ರಾಮನಗರ: ಶಾಲಾ ಪಠ್ಯ ಪುಸ್ತಕದಲ್ಲೂ ಸಾಹಸ ಕಲೆಗಳ ಮಹತ್ವ ಮತ್ತು ಅವುಗಳ ಹಿನ್ನೆಲೆ ಕುರಿತು ಪಾಠವನ್ನು ಸೇರಿಸಬೇಕು. ಮಕ್ಕಳು ಇದರಿಂದ ಸ್ಫೂರ್ತಿಗೊಂಡು ಸ್ವಯಂಪ್ರೇರಿತವಾಗಿ ಕಲಿಯುತ್ತಾರೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಒಂದು ತರಗತಿ ಇರುವಂತೆ, ಸಾಹಸ ಕಲೆಗೂ ಒಂದು ತರಗತಿಯನ್ನು ಮೀಸಲಿಡಬೇಕು ಎಂದು ಕರ್ನಾಟಕ ಸಾಹಸ ಕಲಾ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಹಾಸನ ರಘು ಹೇಳಿದರು.
ನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ನಡೆದ ಅಖಿಲ ಭಾರತ ಶೌರ್ಯ ಕಲಾ ಮಹೋತ್ಸವ ಶೌರ್ಯ ಪರ್ವ- 2024 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಸ ಕಲೆಗಳು ಶಾಲೆಗಳ ಮಟ್ಟಕ್ಕೂ ವಿಸ್ತರಣೆಯಾಗಬೇಕು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಆತ್ಮರಕ್ಷಣೆಗಾಗಿ ಇಂತಹ ಕಲೆಗಳನ್ನು ಪ್ರಾಥಮಿಕ ಹಂತದಲ್ಲಿ ಕಲಿಸಬೇಕು. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದರು.ರಾಜ್ಯದಲ್ಲಿ ಸಾಹಸ ಕಲೆಗಳ ಅನೇಕ ತರಬೇತುದಾರರಿದ್ದಾರೆ. ಸರ್ಕಾರ ಶಾಲೆ ಗಳಲ್ಲಿ ಇಂತಹ ಕಲೆಗಳ ತರಬೇತಿ ಆರಂಭಿಸುವುದರಿಂದ ತರಬೇತುದಾರರಿಗೂ ಜೀವನಕ್ಕೆ ದಾರಿಯಾದಂತಾಗುತ್ತದೆ. ದೇಸಿಯ ಹಾಗೂ ವಿದೇಶಿ ಸಾಹಸ ಕಲೆಗಳು ಇತ್ತೀಚೆಗೆ ಜನಪ್ರಿಯವಾಗುತ್ತಿವೆ. ಹೀಗಾಗಿ, ಖಾಸಗಿಯಾಗಿ ಕೆಲ ಸಂಸ್ಥೆಗಳು ಕಲಿಸಲಾರಂಭಿಸಿವೆ. ಸರ್ಕಾರದ ಇದರ ಮಹತ್ವವನ್ನು ಗ್ರಹಿಸಬೇಕು ಎಂದು ಹೇಳಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ನಗರ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ 18 ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಹೆಣ್ಣು ಗಂಡು ಮಕ್ಕಳೆಂಬ ಬೇಧವಿಲ್ಲದೆ ಎಲ್ಲರಿಗೂ ತರಬೇತಿ ನೀಡಿ ಅಣಿಗೊಳಿಸ ಲಾಗುತ್ತಿದೆ. ಆತ್ಮರಕ್ಷಣೆಗೆ ಇಂತಹ ಕಲೆಗಳು ಅನುಕೂಲಕಾರಿಯಾ ಗಿವೆ. ಸರ್ಕಾರ ಈ ಕಲೆಗಳನ್ನು ಕಲಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಹೇಳಿದರು.ಮಲ್ಲಕಂಬ, ಮಾರ್ಷಲ್ ಆರ್ಟ್ಸ್, ಕುಂಗ್‌ಫು ಸೇರಿದಂತೆ ಇತರ ಸಾಹಸ ಕಲಾ ಪ್ರದರ್ಶನಗಳು ಜರುಗಿದವು. ಕರ್ನಾಟಕ ತಮಿಳುನಾಡು ಮತ್ತು ಕೇರಳ ತಂಡಗಳು ಭಾಗವಹಿಸಿದ್ದರು. ನಗರಸಭೆ ಅಧ್ಯಕ್ಷೆ ವಿಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಬಾಬು, ಬಿಜೆಪಿ ರಾಮನಗರ ಅಧ್ಯಕ್ಷ ಜೆ.ದರ್ಶನ್ ರೆಡ್ಡಿ ಉಪಸ್ಥಿತರಿದ್ದರು.14ಕೆಆರ್ ಎಂಎನ್ 5.ಜೆಪಿಜಿ
ರಾಮನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ನಡೆದ ಅಖಿಲ ಭಾರತ ಶೌರ್ಯ ಕಲಾ ಮಹೋತ್ಸವ ಶೌರ್ಯ ಪರ್ವ– 2024 ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ವಿಜಯಕುಮಾರಿ ಅವರನ್ನು ಅಭಿನಂದಿಸಲಾಯಿತು.