ಶಿರಸಿ: ಗೋವು, ಕೃಷಿಗೆ ಅವಿನಾಭಾವ ಸಂಬಂಧವಿದೆ. ಗೋ ಸಂಪತ್ತು ಇರುವರೆಗೂ ಕೃಷಿ ಸಮೃದ್ಧವಾಗಿರುತ್ತದೆ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನುಡಿದರು.
ಅವರು ತಾಲೂಕಿನ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಭವನದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಟಿ.ಎಸ್.ಎಸ್, ಟಿ.ಎಂ.ಎಸ್, ಗ್ರಾಮಾಭ್ಯುದಯ, ಜಾಗೃತ ವೇದಿಕೆ ಸೋಂದಾ ಸಹಯೋಗದಲ್ಲಿ ಹಮ್ಮಿಕೊಂಡ ಕೃಷಿ ಜಯಂತಿಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗೋಸಂಪತ್ತು ಕಡಿಮೆಯಾದರೆ ಕೃಷಿಯೂ ನಾಶವಾಗುತ್ತದೆ. ಸನಾತನ ಧರ್ಮದ ಪವಿತ್ರ ಸ್ಥಾನದಲ್ಲಿರುವ ಗೋವುಗಳ ರಕ್ಷಣೆಯಾಗಬೇಕಿದೆ. ಅನ್ನದಾನ ಶ್ರೇಷ್ಠ ದಾನ. ಅನ್ನದಾನ ಮೊದಲಿನ ಪುಣ್ಯ ಕೃಷಿಕನಿಗೆ ಹೋಗುತ್ತದೆ. ನೀರು, ಅನ್ನ ಮತ್ತು ಸುಭಾಷಿತ ಇವುಗಳು ರತ್ನಗಳು. ವಜ್ರ, ವೈಢೂರ್ಯಗಳನ್ನು ರತ್ನ ಎಂದುಕೊಂಡವರು ಮುರ್ಖರು ಎಂದರೂ ತಪ್ಪಾಗಲಾರದು. ಇಂತಹ ಶ್ರೇಷ್ಠ ಅನ್ನವನ್ನು ಬೆಳೆಯುವ ಕೃಷಿಕ. ಅನ್ನ ಬೆಳೆಯುವ ಅನ್ನದಾತನ್ನು ಗೌರವಿಸಿ, ಅವರಿಗೆ ಅನೂಕೂಲ ಮಾಡಿಕೊಡಬೇಕು. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ರೈತರಿಗೆ ಸಾಲ ಇರಲಿಲ್ಲ. ಈಗ ಮೈತುಂಬ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಧ್ಯವಾಗದೇ ಸಾಲಮನ್ನಾ ಮಾಡಲು ಸರ್ಕಾರದ ಕಡೆ ಮುಖ ಮಾಡಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ವರ್ಣವಲ್ಲೀ ಶ್ರೀಗಳು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ಕಾಡು ಈ ಭಾಗದ ಜನರ ಸೌಂದರ್ಯ ಹಾಗೂ ಉಸಿರು. ಅದನ್ನು ಉಳಿಸಲು ಶ್ರೀಗಳು ಹೋರಾಟ ಮಾಡಿದ್ದಾರೆ. ನರಸಿಂಹ ಜಯಂತಿ ದಿನದಂದು ಕೃಷಿ ಜಯಂತಿ ಆಚರಿಸಿ, ಕೃಷಿಕರನ್ನು ಉದ್ಧರಿಸಲು ಶ್ರೀಗಳ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಕೃಷಿಕರ ಮಕ್ಕಳು ಎಂಜಿನಿಯರ್ ಸೇರಿದಂತೆ ಇನ್ನಿತರ ಉದ್ಯೋಗದತ್ತ ತೆರಳುತ್ತಿರುವುದರಿಂದ ಕೃಷಿ ಕುಸಿಯುತ್ತಿದೆ. ಅನಾಧರತ್ವದಿಂದ ತನ್ನನ್ನು ತಾನು ಉದ್ಧರಿಕೊಳ್ಳಲು ಸಾಧ್ಯವಿಲ್ಲ. ಕೃಷಿಯಲ್ಲಿನ ಅವಿಶ್ವಾಸವೇ ಕುಸಿತಕ್ಕೆ ಮೂಲ ಕಾರಣ. ಅವರಿಗೆ ಉತ್ಸಾಹ ತುಂಬಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷವನ್ನು ಗೌರವ ನ್ಯಾಯಮೂರ್ತಿ ಚಂದ್ರಶೇಖರ ಜೋಶಿ ಬಿಡುಗಡೆಗೊಳಿಸಿ, ಮಾತನಾಡಿ, ವ್ಯಕ್ತಿ ಮತ್ತು ಸಮಷ್ಠಿಯ ನಡುವಿನ ಸಂಬಂಧ ನಾವು ಗಮನಿಸಬೇಕು. ಪರಿಸರದಿಂದ ನಮಗೆ ಎಷ್ಟು ಬೇಕೋ ಅದನ್ನು ಪಡೆಯುವುದಕ್ಕೆ ಮಾತ್ರ ನಾವು ಅರ್ಹರು. ಪರಿಸರವನ್ನು ಲಾಭಕ್ಕಾಗಿ ಬಳಸಿಕೊಂಡಾಗ ಸಮಸ್ಯೆ ಎದುರಾಗುತ್ತದೆ. ಬೆಟ್ಟವೂ ಹಾಗೆಯೇ ಅಗಿದೆ. ತೋಟದ ಅಭಿವೃದ್ಧಿಗಿ ಬೆಟ್ಟ ಭೂಮಿ ಇರುವುದು. ಬೆಟ್ಟದ ಮೇಲೆ ಮಾಲಿಕತ್ವದ ಹಕ್ಕು ನಮಗಿಲ್ಲ. ಅದನ್ನು ಉಪಯೋಗಿಸುವ ಹಕ್ಕು ಮಾತ್ರ ನಮಗಿದೆ. ತೋಟ ಇದ್ದವರೂ ಮಾತ್ರ ಅದನ್ನು ಬಳಕೆ ಮಾಡಬೇಕು. ತೋಟದ ಜತೆ ಬೆಟ್ಟ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಎಲೆಚುಕ್ಕೆ ರೋಗ ತಡೆಗಟ್ಟಲು ೨ ಮೂರು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇನೆ. ಎಲೆಚುಕ್ಕು ಹಳೆ ರೋಗವಾಗಿದೆ. ಮಣ್ಣಿನ ಸತ್ವ ಹಾಳು ಮಾಡಿದ್ದೇವೆ. ಅನ್ನ, ಆಹಾರ, ತರಕಾರಿ, ಹಣ್ಣುಗಳು ವಿಷಮಯವಾಗಿದೆ. ಅಡಕೆಮರ ರೋಗವನ್ನು ತಡೆದುಕೊಳ್ಳುವುದನ್ನು ಕಳೆದುಕೊಂಡಿದೆ ಎಂದರು.
ಆನಂದಬೊಧೇಂದ್ರ ಸರಸ್ವತೀ ಶ್ರೀ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಉಪಸ್ಥಿತರಿದ್ದರು. ರಾಜರಾಜೇಶ್ವರಿ ಪಾಠಶಾಲಾ ವಿದ್ಯಾರ್ಥಿಗಳು ವೇದ ಘೋಷ ಹಾಡಿದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯದರ್ಶಿ ಸುರೇಶ ಹೆಗಡೆ ಹಕ್ಕಿಮನೆ ನಿರೂಪಿಸಿದರು. ಹುಳಗೋಳ ಮಾತೆಯರು ಪ್ರಾರ್ಥಿಸಿದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ ಸ್ವಾಗತಿಸಿದರು. ಡಾ.ಜಿ.ವಿ.ಹೆಗಡೆ ಹುಳಗೋಳ ವಂದಿಸಿದರು.