ಅಂಗನವಾಡಿ ನೌಕರರಿಂದ ಅಹೋರಾತ್ರಿ ಧರಣಿ

KannadaprabhaNewsNetwork | Published : Dec 19, 2024 1:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಅಂಗನವಾಡಿ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮುಷ್ಕರ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಅಂಗನವಾಡಿ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಮುಷ್ಕರ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಷ್ಕರ ಬೆಂಬಲಿಸಿ ಸಿಐಟಿಯು ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ ೫೦ ವರ್ಷಗಳು ಸಮೀಪಿಸುತ್ತಿದೆ. ಪಾಲನೆ, ಪೋಷಣೆ, ಶಿಕ್ಷಣ ಸಂವಿಧಾನ ಬದ್ಧ ಕರ್ತವ್ಯಗಳಿವೆ. ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್‌ಗಳು ಅವರನ್ನು ೩ ಮತ್ತು ೪ ಗ್ರೇಡ್‌ನ ನೌಕರರನ್ನಾಗಿ ಪರಿಗಣಿಸಲು ಜಂಟಿ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಬೇಕೆಂದೂ ತೀರ್ಪು ನೀಡಿದೆ. ಅಲ್ಲದೇ, ಸುಪ್ರೀಂ ಕೋರ್ಟ್ ೧೯೭೨ ಗ್ರಾಚ್ಯುವಿಟಿ ಪಾವತಿ ಕಾಯ್ದೆಯಡಿ ಅರ್ಹರೆಂದೂ ತೀರ್ಪು ನೀಡಿದೆ. ದೇಶದ ಅಭಿವೃದ್ಧಿಗೆ ಪೂರಕವಾದ ಮಾನವ ಸಂಪನ್ಮೂಲಗಳನ್ನು ಅಪೌಷ್ಠಿಕತೆ, ಅಂಗವೈಕಲ್ಯತೆಗಳಿಂದ ಕಾಪಾಡಿ ಮಾನಸಿಕ ಮತ್ತು ದೈಹಿಕವಾಗಿ ಬೆಳಿಸಿ ಮಾನವ ಸಮಾಜದ ಪುನರುತ್ಪಾದನೆಗೆ ಕೊಡುಗೆ ಕೊಡುತ್ತಿರುವ ICDSಯನ್ನು ಯೋಜನೆಯನ್ನಾಗಿಯೇ ೪೯ ವರ್ಷಗಳ ನಂತರವೂ ಉಳಿಸಿಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲಹೀನಗೊಳಿಸಲು ಶಿಕ್ಷಣ ಇಲಾಖೆ ೪ ವರ್ಷದ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸಲು ಬೇರೆ ಬೇರೆ ಸ್ವರೂಪಗಳಲ್ಲಿ ಪ್ರಯತ್ನಿಸುತ್ತಿದೆ. ಇದಕ್ಕೆ ಇಲಾಖೆ ತಡೆಹಾಕಿ ಅಂಗನವಾಡಿ ಕೇಂದ್ರಗಳನ್ನು ಪೂರ್ವ ಪ್ರಾರ್ಥಮಿಕ ಶಿಕ್ಷಣ ಕೇಂದ್ರಗಳಾಗಿ ಪರಿವರ್ತಿಸಲು ತೀರ್ಮಾನಿಸಿದೆ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ಆದರೆ, ಇದಕ್ಕೆ ಬೇಕಾದ ಹಣಕಾಸನ್ನು ಬಿಡುಗಡೆಗೊಳಿಸಿ, ಇದರ ಮೇಲ್ವಿಚಾರಣೆಗೆ ICDS ಪ್ರತ್ಯೇಕ ನಿರ್ದೆಶನಾಲಯ ಮಾಡಿದರೆ ಮಾತ್ರವೇ ಈ ತೀರ್ಮಾನಗಳನ್ನು ಪುಷ್ಟೀಕರಿಸಿದಂತಾಗುತ್ತದೆ ಎಂದರು.

ಜಿಲ್ಲಾ ಗೌರವಾಧ್ಯಕ್ಷೆ ಭಾರತಿ ವಾಲಿ ಮಾತನಾಡಿ, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಕೇಂದ್ರಗಳ ಬಾಡಿಗೆ ಹಣ ಪ್ರತಿ ತಿಂಗಳು ತೆಗೆಯಬೇಕು. ಗ್ಯಾಸ್ ಸಿಲಿಂಡರ್ ಹಣ ಖಾತೆಗೆ ಹಾಕುವ ಬದಲು ನೇರವಾಗಿ ಸಿಲಿಂಡರ್‌ಗಳು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಬೇಕು. ಮೊಟ್ಟೆ ಹಣ ಬೆಲೆ ಏರಿಕೆ ಅನುಸಾರವಾಗಿ ಬಿಲ್ ಜಮಾ ಮಾಡುವುದು ಸೇರಿದಂತೆ ಇನ್ನು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ತಳವಾರ ಮಾತನಾಡಿದರು. ಈ ಸಂದರ್ಭದಲ್ಲಿ ಸುರೇಶ ಜೀಬಿ, ರೈತ ಮುಖಂಡರಾದ ಭೀಮರಾಯ ಪೂಜಾರಿ, ಜಿಲ್ಲಾ ಖಜಾಂಚಿ ಪ್ರತಿಭಾ ಕುರಡೆ, ಸಿಂದಗಿ ತಾಲೂಕಾಧ್ಯಕ್ಷೆ ಸರಸ್ವತಿ ಮಠ, ವಿಜಯಪು ತಾಲೂಕಾ ಕಾರ್ಯದರ್ಶಿ ಸುವರ್ಣಾ ಹಲಗಲಿ, ಇಂಡಿ ತಾಲೂಕಾ ಕಾರ್ಯದರ್ಶಿ ಗಿರಿಜಾ ಸಕ್ರಿ, ಚಡಚಣ ತಾಲೂಕಾ ಕಾರ್ಯದರ್ಶಿ ಶೋಭಾ ಕಬಾಡೆ, ಬ.ಬಾಗೇವಾಡಿ ತಾಲೂಕಾ ಅಧ್ಯಕ್ಷೆ ವಿಜಯಲಕ್ಷ್ಮೀ ಹಿಪ್ಪರಗಿ, ಬ.ಬಾಗೇವಾಡಿ ಕಾರ್ಯದರ್ಶಿ ಚೌಡಮ್ಮ ಕಡಕೋಳಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this article