ತಾಂತ್ರಿಕ ಆವಿಷ್ಕಾರಗಳಿಗೆ ಹೊಂದಿಕೊಳ್ಳಬೇಕು; ವಿದ್ಯಾರ್ಥಿಗಳಿಗೆ ಪ್ರೊ. ಯಜ್ಞಮೂರ್ತಿ ಶ್ರೀಕಾಂತ್ ಸಲಹೆ

KannadaprabhaNewsNetwork | Published : Nov 17, 2024 1:17 AM

ಸಾರಾಂಶ

ವಾಣಿಜ್ಯಶಾಸ್ತ್ರವು ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಜ್ಞಾನ ಮತ್ತು ಕೌಶಲ್ಯಗಳು ವ್ಯಾಪಾರ ಮತ್ತು ಆರ್ಥಿಕತೆಗಳು ಇವೆಲ್ಲವನ್ನು ರೂಪಿಸುತ್ತಿದೆ. ವಿದ್ಯಾರ್ಥಿಗಳು ನಿಗದಿತ ವಿಷಯದ ಮೇಲೆ ಮಾತ್ರ ಅವಲಂಭಿತರಾಗದೆ ಅನುಸಾಂಘಿಕ ವಿಷಯಗಳ ನೋಟವನ್ನು ಸಹ ನೋಡಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಇ- ಕಾಮರ್ಸ್‌ ನಂತಹ ತಾಂತ್ರಿಕ ಉನ್ನತೀಕರಣವು ನಮ್ಮ ಕೈಯ್ಯಲ್ಲಿದೆ. ಬೆಳೆಯುತ್ತಿರುವ ತಾಂತ್ರಿಕ ಆವಿಷ್ಕಾರಗಳಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು ಹಾಗೂ ನೈತಿಕ ಮೌಲ್ಯಗಳನ್ನು ಹೊಂದಿರಬೇಕು ಎಂದು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ (ಆರ್.ಐ.ಇ) ಪ್ರಾಂಶುಪಾಲ ಪ್ರೊ. ಯಜ್ಞಮೂರ್ತಿ ಶ್ರೀಕಾಂತ್ ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಎಂ.ಕಾಂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ವೇದಿಕೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕವಾಗಿ ಶಿಕ್ಷಣವು ಬದಲಾಗುತ್ತಿದ್ದು, ಕಲಿಕೆಯು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿದೆ. ಈ ವೇದಿಕೆಯು ಅವರ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ ಎಂದರು.

ವಾಣಿಜ್ಯಶಾಸ್ತ್ರವು ನಿರಂತರವಾಗಿ ವಿಕಾಸಗೊಳ್ಳುತ್ತಿದೆ. ಜ್ಞಾನ ಮತ್ತು ಕೌಶಲ್ಯಗಳು ವ್ಯಾಪಾರ ಮತ್ತು ಆರ್ಥಿಕತೆಗಳು ಇವೆಲ್ಲವನ್ನು ರೂಪಿಸುತ್ತಿದೆ. ವಿದ್ಯಾರ್ಥಿಗಳು ನಿಗದಿತ ವಿಷಯದ ಮೇಲೆ ಮಾತ್ರ ಅವಲಂಭಿತರಾಗದೆ ಅನುಸಾಂಘಿಕ ವಿಷಯಗಳ ನೋಟವನ್ನು ಸಹ ನೋಡಬೇಕಾಗುತ್ತದೆ ಎಂದು ಅವರು ಹೇಳಿದರು.

ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್‌ ಮಾತನಾಡಿ, ಸಹಕಾರಿ ಕೆಲಸ ಮತ್ತು ಈ ನೆಲದ ಸಂಯೋಜಿತ ಸಹಕಾರಿ ಸಂಶೋಧನೆಗಳೊಂದಿಗೆ ನಿರಂತರ ಕಲಿಕೆಯು ಯಶಸ್ವಿ ವಿದ್ಯಾರ್ಥಿಯಾಗಲು ಕೀಲಿ ಕೈಯಾಗಿದೆ. ತರಗತಿಯ ಕಲಿಕೆ ಮತ್ತು ನೈಜ ಕಲಿಕೆಯ ಅಂತರವನ್ನು ಕಡಿಮೆ ಮಾಡಲು ಈ ವೇದಿಕೆಯು ಹಲವಾರು ಉಪನ್ಯಾಸಗಳನ್ನು ಆಯೋಜಿಸಬೇಕು, ಕಾರ್ಯಾಗಾರಗಳನ್ನು ನಡೆಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ವಿದ್ಯಾವರ್ಧಕ ಸ್ನಾತಕೋತ್ತರ ಕೇಂದ್ರವು ಜವಾಬ್ದಾರಿಯುತ ಶಿಕ್ಷಣವನ್ನು ನೀಡುತ್ತಿದ್ದು, ನಿಯಮಿತ ತರಗತಿಗಳ ಹೊರತಾಗಿಯೂ ಪ್ರಾಯೋಗಿಕ ಮಾನ್ಯತೆ ಮತ್ತು ಕೌಶಲ್ಯಾಧಾರಿತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ದೆಹಲಿಯಂತಹ ದೂರದ ಸ್ಥಳಗಳಿಗೂ ಶೈಕ್ಷಣಿಕ ಪ್ರವಾಸಗಳನ್ನು ನಡೆಸುವ ಮೂಲಕ ದಕ್ಷತೆ ಮತ್ತು ಶಿಕ್ಷಣವನ್ನು ಉತ್ಕೃಷ್ಟಗೊಳಿಸಲು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಮಾತನಾಡಿ, ವಿದ್ಯಾರ್ಥಿಗಳು ಈ ವೇದಿಕೆಯೊಂದಿಕೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಚರ್ಚೆಗಳಲ್ಲಿ ಭಾಗವಹಿಸಬೇಕು. ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಬಂಧಗಳನ್ನು ಮಂಡಿಸಬೇಕು ಎಂದರು.

ದರ್ಶನ್‌ ಪ್ರಾರ್ಥಿಸಿದರು. ಡಾ.ಎಸ್. ಪೂರ್ಣಿಮಾ ಸ್ವಾಗತಿಸಿದರು. ಎಸ್. ಚಂದನಾ ವಂದಿಸಿದರು. ಅನ್ನಪೂರ್ಣೇಶ್ವರಿ ಮತ್ತು ರೂಪಾ ನಿರೂಪಿಸಿದರು.

Share this article