ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರು
ತೀವ್ರ ಬರಗಾಲ, ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸಿರುವ ರಾಜ್ಯಕ್ಕೆ ಇದೀಗ ಉಷ್ಣ ಅಲೆಯ ಭೀತಿ ಎದುರಾಗಿದ್ದು, ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಭಾರೀ ಪ್ರಮಾಣದ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದ ಹಲವು ಗ್ರಾಮ, ನಗರ ಪ್ರದೇಶದಲ್ಲಿ ಜನರು ಹನಿ ನೀರಿಗೂ ಪರದಾಡುವಂತಾಗಿದೆ.
ಈ ನಡುವೆ ಇದೀಗ ಉಷ್ಣ ಅಲೆಯ ಭೀತಿ ಎದುರಾಗಿರುವುದು ಮಾನವನಿಗೆ ಮಾತ್ರವಲ್ಲದೇ ಪ್ರಾಣಿ, ಪಕ್ಷಿ ಸೇರಿದಂತೆ ಇಡೀ ಜೀವ ಸಂಕುಲಕ್ಕೆ ಸಂಕಷ್ಟ ತಂದೊಡ್ಡಿದೆ.
ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮದಿಂದ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ವಾಡಿಕೆ ಪ್ರಮಾಣಕ್ಕಿಂತ 3ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗಿದೆ.
ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚು ದಾಖಲಾಗುತ್ತಿದೆ. ಇದರ ಪರಿಣಾಮವಾಗಿ ಉಷ್ಣ ಅಲೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಮುಖವಾಗಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಹಾಗೂ ಅಸುಪಾಸಿನಲ್ಲಿ ಕಾಣಿಸಿಕೊಂಡ ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಬೀದರ್, ಯಾದಗಿರಿ, ಕೊಪ್ಪಳ, ಗದಗ ಮೊದಲಾದ ಜಿಲ್ಲೆಗಳಲ್ಲಿ ಉಷ್ಣ ಅಲೆ ಭೀತಿ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಒಂದು ತಿಂಗಳ ಮೊದಲೇ ಉಷ್ಣ ಅಲೆ: ಸಾಮಾನ್ಯವಾಗಿ ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆ ಬಿಸಿ ಹೆಚ್ಚಾಗಿ ಉಷ್ಣ ಅಲೆ ಸೃಷ್ಟಿಯಾಗುತ್ತದೆ. ಆದರೆ, ಈ ಬಾರಿ ಒಂದು ತಿಂಗಳ ಮೊದಲೇ ಉಷ್ಣ ಮಾರುತ ಎದುರಾಗುವ ಮುನ್ಸೂಚನೆ ಲಭ್ಯವಾಗಿದೆ.
ಕಳೆದ ವರ್ಷ ಸಹ ಇದೇ ಅವಧಿಯಲ್ಲಿ ರಾಜ್ಯದ ಕರಾವಳಿಯ ಕಾರವಾರ, ಹೊನ್ನಾವರದಲ್ಲಿ ದಾಖಲೆಯ ಪ್ರಮಾಣ ಗರಿಷ್ಠ ಉಷ್ಣಾಂಶ ದಾಖಲಾಗಿ ಉಷ್ಣ ಮಾರುತ ಸೃಷ್ಟಿಯಾಗಿತ್ತು.
ಹವಾಮಾನ ಇಲಾಖೆ ನಿಗಾ: ಗರಿಷ್ಠ ಉಷ್ಣಾಂಶ ದಾಖಲಾಗುತ್ತಿರುವ ಜಿಲ್ಲೆಗಳ ಮೇಲೆ ಹವಾಮಾನ ಇಲಾಖೆ ನಿಗಾ ವಹಿಸಿದ್ದು, ಸತತವಾಗಿ ನಾಲ್ಕು ಕೇಂದ್ರದಲ್ಲಿ ಸಾಮಾನ್ಯಕ್ಕಿಂತ 4ರಿಂದ 5 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಬೇಕು.
ಮೂರು ಜಿಲ್ಲೆಗಳಲ್ಲಿ ಈ ರೀತಿ ಕಂಡುಬಂದರೆ ಮಾತ್ರ ಉಷ್ಣ ಅಲೆಯನ್ನು ಹವಾಮಾನ ಇಲಾಖೆ ಘೋಷಣೆ ಮಾಡಲಿದೆ. ಹೀಗಾಗಿ, ಉಷ್ಣಾಂಶದ ಅಂಕಿ-ಅಂಶಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಉಷ್ಣ ಅಲೆಗೆ ಕಾರಣ ಏನು?
ಮುಖ್ಯವಾಗಿ ಕಳೆದ ವರ್ಷ ಮಳೆ ಕೊರತೆಯಿಂದ ಇದೀಗ ಗಾಳಿ ಮತ್ತು ಮಣ್ಣು ಎರಡರಲ್ಲಿಯೂ ತೇವಾಂಶದ ಕೊರತೆ ಇದೆ. ಜಾಗತಿಕ ಮಟ್ಟದಲ್ಲಿ ಎಲ್‌ನಿನೋ ಪ್ರಭಾವ ಇರುವುದು ಉಷ್ಣ ಅಲೆ ಸೃಷ್ಟಿಗೆ ಪ್ರಮುಖ ಕಾರಣವಾಗಿದೆ. ಜತೆಗೆ, ಉತ್ತರ ಭಾರತ ಕಡೆಯಿಂದ ಬಿಸಿ ಗಾಳಿ ಬೀಸಿದ ಸಂದರ್ಭದಲ್ಲಿಯೂ ಉಷ್ಣ ಅಲೆ ಉಂಟಾಗುವ ಸಾಧ್ಯತೆ ಇದೆ.
ಅತಿ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿರುವ ಜಿಲ್ಲೆ ವಿವರ
ಜಿಲ್ಲೆದಾಖಲಾದ ಗರಿಷ್ಠ ಉಷ್ಣಾಂಶವಾಡಿಕೆಗಿಂತ ಎಷ್ಟು ಹೆಚ್ಚು?
ಕಲಬುರಗಿ: 40.2 - 2.7
ಬಾಗಲಕೋಟೆ: 39.3 - 4.2
ರಾಯಚೂರು: 39.0 - 1.5
ಕೊಪ್ಪಳ: 37.8 - 2.3
ವಿಜಯಪುರ: 37.5 - 1.3
ಬೀದರ್: 37.0 - 1.2
ಗದಗ: 37.0 - 1.7
ಎಲ್‌ನಿನೋ ಪ್ರಭಾವ ಹಾಗೂ ಮಳೆ ಕೊರತೆ ಹಿನ್ನೆಲೆಯಲ್ಲಿ ಉಷ್ಣ ಅಲೆ ರಾಜ್ಯದ ಅಲ್ಲಲ್ಲಿ ಕಾಣಿಸಿಕೊಳ್ಳಲಿದೆ. ಮೇ ವರೆಗೆ ಗರಿಷ್ಠ ಉಷ್ಣಾಂಶ ಹೆಚ್ಚಾಗಿ ಇರಲಿದೆ. - ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