ಮನೆಗೆಲಸದೊಂದಿಗೆ ಅಡಕೆ ಸುಲಿದು ಆದಾಯ ಗಳಿಸುವ ತರೀಕೆರೆ ತಾಲೂಕಿನ ಮಹಿಳೆಯರುಅನಂತ ನಾಡಿಗ್
ಕನ್ನಡಪ್ರಭ ವಾರ್ತೆ, ತರೀಕೆರೆಅಡಕೆ ಬೆಳೆ ಮತ್ತು ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಕೆ ಕಾಯಕ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ತಂದುಕೊಟ್ಟಿದೆ. ತರೀಕೆರೆ ತಾಲೂಕಿನಲ್ಲಿ ಸರಿ ಸುಮಾರು ಶೇ.80ರಷ್ಟು ಸಂಪೂರ್ಣ ಆರ್ಥಿಕ ವಹಿವಾಟು ರೈತರು ಬೆಳೆಯುವ ಪ್ರಮುಖ ಬೆಳೆಯಾದ ಅಡಕೆ ಮೇಲೆ ಅವಲಂಬಿತವಾಗಿದೆ. ಇದೇ ಇಲ್ಲಿನ ಸಾವಿರಾರು ಮಹಿಳೆಯರಿಗೆ ಆರ್ಥಿಕ ಮೂಲವೂ ಹೌದು.
ತರೀಕೆರೆ ತಾಲೂಕಿನಲ್ಲಿ ಅಡಕೆ ಸುಲಿವ ಕಾಯಕಕ್ಕೂ ಮತ್ತು ಮಹಿಳೆಯರಿಗೂ ಅವಿನಾಭಾವ ಸಂಬಂಧ. ಅಡಕೆ ಕೊಯ್ಲು ಬಂತೆಂದರೆ ಮಹಿಳೆಯರಿಗೆ ಒಂದು ರೀತಿಯ ಹಬ್ಬ. ಇಲ್ಲಿನ ಹಲವು ಗೃಹಿಣಿಯರಿಗೆ ಹೆಚ್ಚುವರಿ ಆದಾಯಕ್ಕೆ, ಆರ್ಥಿಕ ಸ್ವಾವಲಂಬನೆಗೆ ಅಡಕೆ ಜತೆ ಬಿಡಿಸಲಾಗದ ನಂಟು. ಕೌಶಲ್ಯದ ಕೆಲಸ:ಅಡಕೆ ತರೀಕೆರೆ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ. ತಾಲೂಕಿನ ಸಾವಿರಾರು ಕುಟುಂಬಗಳಿಗೆ ಅಡಕೆ ಬೆಳೆ ಬದುಕು ಕಲ್ಪಿಸಿದೆ. ಶ್ರಮಪಟ್ಟು ಕೆಲಸ ಮಾಡಿ ಉತ್ತಮ ಫಸಲು ಬಂದಾಗ ನಿಟ್ಟುಸಿರು ಬಿಡುವ ಕೃಷಿಕರು ಅದರ ಮುಂದಿನ ಹಂತದ ಕೆಲಸದಲ್ಲಿ ಅಂದರೆ ಮರಗಳಿಂದ ಕೊಯ್ಲು ಮಾಡಿ ಚೀಲಗಳಲ್ಲಿ ಶೇಖರಿಸಿ ಮನೆಗೆ ತಲುಪಿಸುವುದು, ಸುಲಿದು ಹದ ಮಾಡಿ ಒಣಿಗಿಸುವವರೆಗೆ ಹಲವು ಹಂತದ ಕಾರ್ಯಗಳಿಗೆ ಕೂಲಿ ಕೆಲಸದವರನ್ನೇ ಅವಲಂಬಿಸಿದ್ದಾರೆ. ಇದರಲ್ಲಿ ಪ್ರಮುಖ ಘಟ್ಟ ಅಡಕೆ ಸುಲಿಯುವುದು. ಅಡಕೆ ಸುಲಿವುದು ಮುಖ್ಯವಾಗಿ ಹೆಣ್ಣು ಮಕ್ಕಳದ್ದೆ ಕೆಲಸ. ಈ ಕೆಲಸ ಎಲ್ಲರಿಗೂ ಬರುವುದಿಲ್ಲ. ಇದಕ್ಕೆ ವಿಶಿಷ್ಟ ಕೌಶಲ್ಯ ಬೇಕು. ಚಾಕಚಕ್ಯತೆ ಬೇಕು. ಇದು ಇಲ್ಲಿನ ಹಲವು ಮಹಿಳೆಯರಿಗೆ ಕರಗತವಾಗಿದೆ. ಇದನ್ನೇ ಬಂಡವಾಳ ಮಾಡಿ ಕೊಂಡು ಹಲವು ಮಹಿಳೆಯರು ಅಡಕೆ ಕೊಯ್ಲಿನ ಸಮಯದ ಆರೇಳು ತಿಂಗಳು ಕೆಲಸ ಮಾಡಿ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ.
