ಕನ್ನಡಪ್ರಭ ವಾರ್ತೆ ಮಂಡ್ಯ
ರೈತರು ತಾವು ಬೆಳೆದ ಬೆಳೆಗಳಿಗೆ ಮಾರಾಟದ ಕಲೆ ಮತ್ತು ಆರ್ಥಿಕತೆಯನ್ನು ಅರ್ಥಮಾಡಿ ಕೊಂಡರೆ ಮಾತ್ರ ಕೃಷಿಯನ್ನು ಸುಸ್ಥಿರ ಗೊಳಿಸಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ತಿಳಿಸಿದರು.ನಗರದ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ೧ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಗ್ರ ಸಾವಯವ ಸುಸ್ಥಿರ ಕೃಷಿ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರ ರೈತ ಉತ್ಪಾದಕ ಕಂಪನಿಗಳನ್ನು ಪ್ರಾರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ಕಂಪನಿಗಳು ಪ್ರವರ್ಧಮಾನಕ್ಕೆ ಬರುತ್ತಿದೆ. ಶಕ್ತಿಯುತ ಕಂಪನಿಗಳು ಆಡಳಿತ ನಡೆಸುತ್ತಿವೆ. ರೈತರ ಬೆಳೆಗಳನ್ನು ಮಾರಾಟ ಮಾಡುವ ಬಗ್ಗೆ ಚರ್ಚೆಗಳು ಸಭೆ-ಸಮಾರಂಭಗಳು ನಡೆಯಬೇಕು. ಸಾವಯವ ಕೃಷಿಯಲ್ಲಿ ರೈತರು ಸಮಗ್ರ ಕೃಷಿ ಮಾಡಬೇಕು. ಪೌಷ್ಟಿಕ ಮಣ್ಣು ಯಶಸ್ವಿ ಬೇಸಾಯದ ಮೂಲಾಧಾರ. ಇದು ಸಾರಜನಕ, ರಂಜಕ, ಪೊಟಾಷಿಯಂ ಮತ್ತು ಇನ್ನಿತರ ಖನಿಜಗಳನ್ನು ಒಳಗೊಂಡಂತೆ ದೃಡವಾದ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಸಸ್ಯಗಳಿಗೆ ಒದಗಿಸುತ್ತದೆ ಎಂದರು.ಭಗವಾನ್ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಯಮದೂರು ಸಿದ್ದರಾಜು ಮಾತನಾಡಿ, ರೈತರು ಹೆಚ್ಚು ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಆಗಬೇಕು. ರೈತರು ತಾವು ಬೆಳೆದ ಬೆಳೆಗಳಿಗೆ ತಾವೇ ಬೆಲೆ ನಿರ್ಧಾರ ಮಾಡಬೇಕು. ರೈತರು ಆರ್ಥಿಕವಾಗಿ ಮುಂದೆ ಬಂದರೆ ಸಮಾಜದ ವ್ಯವಸ್ಥೆಯನ್ನು ಕಾಪಾಡಬಹುದು ಎಂದರು.
ರೈತರು ಮನೆಯ ಹಿತ್ತಲುಗಳಲ್ಲಿ ನುಗ್ಗೆ ಕಾಯಿ, ತರಕಾರಿ ಗಿಡಗಳನ್ನು ಬೆಳೆಯಬೇಕು. ಜನಸಂಖ್ಯೆ ಹೆಚ್ಚಾದಂತೆ ಅಷ್ಟೇ ಪ್ರಮಾಣದಲ್ಲಿ ಆಸ್ಪತ್ರೆಗಳು ಬರುತ್ತಿವೆ ಅಪೌಷ್ಟಿಕತೆ ಕೊರತೆಯಿಂದ ರೋಗಗಳು ಹೆಚ್ಚಾಗುತ್ತಿವೆ ಎಂದರು.ಸಮಗ್ರ ಕೃಷಿಕ ಬಿ.ರಾಧಾಕೃಷ್ಣ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ರೈತರು ಸಾವಯವ ಸುಸ್ಥಿರ ವ್ಯವಸಾಯ ಮಾಡಬೇಕು. ವಿಷ ಮುಕ್ತ ಆಹಾರ ಬದಲಾವಣೆ ಮಾಡಬೇಕು. ಮಿಶ್ರ ವ್ಯವಸಾಯಗಳಾದ ಕೋಳಿ, ಕುರಿ, ಮೀನು ಸಾಕಾಣೆ ಹಾಗೂ, ವಿಶಿಷ್ಟವಾದ ತರಕಾರಿಗಳನ್ನು ಬೆಳೆಯುವಂತೆ ಸಲಹೆ ನೀಡಿದರು.
ಸ್ವಾವಲಂಬಿ ಗ್ರಾಮದ ಪರಿಕಲ್ಪನೆ ಕುರಿತು ಸ್ವದೇಶಿ ಜಾಗರಣ ಮಂಚ್ ಸಂಘಟನಾ ಕಾರ್ಯದರ್ಶಿ ಕೆ. ಜಗದೀಶ್ ಮಾತನಾಡಿದರು. ನೈಸರ್ಗಿಕ ಹಾಗೂ ಪಾರಂಪರಿಕ ಕೃಷಿ ಕುರಿತು ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಬಿ.ಸಿ. ನವೀನ್ ಗೌಡ ಉಪನ್ಯಾಸ ನೀಡಿದರು.ಸಮಗ್ರ ಕೃಷಿ ಹಾಗೂ ಮಣ್ಣು ಪುನರ್‌ಚೇತನದ ಮಹತ್ವ ಕುರಿತು ಮೈಕ್ರೋಭಿ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಡಾ.ಕೆ.ಆರ್. ಹುಲ್ಲುನಾಚೇಗೌಡ ಉಪನ್ಯಾಸ ನೀಡಿದರು. ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್ ಅಧ್ಯಕ್ಷ ಜೋಗಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ಧರು. ಹಿರಿಯ ಸದಸ್ಯ ಹರಿಪ್ರಸಾದ್, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್. ಮಹೇಶ್ ಕುಮಾರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.