ಉಪ್ಪಾರರ ಎಸ್ಟಿಗೆ ಸೇರಿಸೋದು ಸುಲಭದ ಮಾತಲ್ಲ: ಶಾಸಕ ಸಿ.ಪುಟ್ಟರಂಗಶೆಟ್ಟಿ

KannadaprabhaNewsNetwork | Published : Jul 29, 2024 12:47 AM

ಸಾರಾಂಶ

ಉಪ್ಪಾರ ಸಮಾಜ ಎಸ್ಟಿಗೆ ಸೇರಿಸಬೇಕು ಎಂಬ ಕೂಗಿದೆ. ಆದರೆ ಅದು ಸುಲಭದ ಮಾತಲ್ಲ ಎಂದು ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರೂ ಆದ ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ಗುಂಡ್ಲುಪೇಟೆಯಲ್ಲಿ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಗೀರಥ ಜಯಂತಿ । ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ । ಉಪ್ಪಾರ ಸಂಘಟನೆಗಳಿಂದ ಮಹರ್ಷಿಯ ಸಮಾರಂಭ । ಎಲ್ಲಕ್ಕೂ ಕಾಲ ಕೂಡಿ ಬರಬೇಕು

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಉಪ್ಪಾರ ಸಮಾಜ ಎಸ್ಟಿಗೆ ಸೇರಿಸಬೇಕು ಎಂಬ ಕೂಗಿದೆ. ಆದರೆ ಅದು ಸುಲಭದ ಮಾತಲ್ಲ ಎಂದು ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರೂ ಆದ ಚಾಮರಾಜನಗರ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಉಪ್ಪಾರ ಸಂಘಟನೆಗಳು ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಳವಾರ, ಮಡಿವಾಳ, ಗೊಲ್ಲ ಸಮಾಜ ಎಸ್ಟಿಗೆ ಸೇರಿಸಲು ಆಗಿಲ್ಲ ಎಂದು ಹೇಳಿದರು.

ಉಪ್ಪಾರ ಸಮಾಜ ಪ್ರವರ್ಗ ೧ರಲ್ಲಿ ಇದೆ. ಉಪ್ಪಾರ ಸಮಾಜ ಎಸ್ಟಿಗೆ ಸೇರಿಸಬೇಕು ಎಂಬ ಬಯಕೆ ನನ್ನಲ್ಲೂ ಇದೆ. ಆದರೆ ಕಾಲ ಕೂಡಿ ಬರಬೇಕಲ್ಲ, ಕಾಲ ಕೂಡಿ ಬರಲಿ ಆಗ ಪ್ರಯತ್ನಿಸೋಣ, ತಾಳ್ಮೆಯಿಂದಿರಿ ಎಂದರು.

ಉಪ್ಪಾರ ಸಮಾಜಕ್ಕೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಟಿಕೆಟ್‌ ನೀಡಬೇಕು ಎಂದು ಸಂಘಟಕರೊಬ್ಬರು ಹೇಳಿದ್ದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿ, ಟಿಕೆಟ್‌ ಕೇಳೋದು ಮುಖ್ಯವಲ್ಲ, ಎಲ್ಲಾ ಜನಾಂಗದ ಒಡನಾಟ ಮೊದಲು ಇರಬೇಕು. ಜತೆಗೆ ವಿಶ್ವಾಸ ಕೂಡ ಇರಬೇಕು ಎಂದು ತಿಳಿಸಿದರು.

ಉಪ್ಪಾರರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಅದೇ ಆಸ್ತಿಯಾಗಲಿದೆ. ಹಾಗಾಗಿ ಉಪ್ಪಾರರು ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು, ಸಮಾಜದಲ್ಲಿ ಶಿಕ್ಷಿತರಾದರೆ ಸಮಾಜ ಮುಖ್ಯವಾಹಿನಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಉಪ್ಪಾರ ಸಮುದಾಯ ಭವನ ೮ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದರು.

