ಪ್ರತಿಕೂಲ ಪರಿಸ್ಥಿತಿಯಲ್ಲೂ ಈಶ್ವರ ಮಲ್ಪೆ ತಂಡದಿಂದ ಸಾಹಸ

KannadaprabhaNewsNetwork | Published : Jul 29, 2024 12:45 AM

ಸಾರಾಂಶ

ಗಂಗಾವಳಿ ನದಿಯಲ್ಲಿ ನೀರು ವೇಗವಾಗಿ ಹರಿಯುತ್ತಿರುವಾಗ ಡೈವಿಂಗ್ ಮಾಡಲು ಅಸಾಧ್ಯ ಎಂದು ನೌಕಾಪಡೆ ತಂಡ ಅಭಿಪ್ರಾಯಪಟ್ಟಿದ್ದರೂ ಸಾಹಸದಿಂದ ಈಶ್ವರ ಮಲ್ಪೆ 8 ಬಾರಿ ಡೈವ್ ಮಾಡಿದರು.

ಕಾರವಾರ: ಶಿರೂರು ಗುಡ್ಡ ದುರಂತದಲ್ಲಿ ನಾಪತ್ತೆಯಾದ ಲಾರಿ ಗಂಗಾವಳಿ ನದಿಯಲ್ಲಿದೆ ಎಂದು ವಿವಿಧ ಶೋಧ ಕಾರ್ಯಾಚರಣೆ ತಂಡಗಳು ಗುರುತಿಸಿದ ನಾಲ್ಕು ಪಾಯಿಂಟ್‌ಗಳಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಡೈವಿಂಗ್ ನಡೆಸಿದರೂ ಕಲ್ಲು, ಮಣ್ಣುಗಳನ್ನು ಬಿಟ್ಟರೆ ಲಾರಿಯಾಗಲಿ, ಮೃತದೇಹವಾಗಲಿ ದೊರೆಯಲಿಲ್ಲ.ಗಂಗಾವಳಿ ನದಿಯಲ್ಲಿ ನೀರು ವೇಗವಾಗಿ ಹರಿಯುತ್ತಿರುವಾಗ ಡೈವಿಂಗ್ ಮಾಡಲು ಅಸಾಧ್ಯ ಎಂದು ನೌಕಾಪಡೆ ತಂಡ ಅಭಿಪ್ರಾಯಪಟ್ಟಿದ್ದರೂ ಸಾಹಸದಿಂದ ಈಶ್ವರ ಮಲ್ಪೆ 8 ಬಾರಿ ಡೈವ್ ಮಾಡಿದರು. ಆದರೆ ಪ್ರತಿ ಬಾರಿ ಡೈವ್ ಮಾಡುವುದೂ ಒಂದು ಸವಾಲಾಗಿತ್ತು ಎಂದು ಈಶ್ವರ್ ಹೇಳುತ್ತಾರೆ. ಭಾನುವಾರ ಈಶ್ವರ್ ಅವರ ಜತೆ ಗೋವಾದಿಂದ ಆಗಮಿಸಿದ ಡೀಪ್ ಡೈವರ್ ಅವರೂ ಡೈವ್ ಮಾಡಿದರು. ಗಂಗಾವಳಿ ನೀರಿನ ಆಳದಲ್ಲಿ ಕಲ್ಲು ಬಂಡೆಗಳು ರಾಶಿ ರಾಶಿಯಾಗಿ ಬಿದ್ದಿವೆ. ಆಲದ ಮರವೊಂದು ಬುಡಮೇಲಾಗಿದೆ. ಹೈಟೆನ್ಶನ್ ವಿದ್ಯುತ್ ತಂತಿಗಳು ಸುರುಳಿ ಸುರುಳಿಯಾಗಿ ಸುತ್ತಿಕೊಂಡಿವೆ. ಈ ನಡುವೆ ನೀರಿನ ವೇಗದಿಂದಾಗಿ ಆಲದ ಮರಗಳ ಬೇರುಗಳ ನಡುವೆ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾದಾಗ ಕಾರ್ಯಾಚರಣೆ ಬಿಟ್ಟು ಮೇಲಕ್ಕೆ ಬಂದೆ ಎಂದು ಈಶ್ವರ್ ಮಲ್ಪೆ ಹೇಳುತ್ತಾರೆ. ಇನ್ನೊಂದೆಡೆ ದುರಂತದಲ್ಲಿ ಕಣ್ಮರೆಯಾದ ಕ್ಯಾಂಟೀನ್‌ನ ಕಬ್ಬಿಣದ ಶೀಟುಗಳು ಕತ್ತರಿಸಿ ಬಂಡೆಗಳ ನಡುವೆ ಸಿಲುಕಿಕೊಂಡಿವೆ. ಒಂದು ಕ್ಷಣ ಯಾಮಾರಿದರೂ ತಮ್ಮ ದೇಹವೇ ಕತ್ತರಿಸಿ ಹೋಗುವ ಅಪಾಯ ಇತ್ತು. ಮತ್ತೊಂದೆಡೆ ಹೂಳು ಮೂರು ನಾಲ್ಕು ಅಡಿಗಳಷ್ಟು ತುಂಬಿಕೊಂಡಿವೆ. ನೀರು ಕೆಂಪು ಬಣ್ಣದಿಂದ ಇರುವುದರಿಂದ ನದಿಯ ಕೆಳಗಡೆ ಏನೂ ಕಾಣಿಸುವುದಿಲ್ಲ. ಕತ್ತಲಾವರಿಸಿದಂತೆ ಕಾಣಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಡೈವಿಂಗ್ ಮಾಡುವುದು ಒಂದು ಸವಾಲು ಎಂದು ಈಶ್ವರ ಹೇಳುತ್ತಾರೆ. ಬೇಸರ: ನದಿಯಲ್ಲಿ ನೀರಿನ ವೇಗ ಹೆಚ್ಚಿದ್ದರೂ ಕಣ್ಮರೆಯಾದವರನ್ನು ಪತ್ತೆ ಹಚ್ಚಬೇಕೆಂದು ಸವಾಲಿನ ನಡುವೆಯೂ ಡೈವ್ ಮಾಡಿದರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದರಿಂದ ಬೇಸರವೂ ಆಗಿದೆ ಎಂದು ಮುಳುಗು ತಜ್ಞ ಈಶ್ವರ ಮಲ್ಪೆ ತಿಳಿಸಿದರು.

Share this article