ಕನ್ನಡಪ್ರಭ ವಾರ್ತೆ ಉಡುಪಿ
ಪರ್ಯಾಯಕ್ಕೆ ಮುನ್ನ ದೇಶದ ಪುಣ್ಯಕ್ಷೇತ್ರಗಳ ದರ್ಶನಗೈದು ಉಡುಪಿಗೆ ಹಿಂತಿರುಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಇದೀಗ ಸ್ಥಳೀಯ ತೀರ್ಥಕ್ಷೇತ್ರ ಸಂಚಾರ ಆರಂಭಿಸಿದ್ದಾರೆ.ಬುಧವಾರ ಮುಂಜಾನೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ ಶ್ರೀ ಸುಗುಣೇಂದ್ರ ತೀರ್ಥರು ಮತ್ತು ಕಿರಿಯ ಪಟ್ಟ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರನ್ನು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಬರಮಾಡಿಕೊಂಡು ಗೌರವಿಸಿದರು. ನಂತರ ಪುತ್ತಿಗೆ ಶ್ರೀಗಳು ತಮ್ಮ ಉಪಾಸ್ಯ ದೇವರ ಪೂಜೆ ನೆರವೇರಿಸಿದರು.
ನಂತರ ಪುತ್ತಿಗೆ ಶ್ರೀಗಳು ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಾಲಯಕ್ಕೆ ಭೇಟಿ ನೀಡಿದರು. ಅವರನ್ನು ಸ್ವಾಗತಿಸಿ ಕ್ಷೇತ್ರದ ಧರ್ಮದರ್ಶಿ ನಿ.ಬೀ.ವಿಜಯ ಬಲ್ಲಾಳ್ ಆರತಿ ಬೆಳಗಿ ಶ್ರೀಗಳನ್ನು ಅಭಿವಂದಿಸಿದರು.ಸೂಲಿಬೆಲೆ ಸಂವಾದ: ಸಂಜೆ ರಥಬೀದಿಯ ಆನಂದತೀರ್ಥ ಮಂಟಪದಲ್ಲಿ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ‘ಪ್ರತಿಮೆ ಪ್ರಾಂಗಣಗಳ ಯೋಜನೆ ಅನಿವಾರ್ಯವೇ’ ಎಂಬ ಬಗ್ಗೆ ಸುಮನಾ ಭಟ್ ಕುತ್ಪಾಡಿ ಸಂವಾದ ನೆರವೇರಿಸಿಕೊಟ್ಟರು.
ಶ್ರೀ ಸ್ವಾಮಿ ಕೊರಗಜ್ಜ ಮಹಿಳಾ ಮಹಿಳಾ ಚಂಡೆವಾದನ ಬಳಗದಿಂದ ಭಜನೆ, ವಿದುಷಿ ವೀಣಾ ಸಾಮಗ ಬಳಗದಿಂದ ಭರತನಾಟ್ಯ ಪ್ರದರ್ಶನ, ಶುಭಶ್ರೀ ಅಡಿಗ ಮತ್ತು ಬಳಗದಿಂದ ವೀಣಾವಾದನ ಕಾರ್ಯಕ್ರಮಗಳು ನಡೆದವು.ಕುತ್ಯಾರುನಲ್ಲಿ ಪುತ್ತಿಗೆ ಶ್ರೀಗಳಿಗೆ ಹುಟ್ಟೂರ ಗುರುವಂದನೆ: ಚತುರ್ಥ ಬಾರಿ ಪರ್ಯಾಯ ಪೀಠಾರೋಹಣಗೈಯ್ಯುತ್ತಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಬುಧವಾರ ಕುತ್ಯಾರುನಲ್ಲಿ ಹುಟ್ಟೂರು ಗುರುವಂದನೆ ಸಲ್ಲಿಸಲಾಯಿತು.
ಶ್ರೀಗಳ ಸನ್ಮಾನ ಸಮಿತಿ, ಯುವಕ ಮಂಡಲ ಕುತ್ಯಾರು, ಉಲ್ಲಾಯ ಫ್ರೆಂಡ್ಸ್ ಕುತ್ಯಾರು ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿರಿಯರಾದ ಕುತ್ಯಾರು ಕೃಷ್ಣಮೂರ್ತಿ ಭಟ್, ಸುಬ್ಬಯ್ಯ ಹೆಗ್ಡೆ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ದನ ಆಚಾರ್ಯ, ಸನ್ಮಾನ ಸಮಿತಿ ಕಾರ್ಯಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕುತ್ಯಾರು ಯುವಕ ಮಂಡಲದ ಅಧ್ಯಕ್ಷ ಸುಶಾಂತ್ ಶೆಟ್ಟಿ, ಕುತ್ಯಾರು ಶ್ರೀಧರ ತಂತ್ರಿ, ಪ್ರಸಾದ್ ಶೆಟ್ಟಿ ಕುತ್ಯಾರು ಹಾಗೂ ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.