ಕನ್ನಡಪ್ರಭ ವಾರ್ತೆ ಮಂಗಳೂರು
ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಡೆಂಘೀ ನಿರ್ಮೂಲನೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನವಸತಿ ಪ್ರದೇಶ ಹಾಗೂ ತಮ್ಮ ಇಲಾಖಾ ವ್ಯಾಪ್ತಿಯ ಕಟ್ಟಡ, ಆವರಣಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಸೂಚನೆ ನೀಡಿದರು.ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಡೆಂಘೀ ಪ್ರಕರಣಗಳ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆಯಲ್ಲಿ ಮಾತನಾಡಿದರು.ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ಪ್ರಕರಣಗಳು ಕಂಡು ಬಂದಿದೆ. ಪಾಲಿಕೆಯ ಎಂ.ಪಿ.ಡಬ್ಲ್ಯೂ ಸಿಬ್ಬಂದಿ ಫೀಲ್ಡ್‌ಗೆ ಹೋಗಬೇಕು. ಮುಂದಿನ ಎರಡು ದಿನಗಳಲ್ಲಿ ಪ್ರತಿ ವಾರ್ಡ್‍ಗಳಿಗೆ ಭೇಟಿ ನೀಡಿ ಲಾರ್ವ ಉತ್ಪತ್ತಿಗೆ ಕಾರಣವಾಗುವ ನೀರಿನ ಸಂಗ್ರಹಗಳನ್ನು ಗುರುತಿಸಿ ನಾಶಗೊಳಿಸಲು ಕ್ರಮವಹಿಸಬೇಕು. ಎಲ್ಲ ವಾರ್ಡ್‍ಗಳಿಗೆ ರಾಸಾಯನಿಕ ಸಿಂಪಡಿಸಬೇಕು. ಅಗತ್ಯ ಪ್ರದೇಶದಲ್ಲಿ ಧೂಮೀಕರಣ ನಡೆಸಬೇಕು ಎಂದರು.
ಲಾರ್ವಾ ನಾಶಪಡಿಸಿ: ಎಲ್ಲ ತಾಲೂಕುಗಳ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ಕಮಿಷನರ್‌ಗಳು ಹಾಗೂ ಆಯಾ ತಾಲೂಕಿನ ಆರೋಗ್ಯಾಧಿಕಾರಿಗಳು ಕೂಡಲೇ ಸಭೆ ನಡೆಸಿ ತಮ್ಮ ವ್ಯಾಪ್ತಿಯಲ್ಲಿನ ಪ್ರದೇಶಗಳಿಗೆ ಭೇಟಿ ನೀಡಿ ಲಾರ್ವ ಉತ್ಪತ್ತಿ ಪ್ರದೇಶಗಳನ್ನು ಗುರುತಿಸಿ ಮುಂದಿನ ಎರಡು ದಿನಗಳಲ್ಲಿ ಲಾರ್ವ ನಾಶಪಡಿಸಬೇಕು. ನೀರಿನ ಸಂಗ್ರಹ, ಟಯರ್, ಎಳನೀರು ಸಿಪ್ಪೆಗಳನ್ನು ತೆರವುಗೊಳಿಸಬೇಕು. ಸ್ಥಳೀಯ ಮಟ್ಟದಲ್ಲಿ ಜನರಿಗೆ ಡೆಂಘೀ ಬಗ್ಗೆ ಮಾಹಿತಿಯನ್ನು ನೀಡಬೇಕು. ಜಾಲತಾಣಗಳಲ್ಲಿ, ಕರಪತ್ರಗಳ ಮೂಲಕ ಜಾಗೃತಿ ವಹಿಸಬೇಕು. ಡೆಂಘೀ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಂಬಂಧಿಸಿದ ಇಲಾಖೆಗಳು ಮಾಹಿತಿ ನೀಡುವಂತೆ ಸೂಚಿಸಿದರು.ಡೆಂಘೀ ಪರೀಕ್ಷೆ ಮಾಡಿಸಿ: ಆಯಾ ತಾಲೂಕುಗಳ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಶಂಕಿತ ಜ್ವರದ ಪ್ರಕರಣಗಳು ಕಂಡು ಬಂದಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಡೆಂಘೀ ಪರೀಕ್ಷೆ ಮಾಡಿಸಬೇಕು ಎಂದರು.
