ಮಳೆರಾಯನ ನಿರೀಕ್ಷೆಯಲ್ಲಿರುವ ರೈತರು ಕೃಷಿ ಚಟುವಟಿಕೆಗಾಗಿ ಎತ್ತು ಖರೀದಿಸುತ್ತಾರೆ. ಬೇಡಿಕೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಸಹಜವಾಗಿಯೇ ಬೆಲೆ ಏರಿಕೆ ಕಂಡಿದೆ
ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ವೇಗ ಪಡೆದುಕೊಳ್ಳುತ್ತಿದ್ದಂತೆ ಎತ್ತುಗಳ ಬೇಡಿಕೆಯ ಜತೆಗೆ ಬೆಲೆ ಹೆಚ್ಚಾಗಿರುವ ಪರಿಣಾಮ ಸಣ್ಣ ಮತ್ತು ಬಡ ರೈತರಿಗೆ ಎತ್ತು ಖರೀದಿ ಮಾಡುವುದು ದುಸ್ತರವಾಗುತ್ತಿದೆ.
ಮಳೆಗಾಲ ಸಮೀಪಿಸುತ್ತಿದ್ದು, ಕೃಷಿ ಚಟುವಟಿಕೆ ನಡೆಸಲು ಬೇಕಾಗಿರುವ ಎತ್ತುಗಳ ಬೆಲೆ ಈಗಾಗಲೇ ಗಗನಕ್ಕೇರಿದೆ. ಪಟ್ಟಣದ ಜಾನುವಾರು ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಎತ್ತುಗಳು ಭಾನುವಾರ ₹2 ಲಕ್ಷ ವರೆಗೂ ಮಾರಾಟವಾಯಿತು. ಕಳೆದ ಭಾನುವಾರ ಲಕ್ಷ ರು.ಗಿಂತ ಕಡಿಮೆ ದರವಿತ್ತು.
ಪಟ್ಟಣದಲ್ಲಿ ಪ್ರತಿ ಭಾನುವಾರ ಜಾನುವಾರು ಸಂತೆ ನಡೆಯುತ್ತಿದ್ದು, ಈ ಸಂತೆಯಲ್ಲಿ ಕೊಪ್ಪಳ, ಬಾಗಲಕೋಟೆ, ರಾಯಚೂರು, ಗದಗ ಸೇರಿದಂತೆ ವಿವಿಧ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳ ರೈತರು ಇಲ್ಲಿಗೆ ಆಗಮಿಸಿ ಎತ್ತುಗಳ ವ್ಯಾಪಾರ ವಹಿವಾಟು ನಡೆಸುತ್ತಾರೆ.
ಮಳೆರಾಯನ ನಿರೀಕ್ಷೆಯಲ್ಲಿರುವ ರೈತರು ಕೃಷಿ ಚಟುವಟಿಕೆಗಾಗಿ ಎತ್ತು ಖರೀದಿಸುತ್ತಾರೆ. ಬೇಡಿಕೆ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಸಹಜವಾಗಿಯೇ ಬೆಲೆ ಏರಿಕೆ ಕಂಡಿದೆ.
ಕೃಷಿ ಕಾರ್ಯಗಳಿಗೆ ಟ್ರ್ಯಾಕ್ಟರ್ ಬಳಕೆ ಹೆಚ್ಚಾದರೂ ಸಣ್ಣ ಜಮೀನು ಹೊಂದಿರುವ ರೈತರು ಇನ್ನೂ ಜೋಡಿ ಎತ್ತುಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಬಿತ್ತನೆ ಕೆಲಸ ಸೇರಿದಂತೆ ಹಲವು ಕೃಷಿ ಚಟುವಟಿಕೆಗೆ ಎತ್ತುಗಳೇ ಮುಖ್ಯ ಆಧಾರವಾಗಿವೆ.
ಈ ಬಾರಿ ಜಾನುವಾರು ಸಂತೆಯಲ್ಲಿ ಉತ್ತಮ ತಳಿಯ ಜೋಡಿ ಎತ್ತುಗಳಿಗೆ ₹1.60 ಲಕ್ಷದಿಂದ ₹2 ಲಕ್ಷದವರೆಗೆ ದರ ಕೇಳಲಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಸುಮಾರು ದರ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದರು.