ಇದರೊಂದಿಗೆ ಸಿಪ್ಪೆ ಸುಲಿದ ಅಡಕೆ ಕಾಯಿಗಳನ್ನು ಓರಣ ವಾಗಿ ಬೇಯಿಸುವುದು, ಬೇಯಿಸಿದ ಕಾಯಿಗಳನ್ನು ಒಪ್ಪವಾಗಿ ಒಣಗಿಸುವುದು ಮತ್ತು ವಿಂಗಡಿಸುವುದು ಇತ್ಯಾದಿ ಅಡಕೆ ವಿವಿಧ ಸಂಸ್ಕರಣೆ ಕಾರ್ಯಗಳಲ್ಲಿ ನೂರಾರು ಜನರು ಕೆಲಸ ಮಾಡುತ್ತಾರೆ. ತಾಳ್ಮೆ ಸಹನೆಯೂ ಬೇಕು:ಸಿಪ್ಪೆಯೊಳಗಿರುವ ಮೂಲ ಕಾಯಿಗಳಿಗೆ ಒಂದಷ್ಟೂ ಪೆಟ್ಟಾಗದ ರೀತಿಯಲ್ಲಿ ಸಿಪ್ಪೆಯಿಂದ ಅಡಕೆ ದುಂಡನ್ನು ಬೇರ್ಪಡಿಸುವಿಕೆ ದೀರ್ಘ ಸಮಯದ ಅನುಭವದ ಕಾರ್ಯ. ಕೌಶಲ್ಯದ ಕಾರ್ಯವೂ ಹೌದು. ಸಿಪ್ಪೆಯಿಂದ ಬಹಳ ಜೋಪಾನವಾಗಿ ಅಡಕೆ ದುಂಡನ್ನು ಬೇರ್ಪಡಿಸಲು ಸಹನೆ ಅಷ್ಟೇ ಚುರುಕುತನ ಅಗತ್ಯ. ಗಂಟೆಗಟ್ಟಲೆ ಕೂತು ನಿರ್ವಹಿಸುವ ಈ ಕೆಲಸ ತಾಳ್ಮೆಯಿಂದ ಕೂಡಿರುತ್ತದೆ.
ದಿನನಿತ್ಯದ ಮನೆ ಕೆಲಸ ಮುಗಿಸಿಕೊಂಡು ನಿರ್ದಿಷ್ಟ ಸಮಯಕ್ಕೆ ಕೆಲಸದ ಜಾಗಕ್ಕೆ ಮಹಿಳೆಯರು ತಲುಪುತ್ತಾರೆ. ಅಡಕೆ ಸುಲಿಯುವ ಮನೆಗಳಿಗೆ ಅಡಕೆ ಸುಲಿಯುವ ಕತ್ತಿಯನ್ನು ಮಹಿಳೆಯರೇ ತಂದು ಸಾಲು ಸಾಲಾಗಿ ಕುಳಿತು ಸಿಪ್ಪೆಗಳಿಂದ ಅಡಕೆ ದುಂಡು ಬೇರ್ಪಡಿಸುತ್ತಾರೆ. ಇದು ತಾಲೂಕಿನ ಸಾವಿರಾರು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದೆ. ಹೆಚ್ಚು ಅನುಭವಸ್ಥರು ದಿನಕ್ಕೆ 1 ಮೂಟೆ ಅಡಕೆ ಸುಲಿಯುವುದೂ ಇದೆ. ಆದರೆ ಹೆಚ್ಚು ರೂಢಿ ಇಲ್ಲದವರು ಕಡಿಮೆ ಅಡಕೆ ಸುಲಿಯುತ್ತಾರೆ. ತಾಲೂಕಿನಲ್ಲಿ ಅಡಕೆ ಸುಲಿವ ಕಾಯಕ ಬಹಳಷ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಒಂದು ಸಂಪ್ರದಾಯದಂತೆ ಬಹಳಷ್ಟು ಮಹಿಳೆಯರು ಇದರಲ್ಲಿ ತೊಡಗಿದ್ದಾರೆ. ಪ್ರತಿ ವರ್ಷ ಆರೇಳು ತಿಂಗಳು ಸಿಗುವ ಈ ಕಾಯಕದಿಂದ ಸುಮಾರು 40-50 ಸಾವಿರ ರು. ಸಂಪಾದಿಸುತ್ತಾರೆ.ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಸಾವಿರಾರು ಮನೆಗಳಲ್ಲಿ ಅಡಕೆ ಸುಲಿಯುವ ಕಾಯಕ ಇನ್ನೂ ನಡೆದುಕೊಂಡು ಬರುತ್ತಿದೆ. ಆಧುನಿಕ ಕಾಲ ಘಟ್ಟದಲ್ಲಿ ಅಡಕೆ ಸುಲಿಯಲು ಯಂತ್ರಗಳೂ ಬಂದಿವೆ. ಆದರೆ ಯಂತ್ರದಲ್ಲಿ ತ್ವರಿತವಾಗಿ ಕೆಲಸವಾದರೂ ಗುಣಮಟ್ಟದಲ್ಲಿ ಒಂದಿಷ್ಟು ರಾಜಿಯಾಗಲೇ ಬೇಕಾಗುತ್ತದೆ. ಈ ಭಾಗದಲ್ಲಿರುವ ಹೆಚ್ಚು ಅಡಕೆ ಬೆಳಗಾರರು ಸಾಂಪ್ರದಾಯಿಕ ರೀತಿಯಲ್ಲಿ ಅಡಕೆ ಸುಲಿಯುವುದಕ್ಕೆ ಪ್ರಾಶಸ್ತ್ಯ ನೀಡುತ್ತಿರುವುದರಿಂದ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಿದೆ,9ಕೆಟಿಆರ್.ಕೆ.2ಃ
ತರೀಕೆರೆಯಲ್ಲಿ ನೂರಾರು ಮಹಿಳೆಯರು ಅಡಕೆ ಸುಲಿಯುವ ಕಾಯಕದಲ್ಲಿ ತೊಡಗುತ್ತಾರೆ.9ಕೆಟಿಆರ್.ಕೆ.3ಃ ಸಿಪ್ಪೆಗಳಿಂದ ಬೇರ್ಪಡಿಸಿದ ಅಡಕೆ ದುಂಡು.