ಮೆಟ್ರೋಗೆ ವರ್ಷಾಂತ್ಯಕ್ಕೆ ಹೆಚ್ಚುವರಿ ರೈಲು ಸೇರ್ಪಡೆ

KannadaprabhaNewsNetwork | Updated : Apr 06 2024, 07:11 AM IST

ಸಾರಾಂಶ

ನಮ್ಮ ಮೆಟ್ರೋಗೆ ಈಗ ಹೊಸದಾಗಿ ರೈಲುಗಳನ್ನು ಸೇರ್ಪಡೆ ಮಾಡಲು ವರ್ಷಾಂತ್ಯದ ವರೆಗೆ ಕಾಯಬೇಕಿದೆ. ಚೀನಾದಿಂದ ರೈಲುಗಳು ಬರಬೇಕಿವೆ.

ಮಯೂರ್‌ ಹೆಗಡೆ

 ಬೆಂಗಳೂರು :  ನಮ್ಮ ಮೆಟ್ರೋದ ಪ್ರಸ್ತುತ ನೇರಳೆ, ಹಸಿರು ಮಾರ್ಗಕ್ಕೆ ಬರಬೇಕಿರುವ ಇಪ್ಪತ್ತು ಹೆಚ್ಚುವರಿ ರೈಲುಗಳು ವರ್ಷಾಂತ್ಯದಿಂದ ಹಂತ ಹಂತವಾಗಿ ಸೇರ್ಪಡೆ ಆಗುವ ನಿರೀಕ್ಷೆಯಿದೆ. ಬಳಿಕವಷ್ಟೇ ಪ್ರಯಾಣಿಕರ ದಟ್ಟಣೆ ಸಮಸ್ಯೆ ಪರಿಹಾರ ಆಗುವ ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ಪ್ರಸ್ತುತ ಪ್ರತಿದಿನ ಪೀಕ್‌ ಅವರ್‌ನಲ್ಲಿ, ವಾರಾಂತ್ಯದಲ್ಲಿ ಏಕೈಕ ಇಂಟರ್‌ಚೇಂಜ್‌ ನಿಲ್ದಾಣ ಮೆಜೆಸ್ಟಿಕ್‌, ನೇರಳೆ ಮಾರ್ಗದ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ವೈಟ್‌ಫೀಲ್ಡ್‌ ಹಾಗೂ ಹಸಿರು ಮಾರ್ಗದ ನಿಲ್ದಾಣದಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ನಿಲ್ದಾಣಗಳಲ್ಲಿ ಮಾತ್ರವಲ್ಲದೆ, ರೈಲುಗಳಲ್ಲಿಯೂ ಹೆಚ್ಚು ಜನ ಸಂಚರಿಸಬೇಕಾಗಿದೆ. ಕಳೆದ ಮೂರು ತಿಂಗಳಲ್ಲಿ ಮೆಟ್ರೋ 6.5 ಲಕ್ಷ ದಿಂದ ಗರಿಷ್ಠ 7.5 ಲಕ್ಷ ಪ್ರಯಾಣಿಕರನ್ನು ಕಂಡಿದೆ.

ನೇರಳೆ ಮಾರ್ಗ ಚಲ್ಲಘಟ್ಟ-ವೈಟ್‌ಫೀಲ್ಡ್‌ವರೆಗೆ ಪೂರ್ಣ ಸಂಚಾರ ಆರಂಭಿಸಿದ ಬಳಿಕ ಹಸಿರು ಮಾರ್ಗ (ನಾಗಸಂದ್ರ-ಸಿಲ್ಕ್‌ ಇನ್‌ಸ್ಟಿಟ್ಯೂಟ್‌) ಸೇರಿ ಒಟ್ಟಾರೆ ಮೆಟ್ರೋದಲ್ಲಿ ನಿರೀಕ್ಷಿಸಿದಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿಲ್ಲ. ಅದಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮದ ಬಳಿ ಅಗತ್ಯ ಸಂಖ್ಯೆಯಷ್ಟು ಮೆಟ್ರೋ ರೈಲುಗಳು ಇಲ್ಲದಿರುವುದು ಹಾಗೂ ಕೊನೆ ಮೈಲಿ ಸಂಪರ್ಕ ಇನ್ನೂ ಮರೀಚಿಕೆ ಆಗಿರುವುದು ಕಾರಣ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

2019ರ ಬಿಎಂಆರ್‌ಸಿಎಲ್‌ ಚೀನಾದ ಸಿಆರ್‌ಆರ್ ಒಪ್ಪಂದದಂತೆ 216 ಬೋಗಿಗಳು (36 ರೈಲು) ಕೋವಿಡ್‌, ಮೇಕ್‌ ಇನ್‌ ಇಂಡಿಯಾ ಪಾಲಿಸಿ ಸೇರಿ ಇತರೆ ತಾಂತ್ರಿಕ ಕಾರಣದಿಂದ ಸಕಾಲಕ್ಕೆ ಬಂದಿಲ್ಲ. ಕಳೆದ ಫೆಬ್ರವರಿಯಲ್ಲಿ ಹಳದಿ ಮಾರ್ಗಕ್ಕೆ ಬೇಕಾದ ಆರು ಬೋಗಿಯ ಒಂದು ರೈಲು ಚೀನಾದಿಂದ ಬಂದಿದ್ದು, ಏಫ್ರಿಲ್‌ ಅಂತ್ಯದ ವೇಳೆಗೆ ಇನ್ನೊಂದು ಡ್ರೈವರ್‌ಲೆಸ್‌ ರೈಲು ಅಲ್ಲಿಂದ ಪೂರೈಕೆ ಆಗುವ ಸಾಧ್ಯತೆಯಿದೆ.

