ಆದಿ ಕರ್ನಾಟಕದ ಜನಾಂಗದ ಸಾಂಪ್ರದಾಯಿಕ ಪೊರಕೆ ತಯಾರಿ ಇಳಿಕೆ

KannadaprabhaNewsNetwork | Published : Dec 3, 2023 1:00 AM

ಸಾರಾಂಶ

ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಕಣ್ವಬಲಮುರಿ, ವಾಟೆಕಾಡು ಆದಿ ಕರ್ನಾಟಕ ಜನಾಂಗದ ಸುಮಾರು 15ಕ್ಕೂ ಅಧಿಕ ಕುಟುಂಬಗಳು ತಮ್ಮ ಹಿರಿಯರ ಕಾಲದಿಂದಲೂ ಪೊರಕೆಗಳನ್ನು ತಯಾರಿಸಿ ಮಾರಾಟ ಮಾಡಿಯೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಭತ್ತದ ಕೊಯ್ಲು ಕೆಲಸ ಆರಂಭವಾಯಿತು ಎಂದರೆ ಜಿಲ್ಲೆಯ ಬಹುತೇಕ ಎಲ್ಲೆಡೆ ಪೊರಕೆಗಳಿಗೆ ಬಲುಬೇಡಿಕೆ. ಆದರೆ ಬೇಡಿಕೆ ಏರಿದಂತೆ ಸಮಾನಾಂತರವಾಗಿ ಪೊರಕೆ ತಯಾರಕರ ಬವಣೆ ಏರುತ್ತಿದೆ.

ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಕಣ್ವಬಲಮುರಿ, ವಾಟೆಕಾಡು ಆದಿ ಕರ್ನಾಟಕ ಜನಾಂಗದ ಸುಮಾರು 15ಕ್ಕೂ ಅಧಿಕ ಕುಟುಂಬಗಳು ತಮ್ಮ ಹಿರಿಯರ ಕಾಲದಿಂದಲೂ ಪೊರಕೆಗಳನ್ನು ತಯಾರಿಸಿ ಮಾರಾಟ ಮಾಡಿಯೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿ ಮಾಡುವ ರೈತರ ಸಂಖ್ಯೆ ಇಳಿಮುಖಗೊಳ್ಳುತ್ತಿದ್ದಂತೆ ಪೊರಕೆ ತಯಾರಿಸಿ ಬದುಕು ಕಂಡುಕೊಂಡಿರುವವರ ಬದುಕಿನ ಚಿತ್ರಣವನ್ನೇ ಬದಲಿಸಿದೆ. ಪೊರಕೆಗೆ ಕಾಡಿನಲ್ಲಿ ದೊರಕುವ ಅಗತ್ಯವಿರುವ ಕಚ್ಚಾ ಸಾಮಗ್ರಿಗಳನ್ನು ತಂದು ಕಣ್ವಬಲಮುರಿಯಲ್ಲಿ ಇವರು ಪೊರಕೆ ತಯಾರಿಸುತ್ತಾರೆ. ಪೊರಕೆ, ಕಸಬರಿಕೆ, ಹಿಡುಗಲು, ಮಾಯಿಪು ಮೊದಲಾದ ಹೆಸರುಗಳಿಂದ ಬಳಕೆಯಲ್ಲಿರುವ ಪೊರಕೆಗಳಲ್ಲಿ ಇಲ್ಲಿನ ಮಂದಿ ಮೂರು ತರಹದ ಪೊರಕೆಗಳನ್ನು ತಯಾರಿಸುತ್ತಾರೆ. ಅವುಗಳೆಂದರೆ ಮನೆ ಚೀಪೆ, ತಾಳಿ ಚೀಪೆ ಹಾಗೂ ಕಡ್ಡಿಚೀಪೆ.

ತಾಳಿ ಚೀಪೆ: ಇದಕ್ಕೆ ಬೇಕಾದ ಮೂಲಕಚ್ಚ ಸಾಮಗ್ರಿಗಳು ನೆರೆಯ ಕೇರಳ ರಾಜ್ಯಕ್ಕೆ ಐದರಿಂದ ಹತ್ತು ಜನರ ಗುಂಪಾಗಿ ತೆರಳಿ ಅಲ್ಲಿ ವಾರಗಟ್ಟಲೇ ಇದ್ದು ಬೇಕಾದ ಕಚ್ಚಾ ಸಾಮಗ್ರಿಗಳನ್ನು ಕಾಡುಬೆಟ್ಟಗಳಲ್ಲಿ ಅಲೆದಾಡಿ ಕಾಡು ಪ್ರಾಣಿಗಳಿಂದ ಜೀವಜೀವ ಭಯವಿದ್ದರೂ ಸಂಗ್ರಹಿಸುತ್ತೇವೆ ಎನ್ನುತ್ತಾರೆ ಇಲ್ಲಿಯ ಪೊರಕೆ ಕಸುಬುದಾರರು.

ಇಷ್ಟು ಮಾತ್ರವಲ್ಲವೆ ಕಕ್ಕಬೆ ,ತಡಿಯಂಡಮೊಳ್ ಬೆಟ್ಟ, ಕಬ್ಬೆಬೆಟ್ಟ ಸೇರಿದಂತೆ ಸ್ಥಳಿಯ ಕಾಡು ಬೆಟ್ಟಗಳಿಂದ ತಂದು ಕಣ್ವ ಬಲಮುರಿಯಲ್ಲಿ ತಮಗೆ ಬೇಕಾದಂತೆ ಹಸನಗೊಳಿಸಿ ಹಗಲು ರಾತ್ರಿ ಎನ್ನದೆ ಕುಟುಂಬದ ಸದಸ್ಯರು ಒಟ್ಟು ಸೇರಿ ಪೊರಕೆಗಳನ್ನು ತಯಾರಿಸುತ್ತಿದ್ದಾರೆ.

