ಕೂಡ್ಲಿಗಿ: ದೇಶದಲ್ಲಿ ಕೃಷಿ ಸಂಸ್ಕೃತಿ ಇಂದು ಉದ್ಯಮವಾಗುವುದರ ಮೂಲಕ ಅದರ ಕರಾಳ ಛಾಯೆ ವ್ಯಾಪಿಸುತ್ತಿದೆ ಎಂದುಕೃಷಿ ಸಂಶೋಧಕ, ಸಾಹಿತಿ, ಗುಬ್ಬಿ ತಾಲೂಕಿನ ಅಮ್ಮನಘಟ್ಟದ ಎಸ್.ಶಂಕ್ರಪ್ಪ ತಿಳಿಸಿದರು.
ಅವರು ತಾಲೂಕಿನ ಹುಲಿಕೆರೆ ಗ್ರಾಮದ ಆನಂದ ನರ್ಸರಿಯಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಕಲಾ ಸಂಸ್ಥೆಯಿಂದ 5ನೇ ರಾಜ್ಯಮಟ್ಟದ ವಿಶ್ವ ಕನ್ನಡ ಸಾಹಿತ್ಯ ಮತ್ತು ಪರಿಸರ ಜಾಗೃತಿ ಸಮ್ಮೇಳನದಲ್ಲಿ ವಿಷಮುಕ್ತ ಕೃಷಿ ಬಗ್ಗೆ ಉಪನ್ಯಾಸ ನೀಡಿದರು.ನಾವು ತಿನ್ನುವ ಆಹಾರ ನಮ್ಮ ನೆಮ್ಮದಿಯ ಬದುಕನ್ನೇ ಕಸಿದುಕೊಂಡಿದೆ. ವಿಷಮುಕ್ತ ಕೃಷಿ ಬಗ್ಗೆ ದೇಶದ ರೈತರಿಗೆ ಅರಿವು ಮೂಡಿಸಬೇಕಾದರೆ ನೇಗಿಲು ಹಿಡಿಯುವ ರೈತರ ಕೈಯಲ್ಲಿ ಲೇಖನಿ ಬಂದಾಗ ಮಾತ್ರ ನಮ್ಮ ಪಾರಂಪರಿಕ ಕೃಷಿಯನ್ನು ಉಳಿಸಲು ಸಾಧ್ಯ ಎಂದರು.ಅಭಿವೃದ್ಧಿಯ ನೆಪದಲ್ಲಿ ದೇಶದಲ್ಲಿ ಕೃಷಿಭೂಮಿ ಉದ್ಯಮಕ್ಕೆ ಬಳಕೆಯಾಗುತ್ತಿದೆ. ಎಲ್ಲಿ ನೋಡಿದರೂ ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಮುಂದಿನ ದಿನಗಳಲ್ಲಿ ಕೃಷಿಗೆ ಭೂಮಿ ಸಿಗುವುದೇ ಅಪರೂಪವಾಗುವ ಕಾಲ ದೂರವಿಲ್ಲ. ಹಳ್ಳಿಗಳು ವೃದ್ದರ ಅನಕ್ಷರಸ್ಥರ ತಾಣಗಳಾಗುತ್ತಿದ್ದು ಅಕ್ಷರಸ್ಥರು ಪಟ್ಟಣ ಸೇರುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಇಡೀ ದೇಶದ ಜನತೆಗೆ ಅನ್ನ ಹಾಕುವ ರೈತರು ಕಡೆಯ ದರ್ಜೆಯ ನಾಗರಿಕರನ್ನಾಗಿ ಸಮಾಜ ಕಾಣುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ್ ಮಾತನಾಡಿ, ಕಾಡು ಆಧಾರಿತ ಕೃಷಿಯಿಂದ ಮಾತ್ರ ರೈತರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಒಂದು ಸಾರಿ ಹುಣಸೆ, ಮಾವು, ನೇರಳೆ, ಬೇಲ ಮುಂತಾದ ಸಸಿನಗಳನ್ನು ಜಮೀನುಗಳಲ್ಲಿ ನೆಟ್ಟರೇ ನಾಲ್ಕೈದು ತಲೆಮಾರುಗಳವರೆಗೆ ಯಾವುದೇ ರಾಸಾಯನಿಕ ಖರ್ಚು ಇಲ್ಲದೇ ಲಕ್ಷಗಟ್ಟಲೇ ಲಾಭಗಳಿಸಬಹುದು. ಆದರೆ ನಮ್ಮ ರೈತರು ಇಂದು ಮೆಕ್ಕೆಜೋಳ, ಅಡಿಕೆ, ಶೇಂಗಾ, ಸೂರ್ಯಕಾಂತಿ ಈಗೇ ಒಂದೇ ಬೆಳೆಯನ್ನು ಹೆಚ್ಚು ಬೆಳೆಯುವ ಮೂಲಕ ಅಧಿಕ ರಸಾಯನಿಕ ಗೊಬ್ಬರ ಕ್ರಿಮಿನಾಶಕ ಬಳಸಿ ಭೂಮಿಯನ್ನು ಬಂಜರು ಮಾಡಿ ತಾವೂ ಸಾಲದ ಶೂಲಕ್ಕೆ ಬಲಿಯಾಗುತ್ತಿರುವುದು ರೈತರ ದುರಂತವಾಗಿದೆ. ಈ ಬಗ್ಗೆ ರೈತರು ಮೊದಲು ಪ್ರಜ್ಞಾವಂತರಾಗಬೇಕು. ಪ್ರತಿಯೊಬ್ಬ ರೈತರು ಸಂಶೋಧಕರಾಗಬೇಕು. ಈ ಮೂಲಕ ಕೃಷಿಯಲ್ಲಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದರು.ಕಾನಾಮಡಗು ದಾಸೋಹಮಠದ ಶ್ರೀ ಐಮಡಿ ಶರಣಾರ್ಯರು ಸಾನಿಧ್ಯ ವಹಿಸಿದ್ದರು. ವಿಶ್ವ ಕನ್ನಡ ಕಲಾ ಸಂಸ್ಥೆಯ ಅಧ್ಯಕ್ಷ ಡಾ.ಈ.ರವೀಶ ಪ್ರಾಸ್ತವಿಕವಾಗಿ ಮಾತನಾಡಿದರು. ಸಮ್ಮೇಳನ ಸರ್ವಾಧ್ಯಕ್ಷ ಡಾ. ಮಹೇಂದ್ರ ಕುರ್ಡಿ ಉದ್ಘಾಟಿಸಿದರು. ಚಿತ್ರದುರ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ವೀರೇಶ್, ಹಿರಿಯ ಸಾಹಿತಿ ಎನ್.ಎಂ. ರವಿಕುಮಾರ್, ಡಾ.ಬಸವರಾಜ, ಯು.ನಾಗೇಶ್, ಡಾ.ಸಿದ್ದಲಿಂಗಯ್ಯ ಹೊಲತಾಳ್, ಕಕ್ಕುಪ್ಪಿ ಬಸವರಾಜ್, ಕೆ.ಸಿ. ಹೊರಕೇರಪ್ಪ, ಭೀಮಣ್ಣ ಗಜಾಪುರ, ಚಿತ್ರದುರ್ಗದ ಆರ್. ಶೈಲಜಾಬಾಬು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ನಂತರ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕವಿಗಳಿಂದ ಕವಿತಾವಾಚನ ನಡೆಯಿತು. ನಂತರ ಸಾಂಸ್ಕ್ರುತಿಕ ಕಾರ್ಯಕ್ರಮಗಳು ನಡೆದವು. 18ಕೆ.ಡಿ.ಜಿ.2ವಿಶ್ವ ಕನ್ನಡ ಸಾಹಿತ್ಯ ಮತ್ತು ಪರಿಸರ ಜಾಗೃತಿ ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಮ್ಮೇಳನ ಸರ್ವಾಧ್ಯಕ್ಷ ಡಾ. ಮಹೇಂದ್ರ ಕುರ್ಡಿ ಉದ್ಘಾಟಿಸಿದರು.