ಜೂ.೧೧ರಂದು ಆದಿಚುಂಚನಗಿರಿ ವಿವಿ ಘಟಿಕೋತ್ಸವ: ೧೨೬೫ ಅಭ್ಯರ್ಥಿಗಳಿಗೆ ಪದವಿ ಪ್ರದಾನ

KannadaprabhaNewsNetwork | Published : Jun 8, 2024 12:37 AM

ಸಾರಾಂಶ

ಆದಿಚುಂಚನಗಿರಿ ವಿವಿ ನಾಲ್ಕನೇ ವಾರ್ಷಿಕ ಘಟಿಕೋತ್ಸವದಲ್ಲಿ ೧,೨೬೫ ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ನೀಡಲಾಗುವುದು. ಐದು ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ (ಮೂವರು ಫಾರ್ಮಸಿ ನಿಕಾಯ ಮತ್ತು ಇಬ್ಬರು ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟರ್ ಮತ್ತು ಟೆಕ್ನಾಲಜಿಯ ನಿಕಾಯ) ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕು ಬೆಳ್ಳೂರಿನ ಬಾಲಗಂಗಾಧರ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಸಭಾಂಗಣದಲ್ಲಿ ಜೂ.೧೧ರಂದು ಬೆಳಗ್ಗೆ ೧೦.೩೦ಕ್ಕೆ ನಾಲ್ಕನೇ ವಾರ್ಷಿಕ ಘಟಿಕೋತ್ಸವ ನಡೆಯಲಿದೆ ಎಂದು ಕುಲಪತಿ ಎಂ.ಎ.ಶೇಖರ್ ತಿಳಿಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವ ವಿದ್ಯಾಲಯದ ಪರ ಸಂದರ್ಶಕ ಡಾ.ಎಂ.ಸಿ.ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಾಹ್ಯಾಕಾಶ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಭೌತಿಕ ಸಂಶೋಧನಾ ಪ್ರಯೋಗಾಲಯ ನಿರ್ವಹಣಾ ಮಂಡಳಿ ಸದಸ್ಯರಾದ ಡಾ.ಎ.ಎಸ್.ಕಿರಣ್‌ಕುಮಾರ್ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

೧೨೬೫ ಅಭ್ಯರ್ಥಿಗಳಿಗೆ ಪದವಿ ಪ್ರದಾನ:

ನಾಲ್ಕನೇ ವಾರ್ಷಿಕ ಘಟಿಕೋತ್ಸವದಲ್ಲಿ ೧,೨೬೫ ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ನೀಡಲಾಗುವುದು. ಐದು ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ (ಮೂವರು ಫಾರ್ಮಸಿ ನಿಕಾಯ ಮತ್ತು ಇಬ್ಬರು ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟರ್ ಮತ್ತು ಟೆಕ್ನಾಲಜಿಯ ನಿಕಾಯ) ನೀಡಲಾಗುವುದು ಎಂದರು.

ಎಂಬಿಬಿಎಸ್- ೧೩೧, ಬ್ಯಾಚುಲರ್ ಆಫ್ ಫಾರ್ಮಸಿ - ೧೦೮, ಬಿಕಾಂ- ೧೧೭, ಬ್ಯಾಚುಲರ್ ಅಫ್ ಎಂಜಿನಿಯರಿಂಗ್ - ೩೭೨, ಫಾರ್ಮ್ ಡಿ- ೨೭, ಮಾಸ್ಟರ್ ಆಫ್ ಸೈನ್ಸ್ ಇನ್ ನ್ಯಾಚುರಲ್ ಸೈನ್ಸ್ - ೧೦೧ ಸೇರಿದಂತೆ ಒಟ್ಟು ೧,೨೬೫ ಮಂದಿ ಪದವಿ ನೀಡಲಾಗುತ್ತಿದ್ದು, ಈ ಪೈಕಿ ೫೭೦ ಪುರುಷರು, ೬೯೫ ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯವು ೨೦೧೮ರ ಫೆಬ್ರವರಿಯಿಂದ ಪ್ರಾರಂಭವಾಗಿದ್ದು, ಪ್ರಸ್ತುತ ಸುಮಾರು ೫,೫೯೪ ವಿದ್ಯಾರ್ಥಿಗಳು ವಿವಿಧ ಪದವಿಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಪರೀಕ್ಷಾಂಗ ಮುಖ್ಯಸ್ಥರಾದ ಡಾ. ಪ್ರಾಣೇಶ್ ಗುರೂರು, ವಿಶ್ವವಿದ್ಯಾಲಯದ ಕುಲಸಚಿವ ಡಾ. ಸುಬ್ಬರಾಯ್ ಹಾಜರಿದ್ದರು.

Share this article