೀಕ್ಷಕ ವೆಂಕಟೇಶ್, ನಾಗರಾಜು, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಪಿಎಸ್‌ಐ ಸತೀಶ್, ಮುಖಂಡರಾದ ರವಿಕಾಂತೇಗೌಡ, ಶರತ್‌ರಾಮಣ್ಣ, ಪ್ರವೀಣ್‌ಕುಮಾರ್, ಸುರೇಶ್, ಅತೀಖ್‌ಪಾಷ ಸೇರಿದಂತೆ ಹಲವರಿದ್ದರು.