20 ರೈಲುಗಳ ಸೇರ್ಪಡೆ:

ಬಾಕಿ 34 ರೈಲುಗಳನ್ನು ಚೀನಾದ ಸಿಆರ್‌ಆರ್‌ಸಿ ಕಂಪನಿಯ ಭಾರತದ ಸಹವರ್ತಿ ತೀತಾಘರ್‌ ರೈಲ್‌ ಸಿಸ್ಟಮ್ಸ್‌ ಕಂಪನಿ ಒದಗಿಸಲಿದೆ. ಈ ಪೈಕಿ ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ಸಿಗ್ನಲಿಂಗ್‌ ವ್ಯವಸ್ಥೆಯ 20 ರೈಲುಗಳು, ಸಿಬಿಟಿಸಿ ತಂತ್ರಜ್ಞಾನದ 14 ರೈಲುಗಳು ಸೇರಿವೆ. ಹಸಿರು-ನೇರಳೆ ಮಾರ್ಗಕ್ಕೆ 20 ಡಿಟಿಜಿ ರೈಲುಗಳು ನಿಯೋಜನೆ ಆಗಬೇಕಿದೆ. ಬಹುತೇಕ ಇದೇ ವರ್ಷಾಂತ್ಯದ ಒಳಗೆ ತೀತಾಘರ್‌ ಕಂಪನಿ ಈ ರೈಲುಗಳ ಪೂರೈಕೆ ಆರಂಭಿಸುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಡ್ರೈವರ್‌ಲೆಸ್‌ ರೈಲುಗಳಂತೆ ಈ ರೈಲುಗಳು ಕೂಡ ಹೊಸ ಮಾದರಿಯ ವಿನ್ಯಾಸದಲ್ಲಿ ಇರಲಿವೆ. ಹೀಗಾಗಿ ಹೆಚ್ಚಿನ ತಪಾಸಣೆಗೆ ಒಳಗೊಳ್ಳುವ ಅಗತ್ಯ ಇರಲಿದೆ. ಪ್ರಯಾಣಿಕರ ತೊಂದರೆ ನಿವಾರಣೆಗೆ ಆದಷ್ಟು ಬೇಗ ಈ ರೈಲುಗಳನ್ನು ಸೇರ್ಪಡೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.ಶೀಘ್ರ ಹೆಚ್ಚುವರಿ ರೈಲು ಅಗತ್ಯ

ಬಿಎಂಆರ್‌ಸಿಎಲ್‌ ಆರಂಭದ ಮೊದಲ ಹಂತವಾಗಿ 45 ಕಿ.ಮೀ. ಪ್ರಯಾಣ ಸೇವೆ ಒದಗಿಸುತ್ತಿದ್ದಾಗ 50 ರೈಲುಗಳನ್ನು ಒಳಗೊಂಡಿತ್ತು. ಈಗ ಒಟ್ಟಾರೆ 73.81 ಕಿ.ಮೀ. ವಿಸ್ತರಣೆ ಆದರೂ ಕೇವಲ 57 ರೈಲುಗಳು ಸೇವೆಯಲ್ಲಿವೆ. ಮಾರ್ಗದಲ್ಲಿ ಸೇವೆ ಈಗಲೇ ಕನಿಷ್ಠ 10-15 ಹೆಚ್ಚುವರಿ ರೈಲುಗಳ ಅಗತ್ಯವಿದೆ. ಸದ್ಯ ಬಿಎಂಆರ್‌ಸಿಎಲ್‌ ಬಳಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಶಾರ್ಟ್‌ಲೂಪ್‌ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಇದು ತಾತ್ಕಾಲಿಕ ಪರಿಹಾರವಷ್ಟೇ. ಆದಷ್ಟು ಬೇಗ ಹೆಚ್ಚುವರಿ ರೈಲುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮೆಟ್ರೋ ರೈಲ್ವೇ ತಜ್ಞರು ಹೇಳುತ್ತಾರೆ.ಬಾಕ್ಸ್‌ತಿಂಗಳು ಸರಾಸರಿ ಪ್ರಯಾಣಿಕರು

ಮಾರ್ಚ್‌ 7 ಲಕ್ಷಫೆಬ್ರವರಿ 7.5 ಲಕ್ಷಜನವರಿ 6.72 ಲಕ್ಷ

ಡಿಸೆಂಬರ್‌ 6.88 ಲಕ್ಷ

--ನಿಲ್ದಾಣ ಪ್ರಯಾಣಿಕರ ಸರಾಸರಿ (ದಿನಕ್ಕೆ)ಮೆಜೆಸ್ಟಿಕ್‌ 41800+

ಇಂದಿರಾನಗರ 29700+

ಬೈಯಪ್ಪನಹಳ್ಳಿ 23000+

Share this article