ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿ ತಾಲೂಕು ಯೋಜನಾಧಿಕಾರಿ
ಕನ್ನಡಪ್ರಭ ವಾರ್ತೆ ಸೊರಬಯಾವುದೇ ಸಂಘ-ಸಂಸ್ಥೆಗಳು ವ್ಯವಸ್ಥಿತವಾಗಿ ಮುನ್ನೆಡೆದು ಯಶಸ್ವಿಯಾಗಬೇಕಾದರೆ ಅದರಲ್ಲಿನ ಸದಸ್ಯರ ಹೊಂದಾಣಿಕೆ ಮನೋಭಾವ ಮುಖ್ಯವಾಗಿರುತ್ತದೆ. ಆದ್ದರಿಂದ ಸದಸ್ಯರು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೇ ಕ್ರಿಯಾಶೀಲರಾಗಿ ಮುನ್ನಡೆಯಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ಹೇಳಿದರು.
ತಾಲೂಕಿನ ಮಾವಲಿ ವಲಯದ ಯಕ್ಷಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನವಾಗಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಸಬಲೀಕರಣ ಯೋಜನೆಯ ಮುಖ್ಯ ಗುರಿಯಾಗಿದ್ದು, ಇಂದು ಮಹಿಳೆಯರು ಸ್ವಾವಲಂಬಿ ಜೀವನದ ಜೊತೆಗೆ ಕುಟುಂಬದ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈವರೆಗಿನ ಸಾಧನೆ, ಮಹಿಳಾ ಸಬಲೀಕರಣಕ್ಕಾಗಿ ಮಾತೃಶ್ರೀ ಹೇಮಾವತಿ ಅಮ್ಮನವರು ನೀಡಿರುವ ವಿಶೇಷ ಯೋಜನೆಗಳು ಮತ್ತು ಜ್ಞಾನ ವಿಕಾಸ ಕಾರ್ಯಕ್ರಮದ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು.
ಕೇಂದ್ರದಲ್ಲಿ ಪ್ರತಿ ತಿಂಗಳು ವಿವಿಧ ರೀತಿಯ ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡುವಂತಹ ಕಾರ್ಯಕ್ರಮಗಳು ನಡೆಯುತ್ತವೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆಯಬೇಕು. ಜ್ಞಾನ ವಿಕಾಸ ಕಾರ್ಯಕ್ರಮ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಯಾವುದೇ ಸಂಕೋಚವಿಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಒಂದು ಉತ್ತಮ ಮಾದರಿ ಕೇಂದ್ರವಾಗಿ ಗುರುತಿಸುವಂತಾಗಬೇಕು ಎಂದರು.ಗ್ರಾಮದ ಮುಖಂಡ ಮಂಜಪ್ಪ ಮಾತನಾಡಿ, ಹೊಸದಾಗಿ ಜ್ಞಾನ ವಿಕಾಸ ಕೇಂದ್ರ ಯಕ್ಷಿ ಗ್ರಾಮದಲ್ಲಿ ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ. ಇಂಥ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳುವುದರಿಂದ ಮಹಿಳೆಯರಿಗೆ ಆತ್ಮಸ್ಥೈ ವೃದ್ಧಿಯಾಗುತ್ತದೆ. ಆದ್ದರಿಂದ ಯಾವುದೇ ಸಂದರ್ಭ ಬಂದರೂ ಹಿಂಜರಿಯದೆ ಕೇಂದ್ರವನ್ನು ಗುರಿಯಾಗಿಸಿಕೊಂಡು ಹೋಗುವಂತೆ ಶುಭ ಹಾರೈಸಿದರು.
ವಲಯ ಮೇಲ್ವಿಚಾರಕರಾದ ರಾಧಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ, ಸೇವಾ ಪ್ರತಿನಿಧಿ ಮಲ್ಲಮ್ಮ ಹಾಗೂ ಸದಸ್ಯರು ಉಪಸ್ಥಿತರಿದ್ದರು.- - -
೦೮ಕೆಪಿಸೊರಬ-೦೨ :ತಾಲೂಕಿನ ಯಕ್ಷಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನೂತನವಾಗಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರವನ್ನು ರಚಿಸಲಾಯಿತು.