ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಪೂರೈಕೆಯಾಗುವ ರಸಗೊಬ್ಬರ ದಾಸ್ತಾನು ಮಾಡುವುದರ ಜೊತೆಗೆ, ಹೊರ ಜಿಲ್ಲೆಗೆ ರಸಗೊಬ್ಬರ ಸಾಗಾಣಿಕೆ ಮಾಡದಂತೆ ಚೆಕ್‌ಪೋಸ್ಟ್‌ಗಳಲ್ಲಿ ಅಗತ್ಯ ತಪಾಸಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಲಹೆ ನೀಡಿದರು.
ಮಾರುಕಟ್ಟೆ ಫೆಡರೇಷನ್ ಮತ್ತು ಬೀಜ ನಿಗಮದಿಂದ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ದಾಸ್ತಾನು ಮಾಡಿಕೊಳ್ಳುವುದು. ಪ್ರಮುಖವಾಗಿ ಯೂರಿಯಾ ಮತ್ತು ಡಿಐಪಿ ರಸಗೊಬ್ಬರವನ್ನು ಬೇಡಿಕೆಯಂತೆ ದಾಸ್ತಾನು ಮಾಡಿಕೊಳ್ಳುವುದು, ಪ್ರತೀ ತಿಂಗಳು ಪೂರೈಕೆಯಾಗುವ ರಸಗೊಬ್ಬರ ಸಂಬಂಧ ಕಾಲ ಕಾಲಕ್ಕೆ ರಸಗೊಬ್ಬರ ಮಾರಾಟಗಾರರು ಹಾಗೂ ಕಂಪನಿ ಮತ್ತು ಸಹಕಾರ ಸೊಸೈಟಿಯವರು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.ರಸಗೊಬ್ಬರ ಸಮರ್ಪಕವಾಗಿ ಸರಬರಾಜು ಆಗಬೇಕು, ಕೃಷಿಕರಿಂದ ಯಾವುದೇ ರೀತಿ ದೂರು ಬಾರದಂತೆ ರಸಗೊಬ್ಬರ ಮಾರಾಟಗಾರರು, ಕಂಪನಿಗಳು, ಸಹಕಾರ ಸಂಘಗಳು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ರೈತರಿಗೆ ಯಾವುದೇ ರೀತಿಯ ಕಳಪೆ ರಸಗೊಬ್ಬರ ಸರಬರಾಜು ಆಗದಂತೆ ಎಲ್ಲ ರಸಗೊಬ್ಬರ ತಯಾರಿಕ ಸಂಸ್ಥೆ ಹಾಗೂ ಎಲ್ಲ ಖಾಸಗಿ ಮತ್ತು ಸಹಕಾರ ಸಂಘಗಳು ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಯೂರಿಯಾ ಮತ್ತು ಡಿ.ಎ.ಪಿ. ರಸಗೊಬ್ಬರಗಳಿಗೆ ರೈತರಿಂದ ಹೆಚ್ಚಿನ ಬೇಡಿಕೆ ಇದ್ದು, ಸಕಾಲದಲ್ಲಿ ರೈತರಿಗೆ ರಸಗೊಬ್ಬರಗಳನ್ನು ದೊರೆಯುವಂತೆ ಮಾಡುವ ಸಂಬಂಧ ಈಗಾಗಲೇ ಕೇಂದ್ರ ಕಚೇರಿಗೆ ಜಿಲ್ಲೆಗೆ ಸರಬರಾಜು ಮಾಡಲಾಗುವ ಯೂರಿಯಾ ಮತ್ತು ಡಿ.ಎ.ಪಿ ರಸಗೊಬ್ಬರ ಪ್ರಮಾಣದಲ್ಲಿ ಶೇ.25ರಷ್ಟು ರಸಗೊಬ್ಬರಗಳನ್ನು ಕಾಪು ದಾಸ್ತಾನೀಕರಿಸಲು ಕೋರಲಾಗಿ, ಈ ಸಂಬಂಧ ಕೇಂದ್ರ ಕಚೇರಿಯಿಂದ ಪತ್ರ ಬಂದಿರುವುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿರುವ ರಸಗೊಬ್ಬರಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) ಮತ್ತು ಎಲ್ಲ ರಸಗೊಬ್ಬರ ಪರಿವೀಕ್ಷಕರಿಗೆ ಕಾಲಕಾಲಕ್ಕೆ ಪರಿಶೀಲನೆ ಮಾಡುವಂತೆ ಹಾಗೂ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ 1985 ಹಾಗೂ ಅಗತ್ಯ ವಸ್ತುಗಳ ಕಾಯ್ದೆ 1955 ಪ್ರಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಕ್ರಮವಹಿಸಲು ಸೂಚಿಸಲಾಗಿರುವುದಾಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು.