ಜಿಪಂ,ತಾಪಂ ಚುನಾವಣೇಲಿ ಉಪ್ಪಾರರಿಗೆ ಅವಕಾಶ:

ಶಾಸಕ ಗಣೇಶ್‌ ಪ್ರಸಾದ್‌ ಮಾತನಾಡಿ, ಉಪ್ಪಾರ ಸಮಾಜಕ್ಕೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಅವಕಾಶ ಕಲ್ಪಿಸುವುದಾಗಿ ಘೋಷಿಸಿದರು.

ಉಪ್ಪಾರ ಭವನದ ಸುತ್ತುಗೋಡೆಗೆ ನಾನು ಸಹಾಯ ಮಾಡಿದ್ದೇನೆ. ಸಮುದಾಯ ಭವನಕ್ಕೂ ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟರ ಸಹಾಯ ಪಡೆದು ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪುಟ್ಟರಂಗಶೆಟ್ಟರು ಮುಂದೆ ಮಂತ್ರಿಯಾಗುವ ಎಲ್ಲಾ ಲಕ್ಷಣಗಳೂ ಇವೆ. ಹಿಂದೆಯೇ ಮಂತ್ರಿಯಾಗಬೇಕಿತ್ತು. ಕಡೆ ಗಳಿಗೆಯಲ್ಲಿ ಕೈ ತಪ್ಪಿದೆ ಎಂದರು.

ಅದ್ಧೂರಿ ಮೆರವಣಿಗೆ:

ಗುಂಡ್ಲುಪೇಟೆಯಲ್ಲಿ ಭಗೀರಥ ಉಪ್ಪಾರ ಸಂಘಟನೆಗಳು ಆಯೋಜಿಸಿದ್ದ ಭಗೀರಥ ಮೆರವಣಿಗೆ ಅದ್ಧೂರಿಯಾಗಿ ಭಾನುವಾರ ನಡೆಯಿತು.

ಪಟ್ಟಣದ ಹಳೇ ಬಸ್‌ ನಿಲ್ದಾಣದ ಆವರಣದಲ್ಲಿ ಭಗೀರಥ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ,ಎಚ್.ಎಂ. ಗಣೇಶ್‌ ಪ್ರಸಾದ್‌ ಜೊತೆಗೂಡಿ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ತಾಲೂಕಿನ ಸುಮಾರು ೨೦ ಕ್ಕೂ ಹೆಚ್ಚು ಭಗೀರಥ ಭಾವಚಿತ್ರ ಹೊತ್ತ ಆಟೋಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಡಿಜೆ ಸೌಂಡ್‌ ಜನರಿಗೆ ಕಿರಿ ಕಿರಿ!:

ಗುಂಡ್ಲುಪೇಟೆಯಲ್ಲಿ ಭಾನುವಾರ ನಡೆದ ಭಗೀರಥ ಜಯಂತಿಯಲ್ಲಿ ಡಿಜೆ ಸೌಂಡ್‌ ಮಾಡಿದ್ದು, ಜನರ ಆಕ್ರೋಶಕ್ಕೆ ಪೊಲೀಸರು ತುತ್ತಾದರು.

ಕಳೆದ ತಿಂಗಳು ನಡೆದ ಬಸವ ಜಯಂತಿಯಲ್ಲೂ ಡಿಜೆ ಸೌಂಡಿಗೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಮಾಜಿ ಶಾಸಕ ಸಿ.ಎಸ್. ನಿರಂಜನ್‌ ಕುಮಾರ್‌, ಸರಗೂರು ಅಯ್ಯನ ಮಠದ ಮಹದೇವಸ್ವಾಮಿ, ಉಪ್ಪಾರ ಸಂಘದ ಅಧ್ಯಕ್ಷ ಶಿವಶಂಕರ್‌, ಉಪ್ಪಾರ ಸಮಾಜದ ಮುಖಂಡ ಎಂ.ಜಿ. ರಾಮಚಂದ್ರ, ಮುಖಂಡರಾದ ಮಹದೇವಶೆಟ್ಟಿ, ಬಿ.ಜಿ. ಶಿವಕುಮಾರ್‌, ಕೃಷ್ಣಸ್ವಾಮಿ, ತೊಂಡವಾಡಿ ರವಿ, ಮಲಿಯಶೆಟ್ಟಿ, ಬೇಗೂರು ಶಿವಮೂರ್ತಿ ಇದ್ದರು.

Share this article