ಅಡ್ಯನಡ್ಕ ಬ್ಯಾಂಕ್ ಕಳ್ಳತನ ಪ್ರಕರಣ ; ತೀವ್ರಗೊಂಡ ತನಿಖೆ

KannadaprabhaNewsNetwork |  
Published : Mar 02, 2024, 01:47 AM ISTUpdated : Mar 02, 2024, 03:10 PM IST
11 | Kannada Prabha

ಸಾರಾಂಶ

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಶಾಖೆ ಕಳ್ಳತನ ಪ್ರಕರಣವಾಗಿ ತಿಂಗಳಾಗುತ್ತಾ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಪ್ರಗತಿಯನ್ನು ಸಾಧಿಸಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಟ್ಲ - ಪುತ್ತೂರು ರಸ್ತೆಯ ಗುಪ್ತ ಸ್ಥಳವೊಂದರಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಟ್ವಾಳ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಶಾಖೆ ಕಳ್ಳತನ ಪ್ರಕರಣವಾಗಿ ತಿಂಗಳಾಗುತ್ತಾ ಬಂದಿದ್ದು, ಪೊಲೀಸರು ತನಿಖೆಯಲ್ಲಿ ಪ್ರಗತಿಯನ್ನು ಸಾಧಿಸಿ ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಟ್ಲ - ಪುತ್ತೂರು ರಸ್ತೆಯ ಗುಪ್ತ ಸ್ಥಳವೊಂದರಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಪೆರ್ಲದಲ್ಲಿ ವಾಹನದ ಗುರುತು ಹಾಗೂ ನಂಬರ್ ಪ್ಲೇಟ್ ಪತ್ತೆ ಮಾಡಲಾಗಿತ್ತಾದರೂ, ಅದರಿಂದ ಕಳ್ಳರ ಪತ್ತೆಯನ್ನು ಮಾಡಲು ಸಾಧ್ಯವಾಗಿರಲಿಲ್ಲ. ತಾಂತ್ರಿಕ ತನಿಖೆಯ ಮೂಲಕ ಕೃತ್ಯಕ್ಕೆ ಕಾರಣರಾದವರ ಮಾಹಿತಿಯನ್ನು ಸಂಗ್ರಹಿಸಿದ ಪೊಲೀಸರು ಪ್ರಮುಖ ಆರೋಪಿಗಳನ್ನು ಎರಡು ದಿನದ ಮೊದಲು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯ ಪ್ರಕಾರ ಕೇರಳದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ವಶಕ್ಕೆ ಪಡೆದ ವಿಚಾರ ಬಹಿರಂಗಗೊಳ್ಳಬಾರದೆಂಬ ಕಾರಣಕ್ಕೆ ವಿಟ್ಲ - ಪುತ್ತೂರು ರಸ್ತೆಯ ಗುಪ್ತ ಸ್ಥಳವೊಂದರಲ್ಲಿ ಇರಿಸಿ ಅಲ್ಲಿಗೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. 

ವಿಚಾರಣೆಯ ಸಂದರ್ಭದಲ್ಲಿ ನಗದು ಹಾಗೂ ಚಿನ್ನಾಭರಣವನ್ನು ಪಾಲು ಮಾಡಿಕೊಂಡು ಹಂಚಿಕೊಂಡ ಮಾಹಿತಿಯನ್ನು ಬಂಧಿತರು ನೀಡಿದ್ದಾರೆ ಎನ್ನಲಾಗಿದ್ದು, ವಶಕ್ಕೆ ಪಡೆದವರನ್ನು ಅಲ್ಲಿಗೆ ಖಾಸಗಿ ವಾಹನದ ಮೂಲಕ ಕರೆದುಕೊಂಡು ಹೋಗಿ ಚಿನ್ನಾರವಣ, ನಗದು ವಶಪಡಿಸಿಕೊಳ್ಳುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ. 

ಬ್ಯಾಂಕ್ ಕಟ್ಟಡದ ಹಿಂಭಾಗಿಲಿನ ಕಿಟಕಿಯನ್ನು ತುಂಡರಿಸಿ ಒಳ ನುಗ್ಗಿದ ಕಳ್ಳರು ಸೇಫ್ ಲಾಕರ್ ಬಾಗಿಲು ತುಂಡರಿಸಿ ಲಾಕರ್ ಒಳಗಿದ್ದ ನಗದು ಹಾಗೂ ಚಿನ್ನಾಭರಣವನ್ನು ಫೆ.೭ರ ರಾತ್ರಿ ದೋಚಿದ್ದರು. ಇದರ ಪ್ರಮಾಣದ ಬಗ್ಗೆ ಠಾಣೆಗೆ ದೂರಿನಲ್ಲಿ ಶಾಖಾ ಪ್ರಬಂಧಕರು ನಿಖರ ಮಾಹಿತಿಯನ್ನು ನೀಡಿರಲಿಲ್ಲ.

ಬ್ಯಾಂಕ್ ಕಳ್ಳತನ ನಡೆಯುತ್ತಿದ್ದಂತೆ ವಾಹನದ ಗುರುತು ಪತ್ತೆ ಮಾಡಿ, ಸ್ಥಳೀಯ ಇಬ್ಬರನ್ನು ಅನುಮಾನದ ಮೇಲೆ ವಿಚಾರಣೆಯನ್ನು ನಡೆಸಿ ಬಿಡುಗಡೆ ಮಾಡಲಾಗಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