ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಮೋಟೆಗೌಡನಪಾಳ್ಯದ ಶ್ರೀ ಮಹದೇಶ್ವರ ಸ್ವಾಮಿಯ 13ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 11ನೇ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿಸಲಾಯಿತು.ಮಾದೇಶ್ವರಸ್ವಾಮಿ ರಥೋತ್ಸವದ ಪ್ರಯುಕ್ತ ಭಾನುವಾರ ಸಂಜೆಯಿಂದಲೇ ವಿಶೇಷ ಪೂಜಾ ಕಾರ್ಯಗಳು ನೇರವೇರಿದ್ದು, ಸೋಮವಾರ ಮಧ್ಯಾಹ್ನ ರಥೋತ್ಸವಕ್ಕೆ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚಾಲನೆ ನೀಡಿದರು. ಸಾವಿರಾರು ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು. ಸಂಜೆ ದೇವಾಲಯದ ಮುಂಭಾಗದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.
ಶ್ರೀ ಮಹದೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಬೆಟ್ಟದ ಮೇಲೆ ನೆಲಸಿರುವ ಮಹದೇಶ್ವರ ಸ್ವಾಮಿ ಬಹಳ ಶಕ್ತಿಶಾಲಿ ದೇವರಾಗಿದ್ದು, ಮಲೆ ಮಹದೇಶ್ವರ ಸ್ವಾಮಿ ದರ್ಶನ ಮಾಡಲು ಸಾಧ್ಯವಾಗದವರು ಮೋಟೆಗೌಡನಪಾಳ್ಯದಲ್ಲಿ ಬೆಟ್ಟದ ಮೇಲಿನ ಮಾದೇಶ್ವರನ ದರ್ಶನ ಮಾಡಿದರೆ ಅಷ್ಟೇ ಪುಣ್ಯ ಬರುತ್ತದೆ. ಈ ಸುತ್ತಮುತ್ತಲ ಗ್ರಾಮಗಳಲ್ಲಿ ಸ್ವಾಮಿಯ ಒಕ್ಕಲು ಮನೆತನಗಳು ಬಹಳಷ್ಟು ಇವೆ. ಕಳೆದ 13 ವರ್ಷಗಳಿಂದ ಟ್ರಸ್ಟ್‌ನ್ನು ರಚಿಸಿಕೊಂಡು ಪ್ರತಿ ವರ್ಷ ಜಾತ್ರೆಯನ್ನು ಸಂಭ್ರಮ, ಸಡಗರ ಹಾಗೂ ಅದ್ಧೂರಿಯಿಂದ ಆಚರಿಸಿಕೊಂಡು ಬರುತ್ತಿದ್ದು, ಕುರುಪಾಳ್ಯ, ಚನ್ನಮ್ಮನಪಾಳ್ಯ, ಮಾಗಡಿ ಟೌನ್, ಮೋಟೆಗೌಡರಪಾಳ್ಯ, ಹನುಮಾಪುರ, ಕಲ್ಯಾ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳಿಂದ ಸಾವಿರಾರು ಮಂದಿ ರಥೋತ್ಸವಕ್ಕೆ ಆಗಮಿ, ಯಶಸ್ವಿಯಾಗಿ ರಥೋತ್ಸವ ನಡೆಯುತ್ತಿದೆ ಎಂದು ಹೇಳಿದರು.ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾದೇಶ್ವರ ಸ್ವಾಮಿ ದೇವಾಲಯದ ಟ್ರಸ್ಟ್ ಪದಾಧಿಕಾರಿಗಳು ದಾನಿಗಳು, ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ನಾಮಕರಣ, ಮದುವೆ, ಮುಂಜಿಯಂತಹ ಕಾರ್ಯಗಳನ್ನು ನಡೆಸಲು ಸಮುದಾಯ ಭವನ ಬಡ ಗ್ರಾಮಸ್ಥರಿಗೆ ಬಹಳಷ್ಟು ಅನಾನುಕೂಲವಾಗುವ ಹಿನ್ನಲೆಯಲ್ಲಿ ಈಗಾಗಲೇ ಶೇ.60ರಷ್ಟು ಕಾಮಗಾರಿ ಮುಗಿದಿದ್ದು, ಪೂರ್ಣಗೊಂಡ ನಂತರ ಬಡವರಿಗೆ ಕಡಿಮೆ ಬೆಲೆಯಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಮಾದೇಶ್ವರ ಸ್ವಾಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಜಯರಂಗಯ್ಯ, ಪದಾಧಿಕಾರಿಗಳಾದ ಮಲ್ಲಿಕಾರ್ಜುನಸ್ವಾಮಿ, ಶಂಕರ್, ಹನುಮಾಪುರ ಚಿಕ್ಕಣ್ಣ, ಶಿಕ್ಷಕ ನಾಗರಾಜು, ಚನ್ನಪ್ಪ, ಅರಳೇಪೇಟೆ ಅಕ್ಕನ ಬಳಗದ ಅಧ್ಯಕ್ಷೆ ಗಾಯತ್ರಿ, ಶ್ರೀನಿವಾಸ್, ಆರ್ಚಕ ದೇವರಾಜು, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಬಿ.ಮಹೇಶ್, ಬಿಂಎಂಟಿಸಿ ರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.