-ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದೇವನಹಳ್ಳಿ: ಬಾಬು ಜಗಜೀವನ್ ರಾಂ ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ತಿಳಿಯುವಂತಾಗಲು ಕಳೆದ ಹತ್ತು ವರ್ಷಗಳ ಹಿಂದೆ ಆಗಿನ ಶಾಸಕರು ಮಿನಿ ವಿಧಾನಸೌಧದ ಮುಂದೆ ಅವರ ಪ್ರತಿಮೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇದೂವರೆಗೂ ಪ್ರತಿಮೆ ಸ್ಥಾಪಿಸಿಲ್ಲ ಏಕೆಂದು ಮಾದಿಗ ದಂಡೋರ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಪ್ರಶ್ನಿಸಿದರು.
ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ತಾಲೂಕು ಆಡಳಿತದಿಂದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್ 38ನೇ ಪುಣ್ಯ ಸ್ಮರಣೆ ಸಮಾರಂಭದಲ್ಲಿ ಮಾತನಾಡಿ, ದೇವನಹಳ್ಳಿಯಲ್ಲಿ ಬಾಬೂ ಜಗಜೀವನರಾಂ ಅವರ ಕಟ್ಟಡ ಸಹ ಪೂರ್ಣಗೊಂಡಿಲ್ಲ. ಈ ಭಾಗದ ಶಾಸಕ, ಸಚಿವರಾಗಿದ್ದರೂ ಸಹ ನಗರದ ವಿಧಾನ ಸೌಧದಲ್ಲಿ ಯಾರು ಬೇಕಾದರೂ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಆದರೆ ತಾಲೂಕಿನಲ್ಲಿ ನಡೆಯುವ ಬಾಬೂಜಿ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಕಿಡಿಕಾರಿದರು.ತಹಸೀಲ್ದಾರ್ ಶಿವರಾಜ್ ಮಾತನಾಡಿ, ಸಮಾಜದ ಎಲ್ಲ ನೋವುಗಳನ್ನು ನುಂಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೆ ಅವರನ್ನು ರೈತರು, ಕಾರ್ಮಿಕರಿಗೆ ನೀಡಿದ ಸೌಲಭ್ಯ ಮರೆಯುವ ಹಾಗಿಲ್ಲ. ಅವರ ಅಧಿಕಾರಾವಧಿಯಲ್ಲಿ ಬಹುತೇಕ ಖಾತೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.
ಮಾಜಿ ಪುರಸಭಾಧ್ಯಕ್ಷ ಡಾ.ಎಂ.ಮೂರ್ತಿ ಮಾತನಾಡಿ, ಬಾಬೂಜೀಯವರ ಬಗ್ಗೆ ಉಪನ್ಯಾಸ ನೀಡಲು ವಿದ್ವಾಂಸರನ್ನು ಕರೆಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚನೆ ನೀಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಪಂ ಇಒ ಶ್ರೀನಾಥಗೌಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಳಿನಾಕ್ಷಿ, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮಾರಪ್ಪ, ಹೋರಾಟಗಾರ ಹಾಗೂ ತಾಪಂ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿದರು. ಮಾದಿಗ ದಂಡೋರ ತಾಲೂಕು ಅಧ್ಯಕ್ಷ ವೆಂಕಟೇಶ್, ಎಲ್.ಮುನಿರಾಜು, ಕೆ.ವಿ.ಸ್ವಾಮಿ, ಬುಳ್ಳಹಳ್ಳಿ ಮುನಿರಾಜು, ಶ್ರೀನಿವಾಸ್ ಇತರರಿದ್ದರು.