ಹೂವಿನಹಡಗಲಿ: ತಾಲೂಕಿನ ಮಾಗಳದಲ್ಲಿ ಎರಡು ಮಸೀದಿಗಳಿದ್ದು, ಮೊಹರಂ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಾರೆ. ಆದರೆ ಮೊಹರಂ ಮುಗಿದ ಬೆಳಗಿನ ಜಾವ 4 ಗಂಟೆಗೆ ದೇವರು ಕಾಳಗ ಆಡುವ ಸಂದರ್ಭದಲ್ಲಿ, ಇಷ್ಟು ದಿನ ಎರಡು ಡೋಲಿ ಬೇರೆ ಬೇರೆ ಕಡೆ ಪೂಜೆ ಮಾಡುತ್ತಿದ್ದರು. ಈ ಬಾರಿ ಎರಡು ಡೋಲಿಗಳು ಒಂದೇ ಕಡೆ ಸಮಾಗಮಗೊಂಡಿದ್ದು, ಗ್ರಾಮಸ್ಥರಲ್ಲಿ ಹರ್ಷ ತಂದಿದೆ.
30 ವರ್ಷಗಳ ಕಾಲ ದೊಡ್ಡ ಮಸೀದಿ ಮತ್ತು ಸಣ್ಣ ಮಸೀದಿಯ ದೈವಸ್ಥರು ಮತ್ತು ಭಕ್ತರ ನಡುವೆ ಸಣ್ಣದೊಂದು ವ್ಯತ್ಯಾಸ ಬಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಎರಡೂ ಡೋಲಿಗಳು ಬೇರೆ ಬೇರೆ ಕಡೆ ನಿಲ್ಲಿಸಿ, ಅವರವರ ಡೋಲಿ ಮುಂದೆ ದೇವರು ಕಾಳಗ ಆಡುವ ಸಂಪ್ರದಾಯ ಮಾಡಿಕೊಂಡು ಬಂದಿದ್ದರು. ಈ ಬಾರಿ ಎರಡು ಕಡೆಯ ದೈವಸ್ಥರು ಮತ್ತು ಭಕ್ತರು ಸೇರಿಕೊಂಡು ಈ ಹಿಂದೆ ಆಗಿರುವ ವ್ಯತ್ಯಾಸವನ್ನು ಮರೆತು, ಗ್ರಾಮದ ಹಿತಕ್ಕಾಗಿ ಎರಡೂ ಡೋಲಿಗಳನ್ನು ಒಂದೇ ಕಡೆ ನಿಲ್ಲಿಸಿ ಮೊಹರಂ ಸಂಪ್ರದಾಯದಂತೆ ದೇವರ ಕಾಳಗ ಆಡುವ ಸಂಪ್ರದಾಯ ಮಾಡಿದರು. ಗ್ರಾಮದಲ್ಲಿ ಮೊಹರಂ ಕೊನೆಯ ದಿನ ಇಡೀ ರಾತ್ರಿಯೆಲ್ಲ ಅಲಾಯಿ ಹಾಡುಗಳನ್ನು ಹಾಡುತ್ತಾ, ನೆರೆದಿದ್ದ ಭಕ್ತರಿಗೆ ಮನೋರಂಜನೆ ನೀಡಿದರು. ಜತೆಗೆ ಮಧ್ಯರಾತ್ರಿ ವೇಳೆ ಕೆಲವು ಭಕ್ತರು ಅಲಾಯಿ ಕುಣಿಯಲ್ಲಿ ಹಾಕಿದ್ದ ಬೆಂಕಿಯಲ್ಲಿ ಹಾಯ್ದು ಪೀರಲು ದೇವರುಗಳನ್ನು ಹಿಡಿದು ದೇವರ ನಾಮಸ್ಮರಣೆ ಮಾಡುತ್ತಾ, ಅಲಾಯಿ ಕುಣಿಯನ್ನು ಸುತ್ತುವರಿದರು.ಗ್ರಾಮದ ಭಕ್ತರು ಮಾಲ್ದಿ ಹಾಗೂ ಸಕ್ಕರೆಯನ್ನು ದೇವರಿಗೆ ಅರ್ಪಿಸಿ ಭಕ್ತಿ ಮೆರೆದರು. ಜತೆಗೆ ದನ ಕರುಗಳಿರುವವರು ಆಲಾಯಿ ಕುಣಿಯಲ್ಲಿನ ಬೆಂಕಿಗೆ ಉಪ್ಪು ಚೆಲ್ಲುವ ಮೂಲಕ ಮನೆಯಲ್ಲಿನ ಜಾನುವಾರುಗಳಿಗೆ ಉಣ್ಣೆ ಅಂಟದಿರಲಿ ಹಾಗೂ ರೋಗ ರುಜಿನ ಬಾರದಿರಲಿ ಎಂದು ಹರಕೆಯನ್ನು ತೀರಿಸಿದರು.
ದೇವರು ಕಾಳಗ ಆಡುವ ಸಂಪ್ರದಾಯಕ್ಕೂ ಮುನ್ನ ಸಮಾಸೆಯ ಸಿಡಿಮದ್ದುಗಳನ್ನು ಸಿಡಿಸಲಾಯಿತು. ದೇವರ ಕಾಳಗ ನೋಡಲು ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು. ಡೋಲಿಯ ಮುಂದೆ ಮಹಿಳೆಯರು ಮನೆಯಿಂದ ಕೊಡಪಾನದಲ್ಲಿ ನೀರು ತಂದು ಹಾಕುವ ದೃಶ್ಯ ಸಾಮಾನ್ಯವಾಗಿತ್ತು.ಬುಧವಾರ ಸಂಜೆ ಎರಡು ಡೋಲಿ ಹಾಗೂ ಪೀರಲು ದೇವರುಗಳನ್ನು ಮೆರವಣಿಗೆ ಮಾಡುತ್ತಾ, ತುಂಗಭದ್ರಾ ನದಿ ಹೋಗಿ ದೇವರುಗಳನ್ನು ತೊಳೆದುಕೊಂಡು ಬಂದರು.