ಶಾಲೆಗಳಲ್ಲಿ ಡೆಂಘೀ ನಿಯಂತ್ರಣಕ್ಕೆ ಕ್ರಮ: ಇತ್ತೀಚೆಗೆ ಡೆಂಘೀ ಪ್ರಕರಣಗಳು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಇಲಾಖೆಯಿಂದ ಆಯಾ ಪ್ರದೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಶಾಲಾ ಕಾಲೇಜುಗಳಲ್ಲಿ ಡೆಂಘೀ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಜ್ವರ ಕಾಣಿಸಿಕೊಂಡ ವಿದ್ಯಾರ್ಥಿಯನ್ನು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ವಿದ್ಯಾರ್ಥಿಗಳಿಗೆ ಲಾರ್ವ ಉತ್ಪತ್ತಿಯ ಬಗ್ಗೆ ಮಾಹಿತಿ ನೀಡಿ ತಮ್ಮ ತಮ್ಮ ಮನೆಗಳಲ್ಲಿ ಡೆಂಘೀ ನಿರ್ಮೂಲನೆಗೆ ಕ್ರಮವಹಿಸುವಂತೆ ಜಾಗೃತಿಯನ್ನು ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಹೇಳಿದರು.ಶಾಲಾ ಆವರಣದಲ್ಲಿ ಇರುವ ನೀರಿನ ಸಂಗ್ರಹಗಳನ್ನು ಗುರುತಿಸಿ ಶಾಲಾ ಮೈದಾನಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪ್ರತಿನಿತ್ಯವೂ ವಿದ್ಯಾರ್ಥಿಗಳು ಉಪಯೋಗಿಸುವ ಶೌಚಾಲಯಗಳನ್ನು ಶುಚಿಗೊಳಿಸಬೇಕು. ಸಾಧ್ಯವಾದರೆ ವಿದ್ಯಾರ್ಥಿಗಳಲ್ಲಿ ಉದ್ದ ತೋಳಿನ, ಮೈ ಕೈ ಮುಚ್ಚುವಂತಹ ಉಡುಪುಗಳನ್ನು ಧರಿಸಲು ತಿಳಿಸಿ ಎಂದು ಅವರು ಸೂಚಿಸಿದರು.
ಜಿಪಿಎಸ್ ಫೋಟೋ ಮಾಹಿತಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ, ಡೇ ಕೇರ್ ಸೆಂಟರ್‌ಗಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಡೆಂಘೀ ರೋಗ ಹರಡದಂತೆ ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತರಿಂದ ಗರ್ಭಿಣಿ ಮಹಿಳೆಯರ ಅರೋಗ್ಯ ಸ್ಥಿತಿಗತಿಗಳ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಬೇಕು. ತಮ್ಮ ಆಯಾ ಶಾಲಾ ಕಾಲೇಜು, ಅಂಗನವಾಡಿ ಕೇಂದ್ರ, ಡೇ ಕೇರ್ ಸೆಂಟರ್‌ಗಳಲ್ಲಿ ಲಾರ್ವ ಉತ್ಪತ್ತಿಯ ಪ್ರಮಾಣವೂ ಶೂನ್ಯವಾಗಿ ಇರುವ ರೀತಿ ಕ್ರಮ ವಹಿಸಬೇಕು. ತೆಗೆದುಕೊಂಡ ಕ್ರಮಗಳ ಬಗ್ಗೆ ಜಿಪಿಎಸ್ ಫೋಟೋ ಮುಖಾಂತರ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.ತಾಯಂದಿರ ಸಭೆಗಳಲ್ಲಿ ಲಾರ್ವಗಳನ್ನು ತೋರಿಸಿ ಮಾಹಿತಿ ನೀಡಬೇಕು, ಕೈ ಬೇವಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು ಎಂದು ಅವರು ಹೇಳಿದರು.
----------------