ಸ್ವಾಭಿಮಾನ ಕೆಣಕದೇ ಚುನಾವಣೆಗೆ ಮುಂದಾಗಿ: ಅಂಬರೀಷ್ ಅಭಿಮಾನಿ ಸಂಘದ ಸುದ್ದಿಗೋಷ್ಠಿ

KannadaprabhaNewsNetwork | Published : Mar 17, 2024 1:45 AM

ಸಾರಾಂಶ

ಇವರಿಗೆ ಸ್ವಾಭಿಮಾನಿ ಜನ ಒಳ್ಳೆಯ ಉತ್ತರ ಕೊಟ್ಟು ಬುದ್ಧಿ ಕಲಿಸುತ್ತಾರೆ. ನಮಗೆ ಅಂಬರೀಷ್ ಸ್ವಾಭಿಮಾನದ ಸಂಕೇತ. ಅವರ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಅಂಬರೀಷ್ ಅಭಿಮಾನಿಗಳು ಸುಮ್ಮನೆ ಕೂರುವುದಿಲ್ಲ. ರಾಜಕೀಯ ತೀರ್ಮಾನದ ಜೊತೆಗೆ ಸಂಬಂಧವೂ ಚೆನ್ನಾಗಿರಬೇಕು. ನಾವು ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ .

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಾಭಿಮಾನವನ್ನು ಕೆಣಕುವುದು ಬಿಟ್ಟು ವಿಷಯಾಧಾರಿತ ಚುನಾವಣೆಗೆ ಮುಂದಾಗುವಂತೆ ಜೆಡಿಎಸ್ ನಾಯಕರಿಗೆ ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ಜೆಡಿಎಸ್ ಸಭೆಯಲ್ಲಿ ಅಂಬರೀಷ್ ಅವರ ಮೃತ ದೇಹವನ್ನು ಮಂಡ್ಯಕ್ಕೆ ತಂದಿದ್ದೇ ತಪ್ಪು. ಅದೇ ನಿಮ್ಮ ಮಗನ ಸೋಲಿಗೆ ಕಾರಣ ಎಂಬಂತೆ ಮಾತನಾಡಿದ ಜೆಡಿಎಸ್ ಹಿರಿಯ ನಾಯಕ ಜಿ.ಟಿ.ದೇವೇಗೌಡ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಜೆಡಿಎಸ್ ಕಾರ್ಯಕರ್ತರು ಅಂಬರೀಷ್ ಬಗ್ಗೆ ಆಡುತ್ತಿರುವ ಮಾತು ನಿಲ್ಲಿಸಿ ಎಂದು ಕೂಗಿ ಹೇಳುತ್ತಿದ್ದರೂ ಮುಂದುವರೆದು ಮಾತನಾಡಿದ್ದು ನೋಡಿದರೆ ದುರುದ್ದೇಶದಿಂದ ಇಲ್ಲವೇ, ಉದ್ದೇಶ ಪೂರ್ವಕವಾಗಿ ಹೇಳಿದಂತೆ ಕಾಣುತ್ತದೆ ಎಂದು ಆರೋಪಿಸಿದರು.

ಇವರಿಗೆ ಸ್ವಾಭಿಮಾನಿ ಜನ ಒಳ್ಳೆಯ ಉತ್ತರ ಕೊಟ್ಟು ಬುದ್ಧಿ ಕಲಿಸುತ್ತಾರೆ. ನಮಗೆ ಅಂಬರೀಷ್ ಸ್ವಾಭಿಮಾನದ ಸಂಕೇತ. ಅವರ ಸ್ವಾಭಿಮಾನಕ್ಕೆ ಧಕ್ಕೆ ಆದರೆ ಅಂಬರೀಷ್ ಅಭಿಮಾನಿಗಳು ಸುಮ್ಮನೆ ಕೂರುವುದಿಲ್ಲ. ರಾಜಕೀಯ ತೀರ್ಮಾನದ ಜೊತೆಗೆ ಸಂಬಂಧವೂ ಚೆನ್ನಾಗಿರಬೇಕು. ನಾವು ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದರು.

ಮಹಿಳಾ ರಾಜಕಾರಣಿಯಾಗಿ ಸುಮಲತಾ ಪ್ರಬುದ್ಧವಾಗಿ ಹೊರ ಹೊಮ್ಮುತ್ತಿರುವುದನ್ನು ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.

ಎಚ್.ಡಿ.ಕುಮಾರಸ್ವಾಮಿಯವರು ಈ ಹಿಂದೆ ಸುಮಲತಾರವರು ಬಿಜೆಪಿ ಬೆಂಬಲಿಸಿದಾಗ ಮಂಡ್ಯ ಜಿಲ್ಲೆಯ ಸ್ವಾಭಿಮಾನ ಅಮಿತ್ ಷಾ ಕಾಲಕೆಳಗೆ ಹೋಯಿತು ಅಂದಿದ್ದರು. ಈಗ ಸ್ವತಃ ನೀವೇ ಅಮಿತ್ ಷಾ ಬಳಿ ಹೋಗಿದ್ದೀರಲ್ಲಾ ಎಂದು ವ್ಯಂಗ್ಯವಾಡಿದರು.

ದಯವಿಟ್ಟು ವಿಷಯಾಧಾರಿತ ಚುನಾವಣೆಗೆ ಮುಂದಾಗಿ, ದೇಶಕ್ಕಾಗಿ ಮೋದಿಗಾಗಿ ಬದಲಾಗಿ, ವಿಶಾಲ ಮನೋಭಾವದೊಂದಿಗೆ ಮೈತ್ರಿ ಧರ್ಮ ಪಾಲಿಸಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಂಬರೀಷ್ ಅಭಿಮಾನಿಗಳಾದ ಕಾರ್ತಿಕ್, ಶ್ರೀನಿವಾಸ್, ದಾಸಣ್ಣ, ಚನ್ನೇಗೌಡ, ಸುರೇಶ್ ಹಾಜರಿದ್ದರು.

Share this article