ಕನ್ನಡಪ್ರಭ ವಾರ್ತೆ ಬೀದರ್
ನಗರಸಭೆಯ ಸಾಮಾನ್ಯ ಸಭೆಯನ್ನು ಏಕಾ ಏಕಿ ಮುಂದೂಡಿದ್ದರಿಂದ ಬುಧವಾರ ಬಿಜೆಪಿ, ಜೆಡಿಎಸ್ ಹಾಗೂ ಎಂಐಎಂ ಸದಸ್ಯರು 2 ಗಂಟೆಗೂ ಹೆಚ್ಚು ಪ್ರತಿಭಟನೆ ನಡೆಸಿದರು.ನಗರಸಭೆಯ ಸಾಮಾನ್ಯ ಸಭೆಯನ್ನು ಮಾ.13ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸುವ ಕುರಿತು ಮಾ.5ರಂದು ನಡೆದ ಬಜೆಟ್ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಸುಮಾರು 13ಕ್ಕೂ ಹೆಚ್ಚು ಸದಸ್ಯರು ಸಭೆಗೆ ಆಗಮಿಸಿದ್ದರು. ಒಂದು ದಿನ ಮುಂಚೆ ಅಂದರೆ ಮಾ.12ರಂದು ಟಿಪ್ಪಣಿ ಬರೆದು ನಗರ ಸಭೆಯ ಪೌರಾಯುಕ್ತರು ನಗರ ಸಭೆಯ ಅಧ್ಯಕ್ಷರ ಮೌಖಿಕ ಆದೇಶದ ಮೇರೆಗೆ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ ಎಂದು ಕೆಲ ಸದಸ್ಯರಿಗೆ ನೋಟಿಸ್ ಮುಟ್ಟಿಸಿದ್ದಾರೆ.
ಬಹುತೇಕ ಸದಸ್ಯರಿಗೆ ಸಭೆ ಮುಂದೂಡಿದ್ದ ನೋಟಿಸ್ ಮುಟ್ಟಿಲ್ಲ. ನೋಟಿಸ್ ನೀಡುವವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಸದಸ್ಯ ಶಶಿಧರ ಹೊಸಳ್ಳಿ ಆರೋಪಿಸಿದರು.ನಗರ ಸಭೆಯ ಸಾಮಾನ್ಯ ಸಭೆ ಮುಂದೂಡಿ ಎಲ್ಲರೂ ಜಿಲ್ಲಾ ಉಸ್ತುವಾರಿ ಸಚಿವರ ಜನಸ್ಪಂದನ ಸಭೆಗೆ ತೆರಳಿದ್ದಾರೆ. ಪೌರಾಯುಕ್ತರು ಬಂದು ಸಂಜೆ ಸಭೆ ನಿಗದಿ ಮಾಡುತ್ತೇವೆ ಅಥವಾ ನಾಳೆ ನಾಡಿದ್ದು ಮಾಡುತ್ತೇವೆ ಎಂದು ಲಿಖಿತ ಪತ್ರ ನೀಡುವವರೆಗೆ ನಾವು ಇಲ್ಲಿಂದ ಏಳುವುದಿಲ್ಲ ಎಂದು ಆರಂಭದ ಅರ್ಧ ಗಂಟೆ ಕಾಲ ಸಭಾಂಗಣದಲ್ಲಿ, ನಂತರ ನಗರಸಭೆ ಕಚೇರಿಯ ಮುಖ್ಯ ದ್ವಾರ ಬಂದ್ ಮಾಡಿ 1 ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿ ಪೌರಾಯುಕ್ತರನ್ನು ಇಲ್ಲಿಗೆ ಕರೆಯಿಸಿ ಅಥವಾ ನಮ್ಮನ್ನು ಬಂಧಿಸಿ ಎಂದು ಸದಸ್ಯರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಆಗದಂತೆ ಸಿಪಿಐ ಸಂತೋಷ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿ ನಗರ ಸಭೆಯ ಸದಸ್ಯರನ್ನು ಸಮಾಧಾನಪಡಿಸುವ ಕಾರ್ಯ ಮಾಡಲಾಯಿತು. ನಂತರ ಎಎಸ್ಪಿ ಮಹೇಶ ಮೇಘಣ್ಣನವರ್ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.ನಗರ ಸಭೆಯಲ್ಲಿನ ಅವ್ಯವಹಾರ ಮುಚ್ಚಿಕೊಳ್ಳಲು ಸಭೆ ಮುಂದೂಡಿಕೆ: ಬೀದರ್ ನಗರ ಸಭೆಯಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ಆಗಿದ್ದು ಸಾಮಾನ್ಯ ಸಭೆ ನಡೆಸಿದರೆ ಎಲ್ಲವೂ ಬಹಿರಂಗಗೊಳ್ಳುತ್ತದೆ ಹೀಗಾಗಿ ಇದನ್ನು ಮುಚ್ಚಿಕೊಳ್ಳಲು ಉದ್ದೇಶಪೂರ್ವಕವಾಗಿ ಸಭೆ ಮುಂದೂಡಿದ್ದಾರೆ ಎಂದು ಶಶಿಧರ ಹೋಸಳ್ಳಿ ಆರೋಪಿಸಿದರು.
ಬೀದರ್ ನಗರದ ವಿವಿಧ ಬಡಾವಣೆಯಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕೆಂದಿದ್ದೇವೆ ಆದರೆ ಉದ್ದೇಶಪೂರ್ವಕವಾಗಿ ಸಭೆ ಮುಂದೂಡಲಾಗಿದೆ ಎಂದು ಆರೋಪಿಸಲಾಯಿತು. ಸದಸ್ಯರು ಲಿಖಿತ ರೂಪದಲ್ಲಿ ಪತ್ರ ನೀಡಿದರೆ ಮಾತ್ರ ನಾವು ಪ್ರತಿಭಟನೆ ಹಿಂಪಡೆಯುತ್ತೇವೆ ಎಂದು ಪಟ್ಟುಹಿಡಿದರು.ಈ ಸಂದರ್ಭದಲ್ಲಿ ಮಾರ್ಚ 22ರಂದು ಸಾಮಾನ್ಯ ಸಭೆಯನ್ನು ನಡೆಸುವ ಕುರಿತು ಪೌರಾಯುಕ್ತ ಶಿವರಾಜ ರಾಠೋಡ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮೊಟಕುಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಶಶಿಧರ ಹೊಸಳ್ಳಿ, ರಾಜಾರಾಮ ಚಿಟ್ಟಾ, ಪ್ರಭುಶೆಟ್ಟಿ ಕುಂಬರವಾಡಾ, ವಿಕ್ರಮ ಮುದಾಳೆ, ಪ್ರೀತಿ ರಾಜೇಶ, ಮುನ್ನಾ ಎಂಐಎಂ, ಎಂಡಿ ಸೌದ್, ಮಹಾದೇವಿ ಹುಮನಾಬಾದೆ, ಶಬ್ನಮ್ ಗುಲಾಮ ಅಲಿ, ದ್ರೌಪತಿ ಕಾಳೆ, ವೀರಶೆಟ್ಟಿ ಪಾಟೀಲ್ ಭಂಗೂರೆ, ಶಿವಕುಮಾರ ಭಾವಿಕಟ್ಟಿ ಪಾಲ್ಗೊಂಡಿದ್ದರು.