ವಿಡಿಯೋ ಮಾಡಿಟ್ಟು ಗೃಹಿಣಿ ನೇಣಿಗೆ ಶರಣು

KannadaprabhaNewsNetwork |  
Published : Jul 30, 2024, 01:33 AM IST
Manasa | Kannada Prabha

ಸಾರಾಂಶ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ವಿಡಿಯೋ ಮಾಡಿಟ್ಟು ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸರಗೊಂಡು ವಿಡಿಯೋ ಮಾಡಿಟ್ಟು ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿ ರಸ್ತೆ ಬ್ಯಾಡರಹಳ್ಳಿ ಸಮೀಪದ ವಿದ್ಯಮಾನ ನಗರದ ನಿವಾಸಿ ಮಾನಸಾ (26) ಮೃತ ದುರ್ದೈವಿ. ಮನೆಯಲ್ಲಿ ಭಾನುವಾರ ಮಧ್ಯಾಹ್ನ ಮಾನಸಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಪತಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ಮೃತಳ ತಂದೆ ನೀಡಿದ ದೂರಿನ ಮೇರೆಗೆ ಮಾನಸಾ ಪತಿ ದಿಲೀಪ್‌ನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರು ವರ್ಷಗಳ ಹಿಂದೆ ಪ್ರೀತಿಸಿ ಮಾನಸಾ ಹಾಗೂ ದಿಲೀಪ್ ವಿವಾಹವಾಗಿದ್ದು, ಈ ದಂಪತಿಗೆ ಹೆಣ್ಣು ಮಗುವಿದೆ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮಧ್ಯೆ ತಾಳ-ಮೇಳ ತಪ್ಪಿದ್ದು, ಆಗಾಗ್ಗೆ ಮನೆಯಲ್ಲಿ ಜಗಳವಾಗುತ್ತಿದ್ದವು. ಅಲ್ಲದೆ ಸಕಾರಣವಿಲ್ಲದೆ ಪತ್ನಿಗೆ ದಿಲೀಪ್ ಹೊಡೆಯೋದು ಬಡಿಯೋದು ಮಾಡುತ್ತಿದ್ದ ಎನ್ನಲಾಗಿದೆ.

ಈ ಕಿರುಕುಳ ಸಹಿಸಲಾರದೆ ಮಾನಸಾ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಅಜ್ಜಿ ಮನೆಗೆ ಮೃತಳ ಪುತ್ರಿ ಹೋಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಮಗಳ ಸಾವಿಗೆ ಅಳಿಯನೇ ಕಾರಣನೆಂದು ಆರೋಪಿ ಬ್ಯಾಡರಹಳ್ಳಿ ಠಾಣೆಗೆ ಮೃತ ಮಾನಸ ತಂದೆ ದೂರು ನೀಡಿದರು. ಅದರನ್ವಯ ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊಬೈಲ್‌ನಲ್ಲಿ ವಿಡಿಯೋ ಪತ್ತೆ

ಮೃತಳ ಮೊಬೈಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತಾನೇ ಚಿತ್ರೀಕರಿಸಿಕೊಂಡಿರುವ ವಿಡಿಯೋ ಪತ್ತೆಯಾಗಿದೆ. ಇದರಲ್ಲಿ ಆತ್ಮಹತ್ಯೆಗೆ ಕಾರಣ ಹೇಳಿದ್ದಾಳೆ ಎನ್ನಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