ಕೃಷಿ ಹೊಂಡಗಳು ಭರ್ತಿ: ರೈತರಲ್ಲಿ ಮಂದಹಾಸ

KannadaprabhaNewsNetwork |  
Published : Jun 09, 2024, 01:39 AM IST
೦೭ವೈಎಲ್‌ಬಿ೩:ಯಲಬುರ್ಗಾ ತಾಲೂಕಿನ ರ‍್ಯಾವಣಕಿ ಗ್ರಾಮದ ರೈತರ ಜಮೀನಿನಲ್ಲಿನ ಕೃಷಿ ಹೊಂಡ ಮುಂಗಾರು ಮಳೆಯಿಂದ ಭರ್ತಿಗೊಂಡಿದೆ. | Kannada Prabha

ಸಾರಾಂಶ

ಗುರುವಾರ ರಾತ್ರಿ, ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಳ್ಳ-ಕೊಳ್ಳ ಸೇರಿದಂತೆ ಎಲ್ಲ ಕೃಷಿ ಹೊಂಡಗಳು ತುಂಬಿದ್ದು ರೈತರ ಮೊಗದಲ್ಲಿ ಮಂದಹಾಸ ಬೀರುತ್ತಿದೆ.

ಶಿವಮೂರ್ತಿ ಇಟಗಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮುಂಗಾರು ಮಳೆಗೆ ಕೃಷಿ ಹೊಂಡಗಳು ಭರ್ತಿಯಾಗಿರುವುದರಿಂದ ತಾಲೂಕಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಗುರುವಾರ ರಾತ್ರಿ, ಶುಕ್ರವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಳ್ಳ-ಕೊಳ್ಳ ಸೇರಿದಂತೆ ಎಲ್ಲ ಕೃಷಿ ಹೊಂಡಗಳು ತುಂಬಿದ್ದು ರೈತರ ಮೊಗದಲ್ಲಿ ಮಂದಹಾಸ ಬೀರುತ್ತಿದೆ. ಈ ಕಳೆದ ವರ್ಷ ೨೦೨೩-೨೪ನೇ ಸಾಲಿನಲ್ಲಿ ಕೃಷಿಭಾಗ್ಯ ಯೋಜನೆಯಡಿ ತಾಲೂಕಿಗೆ ಒಟ್ಟು ೭೨ ಫಲಾನುಭವಿಗಳಿಗೆ ಆಯ್ಕೆ ಮಾಡಲಾಗಿದ್ದು, ಯಲಬುರ್ಗಾ- ೧೯, ಹಿರೇವಂಕಲಕುಂಟಾ-೧೭, ಕುಕನೂರು -೨೦, ಮಂಗಳೂರ-೧೬ ಕೃಷಿ ಹೊಂಡ ನಿರ್ಮಿಸಲಾಗಿದೆ.ಶಾಸಕ ಬಸವರಾಜ ರಾಯರಡ್ಡಿ ಕಾಳಜಿ

ಅಂತರ್ಜಲ ಹೆಚ್ಚಳದ ಜತೆಗೆ ಮುಂದೆ ಮಳೆಯಾಗದಿದ್ದರೆ ಹೊಂಡದಲ್ಲಿರುವ ನೀರನ್ನು ಬಳಕೆ ಮಾಡಿಕೊಂಡು ಬೆಳೆಗೆ ನೀರುಣಿಸಲು ಅನುಕೂಲವಾಗುತ್ತದೆ ಎಂದು ರೈತರ ನಾಡಿಮಿಡಿತ ಅರಿತುಕೊಂಡು ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿಯವರು ೨೦೨೪-೨೫ನೇ ಸಾಲಿನಲ್ಲಿ ಕೃಷಿಭಾಗ್ಯ ಯೋಜನೆಯಡಿ ಪ್ರತಿ ಹೋಬಳಿಗೆ ೧೬ರಂತೆ ಕುಕನೂರು-ಯಲಬುರ್ಗಾ ತಾಲೂಕುಗಳಿಗೆ ಒಟ್ಟು ೬೪ ಕೃಷಿ ಹೊಂಡಗಳಿಗೆ ಅನುಮೋದನೆ ನೀಡಲಾಗಿದೆ.

ಯೋಜನೆಯನ್ನು ಪಟ್ಟಣ ಪ್ರದೇಶಕ್ಕೂ ವಿಸ್ತರಿಸಿ, ಯಲಬುರ್ಗಾ ಸುತ್ತಲಿನ ಕಪ್ಪು ಮಣ್ಣಿನ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಮುಂಗಾರು ಬಿತ್ತನೆ ವೇಳೆಗೆ ಜನರು ಹಾಗೂ ದನಗಳಿಗೆ ಕುಡಿಯಲು ಎರೇ ಭೂಮಿಯಲ್ಲಿ ನೀರು ಸಿಗುತ್ತಿರಲಿಲ್ಲ. ಈಗ ಕೃಷಿ ಹೊಂಡಗಳು ತುಂಬಿದ್ದು, ಬಿತ್ತನೆ ವೇಳೆಗೆ ನೀರಿನ ಕೊರತೆಯಾಗದು ಎಂಬುದು ರೈತರ ಅಭಿಪ್ರಾಯವಾಗಿದೆ. ಹಿಂದಿನ ವರ್ಷಕ್ಕೆ ಹೊಲಿಸಿದರೆ ಇತ್ತೀಚೆಗೆ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿದೆ.

ತಾಲೂಕಿನ ಎರೇ ಭಾಗದಲ್ಲಿ ಉತ್ತಮ ಮುಂಗಾರು ಮಳೆಯಿಂದ ಸಂತಸ ಮನೆ ಮಾಡಿದೆ. ಮುಂದೆ ಮಳೆಯಾಗದಿದ್ದರೂ ಕೃಷಿ ಹೊಂಡದ ನೀರು ಹರಿಸಿ ಹಸಿರು ಕಾಣುವ ಉಮೇದಿಯಿಂದ ರೈತರು ಕೃಷಿ ಚಟುವಟಿಯಲ್ಲಿ ತೊಡಗಿದ್ದಾರೆ.ಸಂತಸ

ನಮ್ಮ ಜಮೀನಿನಲ್ಲಿ ಕೃಷಿ ಇಲಾಖೆ ವತಿಯಿಂದ ಹೊಂಡ ನಿರ್ಮಾಣ ಮಾಡಿದ್ದೇವೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಹೊಂಡ ತುಂಬಿರುವುದು ಸಂತಸ ತಂದಿದೆ.

ಸಿದ್ದಪ್ಪ ಕಟ್ಟಿಮನಿ ರೈತ

ಹೆಚ್ಚಿನ ಇ‍ಳುವರಿ

ತಾಲೂಕಿನ ರೈತರು ಕೃಷಿಭಾಗ್ಯ ಯೋಜನೆಯಡಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿಹೊಂಡ, ಪಾಲಿಥಿನ್ ಹೊದಿಕೆ, ಡಿಸೇಲ್, ಪಂಪ್ಸೆ್ಟ್, ತಂತಿಬೇಲಿ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳನ್ನು ಅಳವಡಿಸಿಕೊಂಡು ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕು. ಇದರಿಂದ ಬೆಳೆಗಳ ಸಂದಿಗ್ಧ ಪರಿಸ್ಥಿಗಳಲ್ಲಿ ನೀರು ಒದಗಿಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು.

ಪ್ರಾಣೇಶ ಹಾದಿಮನಿ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಯಲಬುರ್ಗಾ

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