ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಎಐ(ಕೃತಕ ಬುದ್ದಿಮತ್ತೆ) ತಂತ್ರಜ್ಞಾನಕ್ಕೆ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ಎಐ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವಂತಾಗಬೇಕು ಎಂದು ಹೊಸದೆಹಲಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಕಾರ್ಯದರ್ಶಿ ಪ್ರೊ.ಮನೀಶ್ ಜೋಶಿ ಹೇಳಿದರು.
ಇಲ್ಲಿನ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಬಿವಿಬಿ ಕಾಲೇಜ್ ಕ್ಯಾಂಪಸ್ ಸಿ-ಲೈಟ್ ಕಟ್ಟಡದಲ್ಲಿ ಶನಿವಾರ ನಡೆದ ಆರ್ಟಿಫಿಶಿಯಲ್ ಇಂಟಲಿಜನ್ಸ್ (ಎಐ)ಸಂಶೋಧನಾ ಕೇಂದ್ರ (ಸಿಎಐಆರ್-ಲ್ಯಾಬ್) ಉದ್ಘಾಟಿಸಿ ಮಾತನಾಡಿದರು.ಎಐ ತಂತ್ರಜ್ಞಾನದ ಕ್ಷೇತ್ರದಲ್ಲಿ ಹಲವಾರು ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಉದ್ಯೋಗಾವಕಾಶ ಪಡೆಯಬೇಕು ಎಂದರು.
ಯಾವುದೇ ಒಂದು ವಸ್ತು ಮತ್ತು ಸೇವೆಯನ್ನು ಹೇಗೆ ಇನೋವೆಟಿವ್ ಆಗಿ ಬಳಸಬಹುದು ಎಂಬುದನ್ನು ಎಐ ತಂತ್ರಜ್ಞಾನ ಅದ್ಭುತವಾಗಿ ತಿಳಿಸಿಕೊಡುತ್ತದೆ. ಎಲ್ಲಿಯೂ ದೂರದ ಪ್ರದೇಶದಲ್ಲಿರುವ ಮಾವಿನ ಹಣ್ಣಿನ ಸುವಾಸನೆಯನ್ನು ಇನ್ನೇಲ್ಲಿಯೂ ಕುಳಿತು ಪಡೆಯುವಂತಹ ತಂತ್ರಜ್ಞಾನದ ಕ್ರಾಂತಿ ಐಐ ಹಾಗೂ ಜಿಪಿಟಿಯಲ್ಲಿ ಆಗಿದೆ ಎಂದರು.ದೇಶದಲ್ಲಿ ಲಕ್ಷಾಂತರ ಸ್ಟಾರ್ಟ್ಅಪ್ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಗೆ ಎಐ ತಂತ್ರಜ್ಞಾನ ಬಹಳಷ್ಟು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕೇವಲ ತಂತ್ರಜ್ಞಾನದ ಬೆನ್ನು ಹತ್ತದೆ ಅದರ ಜತೆಗೆ ನೈತಿಕ ಮೌಲ್ಯ ಹಾಗೂ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡಲ್ಲಿ ಉತ್ತಮ ಸಾಧನೆ ಸಾಧ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಭಾಕರ್ ಕೋರೆ ಮಾತನಾಡಿ, ಕೆಎಲ್ಇ ತಾಂತ್ರಿಕ ವಿವಿ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ₹24 ಕೋಟಿ ವೆಚ್ಚದ ಎಐ ಲ್ಯಾಬ್ನ್ನು ಸ್ಥಾಪಿಸುತ್ತಿರುವುದು ಹೆಮ್ಮೆಯ ಸಂಗತಿ. ಹಲವಾರು ಮಹಾನ ಶಿಕ್ಷಣ ತಜ್ಞರ ಪರಿಶ್ರಮ ಹಾಗೂ ದಾನಿಗಳ ಸಹಾಯದಿಂದ ಆರಂಭವಾದ ಕೆಎಲ್ಇ ಶಿಕ್ಷಣ ಸಂಸ್ಥೆಯೂ ರಾಜ್ಯಾದ್ಯಂತ 311 ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ ಎಂದರು.ಚಾನ್ಸಲರ್ ಡಾ. ಅಶೋಕ ಶೆಟ್ಟರ್ ಹಾಗೂ ಉಪಕುಲಪತಿ ಡಾ. ಪ್ರಕಾಶ ತಿವಾರಿ ಮಾತನಾಡಿ, ಬೆಳೆಯುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಹೇಗೆಲ್ಲ ಸಹಕಾರಿಯಾಗಿದೆ ಎಂಬುದನ್ನು ವಿವರಿಸಿದರು.
ಬಳಿಕ ಹೊಸದೆಹಲಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಕಾರ್ಯದರ್ಶಿ ಪ್ರೊ. ಮನೀಶ್ ಜೋಶಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ರಜಿಸ್ಟ್ರಾರ್ ಡಾ.ಬಸವರಾಜ ಅನಾಮಿ, ತಾಂತ್ರಿಕ ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ಯಾಕಲ್ಟಿಡೀನ್ ಡಾ.ಮೀನಾ ಮರಳಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.