ಬಡವರ ಮಕ್ಕಳ ಓದಿಗೆ ಅಡಿವೆಪ್ಪ ಆಸರೆ

KannadaprabhaNewsNetwork | Published : Aug 15, 2024 1:48 AM

ಸಾರಾಂಶ

ಎಸ್.ಎಸ್. ಪಾಟೀಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ನು ವಿತರಿಸಲಿದ್ದಾರೆ

ಮುಂಡರಗಿ: ತಾವು ಮಾಡುವ ಕಾಯಕದಲ್ಲಿ ಸಮಾಜ ಹಾಗೂ ಮಕ್ಕಳಿಗೆ ಒಂದಿಷ್ಟು ಖರ್ಚು ಮಾಡಬೇಕೆನ್ನುವ ಉದ್ದೇಶ ಇಟ್ಟುಕೊಂಡು ಮಂಡರಗಿಯ ಕಟ್ಟಡ ಕಾರ್ಮಿಕ ಹಾಗೂ ಡಾ. ಅಂಬೇಡ್ಕರ್ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಂಸ್ಥಾಪಕ ಅಡಿವೆಪ್ಪ ಛಲವಾದಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಳೆದ ಅನೇಕ ವರ್ಷಗಳಿಂದ ಶಾಲಾ ಮಕ್ಕಳಿಗಾಗಿ ಉಚಿತ ನೋಟ್ ಪುಸ್ತಕ, ಪೆನ್ನು ನೀಡುತ್ತಾ ಬಂದಿದ್ದಾರೆ. ಈ ಮೂಲಕ ಬಡವರ ಮಕ್ಕಳ ಓದಿಗೆ ಅಡಿವೆಪ್ಪ ಆಸರೆಯಾಗುತ್ತಿದ್ದಾರೆ.

ಈ ಹಿಂದೆ ಪಟ್ಟಣದ ಎಸ್.ಎಸ್. ಪಾಟೀಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳ ಶಾಲೆ, ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಸೇರಿದಂತೆ ವಿವಿದೆಡೆಗಳಲ್ಲಿ ನೀಡುತ್ತಾ ಬಂದಿದ್ದು, ಇದೀಗ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿಯೂ ಸಹ ಆ. 15 ರಂದು ಬೆಳಗ್ಗೆ ಪಟ್ಟಣದ ಎಸ್.ಎಸ್. ಪಾಟೀಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ನು ವಿತರಿಸಲಿದ್ದಾರೆ.

ಅಲ್ಲದೇ ಈ ಬಾರಿ ಎಸ್.ಎಸ್. ಪಾಟೀಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ತಮ್ಮ ಸ್ವಂತ ಖರ್ಚಿನಲ್ಲಿ ₹10 ರಿಂದ 12 ಸಾವಿರ ಖರ್ಚು ಮಾಡಿ ಧ್ವಜದ ಕಟ್ಟೆ ಕಟ್ಟಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪಟ್ಟಣದ ಬುದ್ದಿಮಾಂದ್ಯ, ಅನಾಥ, ದಾರಿಹೋಕರಿಗೆ ಹುಡುಕಿಕೊಂಡು ಹೋಗಿ ಆಹಾರದ ಪೊಟ್ಟಣ ಹಾಗೂ ನೀರಿನ ಪ್ಯಾಕೇಟ್ ನೀಡುವ ಕಾರ್ಯ ಮಾಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಕಾರ್ಮಿಕರ ಸಂಘಟನೆಯಿಂದ ಪ್ರತಿ ವರ್ಷ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 1 ಶಾಲಾ ಬ್ಯಾಗ್, 6 ನೋಟ್ ಬುಕ್, 5 ಪೆನ್ನು, 1 ಬಾಕ್ಸ್ ಪೆನ್ಸಿಲ್, 1 ಕಂಪಾಸ್ ಪೆಟ್ಟಿಗೆ ನೀಡುತ್ತಾ ಬಂದಿದ್ದಾರೆ.

ಬೆಲೆ ಏರಿಕೆಯ ಈ ಕಾಲದಲ್ಲಿ ನಾನು ಮಾಡುವ ಕಾಯಕದಲ್ಲಿ ನನ್ನಂತ ಬಡ ಹಾಗೂ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಒಂದಿಷ್ಟು ಅನುಕೂಲವಾಗಲೆಂದು ನನ್ನದೊಂದು ಸಣ್ಣ ಅಳಿಲು ಸೇವೆ ಮಾಡುತ್ತಿರುವೆ ಎಂದು ಅಡಿವೆಪ್ಪ ಛಲವಾದಿ ತಿಳಿಸಿದ್ದಾರೆ.

Share this article