ಹಾಗೆಯೇ ರಸಗೊಬ್ಬರ ಮಾರಾಟಗಾರರಲ್ಲಿರುವ ಪಿಒಎಸ್ ಯಂತ್ರದಲ್ಲಿ ಅನೇಕ ತಾಂತ್ರಿಕ ದೋಷಗಳ ಕಾರಣದಿಂದಾಗಿ ನಿಗದಿತ ಸಮಯದೊಳಗೆ ರಸಗೊಬ್ಬರಗಳ ಮಾರಾಟದ ವಿವರವನ್ನು ಪಿಒಎಸ್ ಯಂತ್ರದಲ್ಲಿ ತೀರುವಳಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಮುಂಬರುವ ಮುಂಗಾರು ಹಂಗಾಮಿನ ಪೂರ್ವದಲ್ಲಿ ಎಲ್ಲ ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರಿಗೆ ಒಂದು ದಿನ ಕಾರ್ಯಗಾರ ಏರ್ಪಡಿಸಿ ಪಿಒಎಸ್ ಯಂತ್ರದ ಬಳಕೆ ಹಾಗೂ ಕೃಷಿ ಪರಿಕರಗಳ ಮಾರಾಟ ಕಾಯ್ದೆಗಳ ಬಗ್ಗೆ ಒಂದು ದಿನದ ತರಬೇತಿ ನೀಡಲಾಗುವುದು ಎಂದರು.
2024ರ ಮುಂಗಾರು ಸಂದರ್ಭದಲ್ಲಿ ಯೂರಿಯಾ 19366 ಮೆ.ಟ., ಡಿಎಪಿ 7501, ಎಂಒಪಿ 15884, ಕಾಂಪ್ಲೆಕ್ಸ್ 34,558 ಮತ್ತು ಎಸ್‌ಎಸ್‌ಪಿ 3,637 ಒಟ್ಟು 80,946 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಅದೇ ರೀತಿ ಹಿಂಗಾರು ಸಂದರ್ಭದಲ್ಲಿ ಯೂರಿಯಾ 5307 ಮೆ.ಟಿ., ಡಿಎಪಿ 1709, ಎಂಒಪಿ 5047, ಕಾಂಪ್ಲೆಕ್ಸ್ 6486, ಎಸ್‌ಎಸ್‌ಪಿ 584 ಒಟ್ಟು 19,133 ಮೆಟ್ರಿಕ್ ಟನ್ ಬೇಡಿಕೆ ಇತ್ತು. ಅದರಂತೆ ಪ್ರಸಕ್ತ ಸಾಲಿನಲ್ಲಿ 99,893 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಪೂರೈಕೆ ಆಗಿತ್ತು. ಇಲ್ಲಿಯವರೆಗೆ ಒಟ್ಟು ಲಭ್ಯತೆ 1,31,502 ಮೆಟ್ರಿಕ್ ಟನ್ ಆಗಿದ್ದು, 1,04,396 ಮೆ.ಟ.ರಸಗೊಬ್ಬರ ವಿತರಣೆಯಾಗಿದ್ದು, 27,106 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಉಳಿಕೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ವಿವರಿಸಿದರು.