ಜಿಲ್ಲೆಗೆ ಏಮ್ಸ್ ವಾರದ ಗಡವು, ದೆಹಲಿಯಲ್ಲಿ ಧರಣಿ ಎಚ್ಚರಿಕೆ

KannadaprabhaNewsNetwork | Published : Feb 21, 2024 2:03 AM

ಸಾರಾಂಶ

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಆಗ್ರಹಿಸಿ ಕಳೆದ 649 ದಿನಗಳಿಂದ ಜಿಲ್ಲಾ ಮಹತ್ಮಾಗಾಂಧಿ ಕ್ರೀಡಾಂಗಣದ ಬಳಿ ಧರಣಿ ನಡೆಸಲಾಗುತ್ತಿದೆ.

ರಾಯಚೂರು:

ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಆಗ್ರಹಿಸಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಒಂದು ವಾರದ ಒಳಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಏಮ್ಸ್ ನಿಯೋಗ ಕರೆದೊಯ್ಯಬೇಕು. ಇಲ್ಲದಿದ್ದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಾಗುವುದು ಎಂದು ರಾಯಚೂರು ಏಮ್ಸ್ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ ಕಳಸ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಆಗ್ರಹಿಸಿ ಕಳೆದ 649 ದಿನಗಳಿಂದ ಜಿಲ್ಲಾ ಮಹತ್ಮಾಗಾಂಧಿ ಕ್ರೀಡಾಂಗಣದ ಬಳಿ ಧರಣಿ ನಡೆಸಲಾಗುತ್ತಿದೆ. ಕೇಂದ್ರ ಬಜೆಟ್ ಮಂಡಿಸುವ ಮುಂಚೆಯೇ ವಿತ್ತ ಸಚಿವರಿಗೆ ಭೇಟಿ ಮಾಡಿ ಏಮ್ಸ್ ಬೇಡಿಕೆ ಇಡಲು ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಏಮ್ಸ್ ವಿಚಾರದಲ್ಲಿ ಸಂಸದರು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಎಡವಿದ್ದು, ಇದೇ ಫೆ.26 ಒಳಗೆ ಕೇಂದ್ರ ಸಚಿವರಿಗೆ ಭೇಟಿ ಮಾಡಿಸದಿದ್ದಲ್ಲಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿ ನಡೆಯುವ ಹೋರಾಟದಲ್ಲಿ ಜಿಲ್ಲೆಯ 7 ತಾಲೂಕಿನಿಂದ 100 ಜನ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರ ಬೆಂಬಲ ಕೋರಿದ್ದೇವೆ. ಏಮ್ಸ್‌ಗಾಗಿ ಕಾನೂನು ಹೋರಾಟದ ಬಗ್ಗೆ ಸುಪ್ರಿಂಕೋರ್ಟ್ ವಿಶ್ರಾಂತ ನ್ಯಾಯಾಧೀಶ ಡಾ.ಶಿವರಾಜ ಪಾಟೀಲರ ಜೊತೆ ಚರ್ಚೆ ನಡೆಸಲಾಗಿದೆ. ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಎನ್.ಮಹಾವೀರ, ಎಸ್.ಎಸ್ ಪಾಟೀಲ್, ಶ್ಯಾಮಲಾ, ರಮೇಶರಾವ್ ಕಲ್ಲೂರ್ ಕರ್, ಸುಲೋಚನಾ, ವಿನಯ ಚಿತ್ರಕಾರ್ ಇದ್ದರು.

Share this article