ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ । ಶುದ್ಧ ನೀರಿನ ಘಟಕ ಕೆಟ್ಟು ತಿಂಗಳಾದರೂ ಕ್ರಮವಿಲ್ಲ । ದೇಗುಲ ಮಂಡಳಿಗೆ ಹಿಡಿಶಾಪರಾಘವೇಂದ್ರ ಹೊಳ್ಳ
ಕನ್ನಡಪ್ರಭ ವಾರ್ತೆ ಬೇಲೂರುವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಹಿಂಭಾಗ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಎರಡು ತಿಂಗಳಾಗಿದ್ದು ಕುಡಿಯುವ ನೀರಿಲ್ಲದೇ ಭಕ್ತರು ಹಾಗೂ ಪ್ರವಾಸಿಗರು ಬಿಸಿಲಿನ ತಾಪಕ್ಕೆ ಬಾಯಿ ಒಣಗಿ ಬಳಲುತ್ತಿದ್ದು ದೇಗುಲ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲೆಂದು ಲಕ್ಷಾಂತರ ರು. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಒಂದು ವರ್ಷದ ಹಿಂದೆ ಪ್ರಾರಂಭಿಸಲಾಗಿತ್ತು. ದೇಗುಲ ವೀಕ್ಷಣೆಗೆ ಬರುವ ಪ್ರವಾಸಿಗರು ಕುಡಿಯಲು ಹಾಗೂ ಅಡುಗೆ ತಯಾರಿಕೆಗೆ ಶುದ್ಧ ಕುಡಿಯುವ ನೀರಿನ ಘಟಕ ಉಪಯುಕ್ತವಾಗಿತ್ತು. ಆಗಾಗ ಕೆಟ್ಟು ನಿಂತು ಮತ್ತೆ ರಿಪೇರಿಗೊಂಡು ಪ್ರವಾಸಿಗರಿಗೆ ನೀರು ದೊರಕುತ್ತಿತ್ತು. ಆದರೆ ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ಘಟಕ ಸಂಪೂರ್ಣವಾಗಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಪ್ರವಾಸಿಗರು, ಭಕ್ತರು ಹಾಗೂ ಸ್ಥಳೀಯ ನಿವಾಸಿಗಳು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗ ಇರುವ ದಾಸೋಹ ಭವನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಮಧುಸೂದನ್ ಅನುದಾನದ ಲಕ್ಷಾಂತರ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ಕೂಡ ಆಗಾಗ ಕೆಟ್ಟು ನಿಲ್ಲುವ ಚಾಳಿಯನ್ನು ಮೈಗೂಡಿಸಿಕೊಂಡಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಬಂದಾಗ ಪುರಸಭೆ ಎಚ್ಚೆತ್ತುಕೊಂಡು ರಿಪೇರಿ ಮಾಡಿಸುತ್ತಿತ್ತು. ಆದರೆ ಈಗ ಕಳೆದ ಐದಾರು ತಿಂಗಳಿಂದ ಕೆಟ್ಟು ನಿಂತು ಯಂತ್ರಗಳು ತುಕ್ಕು ಹಿಡಿಯುವ ಸ್ಥಿತಿಗೆ ತಲುಪಿವೆ. ರಿಪೇರಿಗೆ ಸಾರ್ವಜನಿಕರು ಮನವಿ ಮಾಡಿದರೆ ಪುರಸಭೆ ದೇಗುಲ ಸಮಿತಿಯತ್ತ ಬೊಟ್ಟು ಮಾಡುತ್ತದೆ. ಇಬ್ಬರ ಜಗಳದ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ. ಪ್ರವಾಸಿಗರು, ಭಕ್ತರು ಶಿಲ್ಪ ಕಲೆಗಳ ತವರೂರಿಗೆ ಬಂದು ಕುಡಿಯುವ ನೀರು ಇಲ್ಲದಿರುವುದನ್ನು ಕಂಡು ಮೂಗು ಮುರಿಯುತ್ತಿದ್ದಾರೆ.
ಈ ಬಗ್ಗೆ ಹಳೇಬೀಡು ಬೇಲೂರು ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಳೆದ ವರ್ಷ ಆರಂಭಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿದೆ, ಯಾವುದೇ ಕೆಲಸವನ್ನು ಮಾಡಬೇಕಾದರೆ ಪರಿಪೂರ್ಣತೆ ಇರಬೇಕು. ಆದರೆ ಇಲ್ಲಿ ಎಲ್ಲವೂ ಅಪೂರ್ಣವಾಗಿದೆ. ಹೆಸರಿಗಷ್ಟೇ ಬೇಲೂರು ವಿಶ್ವವಿಖ್ಯಾತವಾಗಿದ್ದರೂ ಮೂಲಭೂತ ಸೌಲಭ್ಯಗಳಿಲ್ಲದೇ ಕುಖ್ಯಾತಿಗೆ ತುತ್ತಾಗುತ್ತಿದೆ. ದೇಗುಲ ನೋಡಲು ಬರುವ ಪ್ರವಾಸಿಗರಿಗೆ ಕನಿಷ್ಠ ಶುದ್ಧ ಕುಡಿಯುವ ನೀರನ್ನು ಕೊಡಲು ವಿಫಲರಾಗಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತಿದೆ ಎಂದು ಕಿಡಿಕಾರಿದರು.ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಕುಮಾರ್ ನಾಯಕ ಮಾತನಾಡಿ, ಕಳೆದ ವಾರ ಶಿವರಾತ್ರಿ ಹಬ್ಬದ ಪ್ರಯುಕ್ತ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳಿದರು. ಬಹು ದೂರದ ಊರಿನಿಂದ ಬರುವ ಪಾದಯಾತ್ರಿಗಳು ವಿಶ್ರಾಂತಿ ಪಡೆಯಲು ಪ್ರಮುಖ ಕೇಂದ್ರ ಸ್ಥಾನವಾಗಿ ಬೇಲೂರು ದೇವಸ್ಥಾನ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಹಲವಾರು ವರ್ಷಗಳಿಂದ ಬಳಸುತ್ತಿದ್ದಾರೆ. ಆದರೆ ಈ ಬಾರಿ ದೇಗುಲದ ಮುಂಭಾಗ ದಾಸೋಹ ಭವನದಲ್ಲಿರುವ ಕುಡಿಯುವ ನೀರಿನ ಘಟಕ ಹಾಗೂ ದೇಗುಲದ ಹಿಂಭಾಗದಲ್ಲಿರುವ ಕುಡಿಯುವ ನೀರಿನ ಘಟಕ ಕೆಟ್ಟಿರುವ ಕಾರಣ ಕುಡಿಯುವ ನೀರಿಗಾಗಿ ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು. ದೇಗುಲ ಮಂಡಳಿಯವರು ಪುಕ್ಕಟೆ ನೀರು ಕೊಡುವುದಿಲ್ಲ. ಐದು ರೂಪಾಯಿ ಕಾಯಿನ್ ಹಾಕಬೇಕು. ಹಣಕೊಟ್ಟರೂ ನೀರು ಸಿಗದಿರುವುದು ನಿಜಕ್ಕೂ ಬೇಸರದ ವಿಷಯ ಎಂದರು.ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಹಿಂಭಾಗದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿರುವುದು.