ನೂತನ ತಂತ್ರಜಜ್ಞಾನ, ಆವಿಷ್ಕಾರದಿಂದ ಮಹಿಳೆಯ ಪ್ರಗತಿ: ಸರ್ಕಾರಿ ಕಾಲೇಜಿನ ಯೋಗನರಸಿಂಹ

KannadaprabhaNewsNetwork | Published : Mar 10, 2024 1:33 AM

ಸಾರಾಂಶ

ಸಂಸ್ಕೃತಿಯ ಪಾಲನೆ ಮತ್ತು ಇಂದಿನ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನದ ಬಳಕೆಯಿಂದ ಮಹಿಳೆಯರು ಸಂಘದ ಏಳಿಗೆ ಮತ್ತು ಕುಟುಂಬದ ಪ್ರಗತಿಗೆ ತೊಡಗಿಸಿಕೊಳ್ಳಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ಕೆ.ಯೋಗನರಸಿಂಹ ಸಲಹೆ ನೀಡಿದರು. ಕುರುಹಿನಶೆಟ್ಟಿ ಮಹಿಳಾ ಸಮಾಜದ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಕುರುಹಿನಶೆಟ್ಟಿ ಮಹಿಳಾ ಸಮಾಜದ 40ನೇ ವಾರ್ಷಿಕೋತ್ಸವಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಹಿರಿಯರ ಮಾರ್ಗದರ್ಶನದ ಜತೆಗೆ ಆಚಾರ, ವಿಚಾರ ಮತ್ತು ಸಂಸ್ಕೃತಿಯ ಪಾಲನೆ ಮತ್ತು ಇಂದಿನ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನದ ಬಳಕೆಯಿಂದ ಮಹಿಳೆಯರು ಸಂಘದ ಏಳಿಗೆ ಮತ್ತು ಕುಟುಂಬದ ಪ್ರಗತಿಗೆ ತೊಡಗಿಸಿಕೊಳ್ಳಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ಕೆ.ಯೋಗನರಸಿಂಹ ಸಲಹೆ ನೀಡಿದರು.

ಪಟ್ಟಣದ ಕುರುಹಿನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದ ಕುರುಹಿನಶೆಟ್ಟಿ ಮಹಿಳಾ ಸಮಾಜದ ೪೦ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕುರುಹಿನಶೆಟ್ಟಿ ಮಹಿಳಾ ಸಮಾಜವು ೪೦ ವರ್ಷಗಳ ಹಿಂದಿನ ಸದಸ್ಯರನ್ನು ಹಳೇಬೇರಿಗೆ ಹಾಗೂ ಇಂದಿನ ಸಂಘವನ್ನು ಹೊಸ ಚಿಗುರಿಗೆ ಹೋಲಿಕೆ ಮಾಡಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಯಶಸ್ವಿ ಮಹಿಳೆಯರಾಗಿ ಎಲ್ಲರೂ ಬಾಳುವಂತೆ ತಿಳಿಸದರು.

ಮನೆಯೇ ಮೊದಲ ಪಾಠಶಾಲೆಯಾದ್ದರಿಂದ ಮಹಿಳೆ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯ ಪಾಲನೆ ಜತೆಗೆ ಸಕರಾತ್ಮಕವಾದ ವಾತಾವಾರಣ ನಿರ್ಮಾಣ ಮತ್ತು ಮಕ್ಕಳ ಮನಸ್ಸಿನ ಮೇಲೆ ವ್ಯತಿರಕ್ತ ಪರಿಣಾಮ ಉಂಟಾಗದಂತೆ ಸದಾ ಜಾಗೃತರಾಗಿದ್ದಲ್ಲಿ ನಿರೀಕ್ಷೆಗೂ ಮೀರಿ ಮಕ್ಕಳು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬ ಯಶಸ್ವಿ ಪುರುಷರ ಹಿಂದೆ ಮಹಿಳೆ ಇರುತ್ತಾರೆ ಎಂಬುದು ಸತ್ಯವಾಗಿದ್ದು, ಪುರುಷರು ದುಡಿಮೆಗೆ ತೆರಳುವ ಮುನ್ನ ಅಥವಾ ಬಂದ ನಂತರ ರಾತ್ರಿ ಮಲಗುವ ತನಕ ತಿಂಡಿ, ಊಟ, ಕಾಫಿ ಹಾಗೂ ಅಗತ್ಯತೆಗಳ ಪೂರೈಕೆಯಲ್ಲಿ ಮಹಿಳೆಯರು ತೋರುವ ಕಾಳಜಿಯಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ, ಆದ್ದರಿಂದ ಹೆಣ್ಣು ಮಕ್ಕಳೆಲ್ಲರೂ ಅಭಿನಂದನಾರ್ಹರರು ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಕುರುಹಿನಶೆಟ್ಟಿ ಜನಾಂಗದ ಕಮಿಟಿಯ ಅಧ್ಯಕ್ಷ ಎಚ್.ಎಸ್.ಸುದರ್ಶನ್ ಕಾರ್ಯಕ್ರಮ ಉದ್ಘಾಟಿಸಿದರು. ನಾಗಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಎಂ.ಎನ್.ಛಾಯಾದೇವಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಆಯ್ಕೆಯಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ಬಿ.ಎಸ್.ರಶ್ಮಿ ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ೨ ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎಚ್.ಡಿ.ಚೈತ್ರ ಪ್ರಾರ್ಥಿಸಿದರು, ಶ್ವೇತ ಕೃಷ್ಣಕಾಂತ್ ಸ್ವಾಗತಿಸಿದರು. ಶೃತಿ ಗೋಕುಲ್ ನಿರೂಪಿಸಿದರು.

ಹಿರಿಯರಾದ ಮಾಲತಿ ರಾಮಣ್ಣ, ಮೀನಾಕ್ಷಿ ಶ್ರೀನಿವಾಸ್, ಕುರುಹಿನಶೆಟ್ಟಿ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಉಷಾ ಜಯಕುಮಾರ್, ಅಧ್ಯಕ್ಷೆ ಇಂದು ನಾರಾಯಣ್, ಕಾರ್ಯದರ್ಶಿ ಉಮಾ ಗಣೇಶ್, ಯೋಜನಾ ನಿರ್ದೇಶಕಿ ಸರೋಜ ಗೋಪಾಲ್, ಕುರುಹಿನಶೆಟ್ಟಿ ಜನಾಂಗದ ಕಮಿಟಿಯ ಕಾರ್ಯದರ್ಶಿ ಪಿ.ಆರ್.ಸುಬ್ರಮಣ್ಯ, ಮಿತ್ರ ವೃಂದ, ಕುರುಹಿನಶೆಟ್ಟಿ ಜನಾಂಗದ ಕಮಿಟಿ ಅಧ್ಯಕ್ಷ ಆರ್.ಕೆ.ಗುರುರಾಜ್ ಇದ್ದರು.ಹೊಳೆನರಸೀಪುರದ ಕುರುಹಿನಶೆಟ್ಟಿ ಮಹಿಳಾ ಸಮಾಜದ ೪೦ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮುಖ್ಯ ಶಿಕ್ಷಕಿ ಎಂ.ಎನ್.ಛಾಯಾದೇವಿ ಅವರನ್ನು ಸನ್ಮಾನಿಸಲಾಯಿತು.

Share this article