ಸಾಮಾನ್ಯವಾಗಿ ನವೆಂಬರ್ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಪೊರಕೆ ತಯಾರಿಸುವ ಅವಧಿ. ಮೊದಲು ಮನೆಮನೆಗೆ ತೆರಳಿ ಪೊರಕೆ ಮಾರಾಟ ಮಾಡುತ್ತಿದ್ದ ಇವರು ಭತ್ತ ಕೆಲಸ ಪೂರೈಸಿದ ಬಳಿಕ ಭತ್ತವನ್ನು ರೈತರಿಂದ ಪಡೆಯುವ (ಊಮೆ) ಸಂಪ್ರದಾಯ ಜಾರಿಯಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ರೈತರು ತಮಗೆ ಬೇಕಾದ ಪೊರಕೆಗಳನ್ನು ಹಣ ಕೊಟ್ಟೇ ಖರೀದಿಸುತ್ತಾರೆ. ಆದರೂ ಕೆಲವು ಗ್ರಾಮಗಳಲ್ಲಿರುವ ಮನೆತನಗಳ ಮನೆಗಳಿಗೆ ಈಗಲೂ ಇಲ್ಲಿಯ

ಸದಸ್ಯರೇ ಅವರ ಬೇಡಿಕೆಗೆ ಅನುಗುಣವಾಗಿ ಪೊರಕೆಗಳನ್ನು ಮನೆಗಳಿಗೆ ತಲುಪಿಸುವುದು ಸಾಮಾನ್ಯವಾಗಿದೆ.

ಹಿಂದೆ ಕಚ್ಚಾವಸ್ತು ಧಾರಾಳವಾಗಿ ಲಭಿಸುತ್ತಿತ್ತು. ಇತ್ತೀಚೆಗೆ ದೂರ ತೆರಳಬೇಕಾಗಿದೆ. ಕಾಡಿನಲ್ಲಿ ಕಾಡು ಪ್ರಾಣಿಗಳ ಭಯವಿದೆ. ಹಿಂದೆ ಕಚ್ಚಾ ಸಾಮಗ್ರಿಗಳನ್ನುತರಲು ಯಾರೂ ಪ್ರಶ್ನಿಸುತ್ತಿರಲಿಲ್ಲ ಈಗ ತೊಂದರೆ ಅನುಭವಿಸುವಂತಾಗಿದೆ. ನಮ್ಮ ನೆರವಿಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸಹಕರಿಸಿ ಪ್ರೋತ್ಸಾಹಿಸುವ ಅವಶ್ಯಕತೆ ಇದೆ

- ರಘು, ಪೊರಕೆ ತಯಾರಕು, ಕಣ್ವಬಲಮುರಿ.

ತಾಳಿ ಚೀಪೆ ತರಲು ಕೇರಳಕ್ಕೆ ತೆರಳಬೇಕು. ಸಾಗಾಟಕ್ಕೆ ಗುಂಪಾಗಿ ತೆರಳುತ್ತೇವೆ. ಲೋಡು ಮಾಡಿಕೊಂಡು ಬರುವಾಗ ಗೇಟುಗಳಲ್ಲಿ ತಡೆಯೊಡ್ಡುತ್ತಾರೆ. ನಿರ್ವಹಣೆಗೆ ಸಮಸ್ಯೆಯಾಗುತ್ತದೆ

- ಮೀನಾಕ್ಷಿ, ಕಣ್ವ ಬಲಮುರಿ

ಹಿಂದಿನ ಕಾಲದಿಂದ ಬೆಳೆದು ಬಂದ ಕಸುಬನ್ನು ಬಿಡುವ ಹಾಗಿಲ್ಲ. ಕಚ್ಚಾವಸ್ತು ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹಿಡಿಯ ಚೀಪೆಗಳು ಲಭಿಸುತ್ತಿವೆ. ಹೊತ್ತುಕೊಂಡು ಹೋಗಿ ಮಾರಾಟ ಮಾಡುವುದು ಕಷ್ಟಕರ. ತುತ್ತಿನ ಚೀಲ ತುಂಬಿಸಲು ಪೊರಕೆಯ ಮೊರೆ ಹೋಗಿದ್ದೇವೆ

ರಮೇಶ್, ಕಣ್ವಬಲಮುರಿಹಿರಿಯರಿಂದ ಬಂದ ಈ ಕಸುಬನ್ನು ಕಷ್ಟಪಟ್ಟು ಈಗಲೂ ಮುಂದುವರಿಸುತ್ತಿದ್ದೇವೆ. ಕಡ್ಡಿಚೀಪೆಗೆ ಬೇಡಿಕೆ ಕಮ್ಮಿ ಆಗುತ್ತಿದೆ. ಎದುರಾಗುತ್ತಿರುವ ಹತ್ತಾರು ಸಮಸ್ಯೆಗಳಿಂದ ಕಸುಬುದಾರರು ತಮ್ಮ ವೃತ್ತಿಯನ್ನೇ ತೊರೆಯುವ ಹಂತಕ್ಕೆ ಬಂದಿದೆ

- ಗಿರೀಶ್‌, ಕಣ್ವಬಲಮುರಿ

ಮಕ್ಕಳು ಈ ಕೆಲಸಕ್ಕೆ ಬರ್ತಾ ಇಲ್ಲ. ವಯಸ್ಸಾದವರು ಮಾತ್ರ ಈ ಕೆಲಸವನ್ನು ಮಾಡುತ್ತಿದ್ದೇವೆ.

- ಜಾನಕಿ, ಕಣ್ವಬಲಮುರಿ

Share this article