ಕನ್ನಡಪ್ರಭ ವಾರ್ತೆ ಆಳಂದ
ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಅವರು ಬುಧವಾರ ಇಡೀ ದಿನ ಕ್ಷೇತದಲ್ಲಿ ಹಲವು ಕಾರ್ಯಚಟುವಟಿಗಳನ್ನು ಕೈಗೊಂಡು ಜನರಿಗೆ ಭೇಟಿ ಮಾಡಿದರು.ಹೊನ್ನಳ್ಳಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಕೆರೆಗೆ ಮಳೆ ನೀರು ಭರ್ತಿಯಾದ ಹಿನ್ನೆಲೆಯಲ್ಲಿ ರೈತರೊಂದಿಗೆ ಸೇರಿ ಬಾಗಿನ ಅರ್ಪಿಸಿದರು. ಇಲಾಖೆ ಎಇಇ ಶಾಂತಪ್ಪ ಜಾಧವ, ಮುಖಂಡ ಸುಭಾಷ ಫೌಜಿ, ಸಂಜಯ ನಾಯಕ ಮಹಿಳೆಯರು, ಮುಖಂಡರು ಇದ್ದರು.
ಬಳಿಕ ಶಾಸಕರು, ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯೋಜಿಸಿದ್ದ ಪೋಷಣಾ ಅಭಿಯಾನ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಹಾಗೂ ಔಷಧಿ ಕಿಟ್, ಮಕ್ಕಳ ತೂಕದ ಯಂತ್ರಗಳು ಮತ್ತು ಸುಕನ್ಯ ಸಮೃದ್ಧಿ ಫಲಾನುಭವಿಗಳಿಗೆ ಪಾಸ್‌ಬುಕ್ ವಿತರಿಸಿ, ಸರ್ಕಾರದಿಂದ ಮಕ್ಕಳಿಗೆ ನೀಡಿದ ಆಹಾರ ಸಾಮಗ್ರಿಯನ್ನು ಸಮರ್ಪಕವಾಗಿ ಮುಟ್ಟಿಸಿ ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯ ಸುಧಾರಣೆ ಆಗುವಂತಾಗಬೇಕು ಎಂದು ಹೇಳಿದರು.ಸಿಡಿಪಿಒ ಶ್ರೀಕಾಂತ ಮೇಂಗಜಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾಪಂ ಇಒ ಮಾನಪ್ಪ ಕಟ್ಟಿಮನಿ ಮೊದಲಾದವರು ಇದ್ದರು.ಈ ಮೊದಲು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ಯಾಕ್ಟರ್ ಏಟ್ ಇಂಜಕ್ಷನ್ ಮೊದಲು ಬಾರಿ ವಿತರಣೆಗೆ ಶಾಸಕ ಬಿ.ಆರ್. ಪಾಟೀಲ ಅವರು ಚಾಲನೆ ನೀಡಿದರು. ಕೆಲವೊಬ್ಬರಲ್ಲಿ ಅಪಘಾತದಲ್ಲಿ ಪೆಟ್ಟುಬಿದ್ದು ರಕ್ತ ಚಿಮ್ಮಿದರೆ ನಿಲ್ಲುವುದಿಲ್ಲ. ಆದರೆ ಈ ಇಂಜಕ್ಷನ್‌ನಿಂದ ಹರಿಯುವ ರಕ್ತವನ್ನು ನಿಲ್ಲಿಸಲು ಸಾಧ್ಯ. ಇಂದಿನಿಂದ ಈ ಆಸ್ಪತ್ರೆಯಲ್ಲಿ ಲಭ್ಯವಾಗಲಿದ್ದು, ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ, ಡಾ. ಉಮಾಕಾಂತ, ಡಾ. ನಿಲೇಶ ಪಾಟೀಲ, ಶ್ರೀಕಾಂತ ಕೆಂಗೇರಿ ಇತರರು ಇದ್ದರು.ಬಳಿಕ ಪುರಸಭೆಯಲ್ಲಿ ಸಭೆ ನಡೆಸಿದ ಶಾಸಕರು, ಅಧಿಕಾರಿಗಳ ಮತ್ತು ಸದಸ್ಯರ ಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳ ಆಲಿಸಿ ತ್ವರಿತ ಕ್ರಮಕೈಗೊಳ್ಳಬೇಕು. ಕೆಲಸ ಮಾಡದ ಸಿಬ್ಬಂದಿ ಸಹಿಸಿಕೊಳ್ಳದೆ ಕ್ರಮ ಜರುಗಿಸಬೇಕು ಎಂದು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಬೀದಿ ಸ್ವಚ್ಛತೆ ಕುರಿತು ಸಲಹೆ ನೀಡಿದರು.
ಮುಖ್ಯಾಧಿಕಾರಿ ಸಂಗಮೇಶ ಪನ್ನಶಟ್ಟಿ, ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ ಸೇರಿದಂತೆ ಪುರಸಭೆ ಸದಸ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಸರ್ಕಾರಿ ಪಿಯು ಕಾಲೇಜಿನ ಹೊಸ್ ಕಟ್ಟಡ ಬಿರುಕು ಬಿಟ್ಟ ದೂರಿನನ್ವಯ ಭೇಟಿ ನೀಡಿದ ಶಾಸಕರು ಹೊಸ ಕಟ್ಟಡದಲ್ಲಿ ಮಳೆ ನೀರು ಸೂರಿಕೆಯಾದರೆ ಹೇಗೆ ಎಂದು ಪ್ರಶ್ನಿಸಿ ಹಾಜರಿದ್ದ ಪಿಯು ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಅವರಿಗೆ ಕ್ರಮ ಜರುಗಿಸುವಂತೆ ಸೂಚಿಸಿದರು. ಸಂಜೆ ಭೂಸನೂರ ಸೇರಿ ಇನ್ನಿತರ ಗ್ರಾಮಗಳ ಸಾರ್ವಜನಿಕರನ್ನು ಶಾಸಕರು ಭೇಟಿ ಮಾಡಿದರು.