ಅಂಗನವಾಡಿ ಕೇಂದ್ರದಲ್ಲೇ ಕಾರ್ಯಕರ್ತೆಯರ ಮಾರಾಮಾರಿ

KannadaprabhaNewsNetwork | Published : Nov 10, 2024 2:02 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕ್ಷುಲ್ಲಕ ಕಾರಣಕ್ಕೆ ಅಂಗನವಾಡಿ ಕೇಂದ್ರದಲ್ಲಿಯೇ ಮಕ್ಕಳ ಮುಂದೆ ಕಾರ್ಯಕರ್ತೆಯರು ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿರುವ ಘಟನೆ ಪಟ್ಟಣದ ಪಿಲೇಕೆಮ್ಮ ನಗರ ಬಡಾವಣೆಯ 1ನೇ ನಂಬರ್‌ನ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ. ಜಗಳದಲ್ಲಿ ಇಬ್ಬರು ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕ್ಷುಲ್ಲಕ ಕಾರಣಕ್ಕೆ ಅಂಗನವಾಡಿ ಕೇಂದ್ರದಲ್ಲಿಯೇ ಮಕ್ಕಳ ಮುಂದೆ ಕಾರ್ಯಕರ್ತೆಯರು ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿರುವ ಘಟನೆ ಪಟ್ಟಣದ ಪಿಲೇಕೆಮ್ಮ ನಗರ ಬಡಾವಣೆಯ 1ನೇ ನಂಬರ್‌ನ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ. ಜಗಳದಲ್ಲಿ ಇಬ್ಬರು ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಕಾರ್ಯಕರ್ತೆಯರಾದ ಶಾಂತಾ ಮಾಮನಿ, ರೇಣುಕಾ ರಾಮಕೋಟಿ(ಲಮಾಣಿ) ಅವರು ಪರಸ್ಪರ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡು ಗಾಯಗೊಂಡವರು. ಇವರಿಬ್ಬರ ಜಗಳ ಕೇಳಿ ಅಕ್ಕಪಕ್ಕದ ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಧಾವಿಸಿದ್ದು, ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ರೇಣುಕಾ ಅವರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಕುರಿತು ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಪ್ರಾಥಮಿಕ ವರದಿ ತಲುಪಿದ್ದು, ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಘಟನೆಗೆ ಕಾರಣವೇನು..?:

ಶಾಂತಾ ಎಂಬುವರು ಮೊದಲು ಇದೇ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ವೈಫಲ್ಯ, ಸಾರ್ವಜನಿಕರ ದೂರು ಪರಿಗಣಿಸಿ ಇವರನ್ನು ಬೇರೆ ಶಾಲೆಗೆ ಸ್ಥಾನಪಲ್ಲಟ ಮಾಡುವಂತೆ ಸಿಡಿಪಿಒ ಶಿವಮೂರ್ತಿ ಕುಂಬಾರ ಇಲಾಖೆಯ ಡಿಡಿಯವರಿಗೆ ವರದಿ ಸಲ್ಲಿಸಿದ್ದರು. ವರದಿ ಪರಿಗಣಿಸಿ ಡಿಸಿಯವರು ಅ.31ರಂದು ಶಾಂತಾ ಅವರನ್ನು ಸಂಗಮೇಶ್ವರ ನಗರದ 1ನೇ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಇಲ್ಲಿ ತೆರವಾದ ಸ್ಥಾನಕ್ಕೆ ರೇಣುಕಾ ಅವರನ್ನು ಪ್ರಭಾರಿಯಾಗಿ ನಿಯೋಜಿಸಲಾಗಿತ್ತು. ಕೇಂದ್ರದ ಮೇಲ್ವಿಚಾರಕರು ಗುರುವಾರ ಕರ್ತವ್ಯಕ್ಕೆ ಹಾಜರಾಗಲು ರೇಣುಕಾಗೆ ತಿಳಿಸಿದ್ದರು. ಶುಕ್ರವಾರ ಬೆಳಗ್ಗೆ ಕೇಂದ್ರಕ್ಕೆ ಬಂದ ಬಳಿಕ ಶಾಂತಾ ಮತ್ತು ರೇಣುಕಾ ಮಕ್ಕಳ ಎದುರೇ ಪರಸ್ಪರ ಅವಾಚ್ಯ ಶಬ್ದ ಬಳಸಿ ಕಿತ್ತಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಏಕಾಏಕಿ ಇಬ್ಬರೂ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಈ ಇಬ್ಬರ ಮಧ್ಯೆ ಮೊದಲಿನಿಂದಲೂ ವೈಷಮ್ಯವಿತ್ತು ಎನ್ನಲಾಗಿದ್ದು, ಇದೇ ಜಗಳಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

------------------ಕೋಟ್‌...

ಘಟನೆ ಗಮನಕ್ಕೆ ಬಂದಿದೆ. ಶಾಂತಾ ಮಾಮನಿ ಬಗ್ಗೆ ಸ್ಥಳೀಯ ಪುರಸಭೆ ಸದಸ್ಯರು ಹಾಗೂ ನಿವಾಸಿಗಳ ವಿರೋಧವಿತ್ತು. ಹೀಗಾಗಿ, ಮೇಲಾಧಿಕಾರಿಗಳು ಇವರನ್ನು ಸಂಗಮೇಶ ನಗರದ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಅವರು ಅಲ್ಲಿ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ, ಸರ್ಕಾರಿ ಆದೇಶ ಉಲ್ಲಂಘಿಸಿ ಬೇರೆಯವರೊಂದಿಗೆ ಜಗಳಕ್ಕೆ ಇಳಿಯುವುದು ಸರಿಯಲ್ಲ. ಆದರೂ, ಇಬ್ಬರು ಜಗಳ ಮಾಡಿರುವ ಕುರಿತು ಮೇಲಧಿಕಾರಿಗಳಿಗೆ ಮೌಖಿಕ ಮಾಹಿತಿ ನೀಡಲಾಗಿದೆ. ಮೇಲಧಿಕಾರಿಗಳ ಆದೇಶದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು

- ಶಿವಮೂರ್ತಿ ಕುಂಬಾರ, ಸಿಡಿಪಿಒ, ಮುದ್ದೇಬಿಹಾಳ

Share this article