ಸಣ್ಣ ರೈತರಿಗೆ ಎತ್ತುಗಳ ಬೆಲೆ ಏರಿಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿತ್ತನೆ ಪೂರ್ವ ಚಟುವಟಿಕೆ ಪೂರೈಸಿದರಾಯಿತು ಎಂದು ನಿರ್ಧರಿಸಿರುವ ರೈತನಿಗೆ ಎತ್ತುಗಳ ಬೆಲೆ ಹೆಚ್ಚಳದಿಂದ ತಲೆಬಿಸಿಯಾಗಿದೆ. ಕಳೆದ ಕೆಲವು ವಾರಗಳ ಹಿಂದೆ ಇರುವ ಬೆಲೆ ಲೆಕ್ಕಹಾಕಿ ಮಾರುಕಟ್ಟೆಗೆ ಬಂದವರಿಗೆ ಗೊಂದಲ ಉಂಟಾಗಿದೆ. ಕೆಲವು ಜೋಡಿ ಎತ್ತುಗಳ ಬೆಲೆ ಈಗ ಸುಮಾರು ₹40 ಸಾವಿರ ಹೆಚ್ಚಳವಾಗಿದೆ. ದೊಡ್ಡ ಹಿಡುವಳಿ ಹೊಂದಿರುವ ರೈತರು ಎತ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ಆದರೆ ಸಣ್ಣ ರೈತರು ಮಾರುಕಟ್ಟೆಯ ತುಂಬೆಲ್ಲ ಚೌಕಾಶಿ ನಡೆಸಿ ಬರಿಗೈಯಲ್ಲಿ ಮರಳುತ್ತಿದ್ದಾರೆ.
ಒಳ್ಳೆಯ ತಳಿ ಬದಲಿಗೆ ಸಾಮಾನ್ಯ ತಳಿ ಎತ್ತುಗಳನ್ನಾದರೂ ಖರೀದಿಸಿದರಾಯಿತು ಎಂಬ ಆಲೋಚನೆಯೂ ಕೈಗೂಡದಂತಾಗಿದೆ. ಸಾಮಾನ್ಯ ತಳಿಗಳ ಎತ್ತುಗಳ ಬೆಲೆಯಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಕೃಷಿಗೆ ಯೋಗ್ಯವಲ್ಲದ ಎತ್ತುಗಳ ಬೆಲೆಯೂ ಸುಮಾರು ₹1 ಲಕ್ಷ ದಾಟಿತ್ತು.
ಎತ್ತುಗಳ ಖರೀದಿಗಾಗಿ ಕುಕನಪಳ್ಳಿ, ರೋಣ ಮತ್ತಿತರ ಕಡೆಗಳಲ್ಲಿ ಸಂತೆ ಸುತ್ತಾಡಿ ಸುಸ್ತಾಯಿತು. ಆದರೆ ಉತ್ತಮ ಎತ್ತುಗಳು ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಅವುಗಳ ಬೆಲೆ ದುಬಾರಿಯಾಗಿದೆ ಎಂದು ಎತ್ತುಗಳ ಖರೀದಿಗೆ ಬಂದ ರೈತ ದುರಗಪ್ಪ ವಣಗೇರಿ ಅಳಲು ತೋಡಿಕೊಂಡರು.
ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಪ್ರಾರಂಭವಾಗುತ್ತಿರುವ ಹಿನ್ನೆಲೆ ದೊಡ್ಡ ರೈತರು ಟ್ರ್ಯಾಕ್ಟರ್ ಮೂಲಕ ಕೃಷಿ ಕೆಲಸ ಮಾಡಿದರೆ ಸಣ್ಣ ರೈತರು ಎತ್ತುಗಳ ಮೂಲಕವೆ ಕೃಷಿ ಕಾರ್ಯ ಮಾಡಬೇಕಿದೆ ಎಂದು ರೈತ ಶರಣಪ್ಪ ಲಿಂಗಸೂರು ತಿಳಿಸಿದ್ದಾರೆ.
ಮಳೆಗಾಲ ಸಮೀಪಿಸುತ್ತಿದ್ದಂತೆ ಕೃಷಿ ಚಟುವಟಿಕೆ ಚುರುಕಾಗಿದೆ. ಈ ಸಂದರ್ಭದಲ್ಲಿ ಎತ್ತುಗಳ ಬೆಲೆ ಏರಿಕೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಟ್ರ್ಯಾಕ್ಟರ್ ಬಾಡಿಗೆ ದುಬಾರಿ, ಡೀಸೆಲ್ ಬೆಲೆ ಏರಿಕೆ ಹಾಗೂ ಕೃಷಿ ವೆಚ್ಚ ಹೆಚ್ಚಳದ ನಡುವೆ ಎತ್ತುಗಳ ಬೆಲೆ ಏರಿಕೆ ಹೆಚ್ಚುವರಿ ಹೊರೆ ತಂದಿದೆ ಎಂದು ಕೇಸೂರು ಗ್ರಾಮದ ರೈತ ಮುತ್ತಣ್ಣ ಕಾಟಾಪುರ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.